ಸಾಲಮನ್ನಾ ದುಸ್ಸಾಹಸಕ್ಕೆ ಕೈ ಹಾಕೋಲ್ಲ: ವಿಧಾನ ಪರಿಷತ್ ಸದಸ್ಯ ಎಸ್.ರವಿ

7

ಸಾಲಮನ್ನಾ ದುಸ್ಸಾಹಸಕ್ಕೆ ಕೈ ಹಾಕೋಲ್ಲ: ವಿಧಾನ ಪರಿಷತ್ ಸದಸ್ಯ ಎಸ್.ರವಿ

Published:
Updated:
Deccan Herald

ದೊಡ್ಡಬಳ್ಳಾಪುರ: ರಾಜ್ಯ ಬಜೆಟ್‌ನ ಬಹುಪಾಲು ನುಂಗುವ ಸಾಲಮನ್ನಾ ಯೋಜನೆಯಂತಹ ದುಸ್ಸಾಹಸಕ್ಕೆ ಮುಂದೆ ಯಾರೂ ಕೈಹಾಕುವುದಿಲ್ಲ ಎಂದು ಬಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ರವಿ ಅಭಿಪ್ರಾಯಪಟ್ಟರು.

ನಗರದ ರುಮಾಲೆ ವೃತ್ತದ ಬಳಿಯ ಬಿ.ಡಿ.ಸಿ.ಸಿ ಬ್ಯಾಂಕ್‌ ಆವರಣದಲ್ಲಿ ನೂತನ ಎ.ಟಿ.ಎಂ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಸುಮಾರು ₹2.13ಲಕ್ಷ ಕೋಟಿ ಬಜೆಟ್‌ನಲ್ಲಿ ಸುಮಾರು ₹42 ಸಾವಿರ ಕೋಟಿ ಸಾಲ ಮನ್ನಾಗೆ ವ್ಯಯವಾಗಲಿದೆ. ಇದೇ ಬಜೆಟ್‌ನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳೂ ಆಗಬೇಕಿದೆ. ವಿವಿಧ ಮಸಾಶನ, ಸರ್ಕಾರಿ ನೌಕರರ ಸಂಬಳ ಎಲ್ಲವೂ ಸೀಮಿತ ಬಜೆಟ್ ಹಣದಲ್ಲಿಯೇ ಮಾಡಬೇಕಿದೆ ಎಂದರು.

ಬಿಜೆಪಿ ಅಧಿಕಾರದ ರಾಜ್ಯಗಳಲ್ಲಿಯೇ ಇನ್ನೂ ಸಾಲಮನ್ನಾ ಮಾಡಲು ಮೀನಮೇಷ ಎಣಿಸಲಾಗುತ್ತಿದೆ. ಆದರೆ, ಇಲ್ಲಿ ಸಾಲಮನ್ನಾ ವಿಚಾರ ಟೀಕಿಸಲು ಬಿಜೆಪಿಗೆ ಯಾವುದೇ ನೈತಿಕತೆಯಿಲ್ಲ. ಆರ್ಥಿಕ ಸಂಕಷ್ಟಕ್ಕೆ ದೂಡುವ ಇಂತಹ ಯೋಜನೆಗಳು ಬಹುಶಃ ಇದೇ ಕೊನೆಯಾಗಲಿದೆ. ಸ್ತ್ರೀಶಕ್ತಿ ಸಂಘಗಳಿಗೆ ಯಾವುದೇ ಕಾರಣಕ್ಕೂ ಸಾಲಮನ್ನಾ ಆಗುವುದಿಲ್ಲ ಎಂದರು.

