ಭಾನುವಾರ, ಸೆಪ್ಟೆಂಬರ್ 22, 2019
25 °C

‘ದಲಿತರ ದೌರ್ಜನ್ಯ; ಶಿಕ್ಷೆ ಅಗತ್ಯ’

Published:
Updated:
Prajavani

ವಿಜಯಪುರ: ಕ್ಷುಲ್ಲಕ ಕಾರಣಗಳನ್ನು ನೆಪಮಾಡಿಕೊಂಡು ದಲಿತರ ಮೇಲೆ ದೌರ್ಜನ್ಯ ಎಸಗುವಂತಹ ವ್ಯಕ್ತಿಗಳಿಗೆ ಕಾನೂನು ಅಡಿಯಲ್ಲಿ ಶಿಕ್ಷೆಗೆ ಒಳಪಡಿಸಬೇಕು. ದೌರ್ಜನ್ಯಕ್ಕೆ ಒಳಗಾಗಿರುವವರಿಗೆ ತಲಾ ₹ 10 ಲಕ್ಷ ಪರಿಹಾರ ವಿತರಿಸಬೇಕು ಎಂದು ಭಾರತ ಜನಜಾಗೃತಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿ.ಮುನಿಯಪ್ಪ ಒತ್ತಾಯಿಸಿದರು.

ಇಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ನೆಲಮಂಗಲ ತಾಲ್ಲೂಕು ಕಾಚನಹಳ್ಳಿಯಲ್ಲಿ ಒತ್ತಾಯಪೂರ್ವಕವಾಗಿ ತಳವಾರಿಕೆ ಮಾಡಬೇಕು ಎಂದು ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ. ಇಂತಹ ಘಟನೆಗಳು ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಲೇ ಇದ್ದರೂ ಇದುವರೆಗೂ ದೌರ್ಜನ್ಯಕ್ಕೆ ಒಳಗಾಗಿರುವ ಒಂದು ಕುಟುಂಬಕ್ಕೂ ನ್ಯಾಯ ಸಿಕ್ಕಿಲ್ಲ. ಅಧಿಕಾರಿಗಳು ಹೋಗಿ ಶಾಂತಿ ಸಭೆಗಳು ನಡೆಸಿದ ಮಾತ್ರಕ್ಕೆ ದಲಿತರ ಮೇಲಿನ ದೌರ್ಜನ್ಯಗಳು ಕಡಿಮೆಯಾಗಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾದಾಗ ಮಾತ್ರವೇ ದೌರ್ಜನ್ಯಗಳು ಕಡಿಮೆಯಾಗುತ್ತವೆ. ಮುಖ್ಯಮಂತ್ರಿ ಗ್ರಾಮಕ್ಕೆ ಬೇಟಿ ಕೊಡಬೇಕು’ ಎಂದರು.

ಭಾರತೀಯ ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿಯ ರಾಜ್ಯಘಟಕದ ಅಧ್ಯಕ್ಷ ಹೊಸ್ಕೊಟೆ ಶ್ರೀನಿವಾಸ್ ಮಾತನಾಡಿ, ‘ಜಿಲ್ಲೆಯಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಕಂಬಾಲಪಲ್ಲಿಯ ಘಟನೆಯನ್ನು ಪದೇ ಪದೇ ನೆನಪಿಸುವಂತಿವೆ. ದೌರ್ಜನ್ಯ ನಡೆಸಿದವರು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ಹಳ್ಳಿಗಳಲ್ಲಿ ಬಲಿಷ್ಠರಾಗಿರವವರ ಪ್ರಭಾವಕ್ಕೆ ಒಳಗಾಗುತ್ತಿರುವ ಕೆಲ ಅಧಿಕಾರಿಗಳು ಮಾಡುತ್ತಿರುವ ಲೋಪದೋಷಗಳಿಂದಲೇ ಇಂದು ದೌರ್ಜನ್ಯಗಳು ನಡೆಯುತ್ತಿವೆ’ ಎಂದು ಒತ್ತಾಯಿಸಿದರು.

ಭಾರತ ಜನಜಾಗೃತಿ ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ದೊಡ್ಡಕುರುಬರಹಳ್ಳಿ ನಾಗರಾಜ್ ಮಾತನಾಡಿ, ದೌರ್ಜನ್ಯಕ್ಕೆ ಒಳಗಾಗಿರುವ ಕುಟುಂಬಗಳಿಗೆ ರಕ್ಷಣೆ ನೀಡಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸ್ಥಳೀಯ ಪೊಲೀಸರು ಮುಂಜಾಗ್ರತೆ ವಹಿಸಬೇಕು ಎಂದರು. ಭಾರತೀಯ ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನರಾಯಪಟ್ಟಣ ವೆಂಕಟರಮಣಪ್ಪ ಇದ್ದರು.

Post Comments (+)