ಬಿ.ಡಿ.ಸಿ.ಸಿ ಬ್ಯಾಂಕ್ ಸದೃಢ: ದಶಕದ ಹಿಂದೆ ಆಡಳಿತ ವೈಫಲ್ಯದಿಂದಾಗಿ ಕಳಂಕ ಹೊಂದಿದ್ದ ಬಿ.ಡಿ.ಸಿ.ಸಿ ಬ್ಯಾಂಕ್ ಈಗ ಸದೃಢವಾಗಿದೆ. ಖಾಸಗಿ ಬ್ಯಾಂಕ್‌ಗಳು ನೀಡುವ ಎಲ್ಲಾ ರೀತಿಯ ಸೌಲಭ್ಯ ನೀಡಲಾಗುತ್ತಿದೆ. ಬೆಳೆ ಸಾಲವಷ್ಟೇ ಅಲ್ಲದೇ ಚಿನ್ನಾಭರಣ ಸಾಲ, ಮನೆ ಸಾಲ ನೀಡುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದಿದ್ದ ಸ್ತ್ರೀ ಶಕ್ತಿ ಸಂಘಗಳಿಗೆ ಶೂನ್ಯ ದರದಲ್ಲಿ ಬಡ್ಡಿ ನೀಡುವ ಹೊಸ ಯೋಜನೆ ಶೀಘ್ರವೇ ಜಾರಿಯಾಗಲಿದೆ. ಈ ಸಾಲಿನಲ್ಲಿ ಶೇ 1.5 ಡಿವಿಡೆಂಡ್ ನೀಡಲಾಗುತ್ತಿದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಶ್ರೀವತ್ಸ ಮಾತನಾಡಿ, ಸಾಲಮನ್ನಾ ಕುರಿತ ಸೂಚನೆ ಇನ್ನೂ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟವಾಗಿಲ್ಲ. ಸಾಲ‌ಮನ್ನಾದ ಬಗ್ಗೆ ರೈತರಿಗೆ ಇರುವ ಗೊಂದಲ ಶೀಘ್ರವೇ ಸರಿಪಡಿಸಬೇಕಿದೆ ಎಂದರು.

ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಮಾತನಾಡಿ, ಬಿ.ಡಿ.ಸಿ.ಸಿ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಬ್ಯಾಂಕ್ ಆಗಿರುವುದು ಅಭಿನಂದನೀಯ. ಬ್ಯಾಂಕ್‌ಗೆ ವಾಹನ ನಿಲುಗಡೆಗೆ ನಗರಸಭೆ ನಿವೇಶನ ನೀಡುವ ಕುರಿತು ಮನವಿ ಪತ್ರ ನೀಡಿದರೆ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಬಿ.ಡಿ.ಸಿ.ಸಿ ಬ್ಯಾಂಕ್‌ನ ಉಪಾಧ್ಯಕ್ಷ ರವೀಶಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿ.ಡಿ.ಸಿ.ಸಿ ಬ್ಯಾಂಕ್‌ನ ನಿರ್ದೇಶಕ ಜಿ. ಚುಂಚೇಗೌಡ, ನಿರ್ದೇಶಕ ಎಸ್‌.ಎಲ್‌.ವೆಂಕಟೇಶಬಾಬು, ಸೊಣ್ಣಪ್ಪ, ಮಾಜಿ ನಿರ್ದೇಶಕರಾದ ಜಿ.ಎಂ.ಚೆನ್ನಪ್ಪ, ಎ.ನರಸಿಂಹಯ್ಯ, ವಿ.ಆಂಜಿನಪ್ಪ, ಟಿಎಪಿಎಂಸಿ ಅಧ್ಯಕ್ಷ ಬಿ.ಅಶ್ವತ್ಥನಾರಾಯಣ, ಕಾರ್ಯದರ್ಶಿ ಎಚ್‌.ಆನಂದರಾಮಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು, ಬ್ಯಾಂಕ್‌ನ ವ್ಯವಸ್ಥಾಪಕ ಪಿ.ಎಸ್. ರಮೇಶ್, ಮೇಲ್ವಿಚಾರಕದಾರ ಕೆ.ಜಿ. ರಮೇಶ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !