ಬುಧವಾರ, ಜನವರಿ 19, 2022
19 °C

ಪೊಲೀಸರ ಅಮಾನತಿಗೆ ಆಗ್ರಹ, ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಪರಿಶಿಷ್ಟ ಜಾತಿಯ ವಿದ್ಯಾರ್ಥಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ದೂರು ದಾಖಲಿಸಲು ವಿಳಂಬ ಧೋರಣೆ ತಳೆದ ಹಾಗೂ ದೌರ್ಜನ್ಯ ಎಸಗಿದವರ ಜೊತೆಗೆ ಶಾಮೀಲಾಗಿ ಪ್ರತಿದೂರು ದಾಖಲಿಸಿರುವ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಬಿಎಸ್‌ಪಿ ಮುಖಂಡರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಶಿವಗಣೇಶ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು ಹಾಗೂ ಕಾರ್ಯಕರ್ತರು ಮುಖ್ಯಮಂತ್ರಿ, ಗೃಹ ಸಚಿವ, ಜಿಲ್ಲಾಧಿಕಾರಿಗೆ ತಹಶೀಲ್ದಾರ್‌ ಮೂಲಕ ಮನವಿ ಪತ್ರ ಸಲ್ಲಿಸಿದರು.

ಬಿಎಸ್‌ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಮಾತನಾಡಿ, ಬಿಹಾರ, ಉತ್ತರ ಪ್ರದೇಶದಲ್ಲಿ ಪರಿಶಿಷ್ಟರ ಮೇಲೆ ನಡೆಯುತ್ತಿದ್ದಂತಹ ದೌರ್ಜನ್ಯಗಳು ದೇವನಹಳ್ಳಿ ಮೀಸಲು ಕ್ಷೇತ್ರದಲ್ಲಿಯೂ ನಡೆಯುತ್ತಿರುವುದು ಖಂಡನೀಯ. ಇಂತಹ ಘಟನೆಗಳು ಪದೇ ಪದೇ ಮರುಕಳಿಸುವುದಕ್ಕೆ ಪೊಲೀಸರ ಪರೋಕ್ಷ ಸಹಕಾರ ಕಾರಣವಾಗಿದೆ ಎಂದು ಟೀಕಿಸಿದರು.

ವಿದ್ಯಾರ್ಥಿ ಮೇಲೆ ಹಲ್ಲೆ ನಡೆದು ದೂರು ಕೊಟ್ಟ ನಂತರವೂ ಪೊಲೀಸರು ಉದ್ದೇಶಪೂರ್ವಕವಾಗಿ ದಾಖಲಿಸುವುದನ್ನು ತಡ ಮಾಡಿದ್ದಾರೆ. ದೂರಿನಲ್ಲಿ ದಾಖಲಾಗಿರುವ 7 ಮಂದಿ ಪೈಕಿ ಇಬ್ಬರನ್ನು ಮಾತ್ರ ಬಂಧಿಸಿಸಲಾಗಿದೆ. ಉಳಿದವರನ್ನು ಬಂಧಿಸುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ ಪ್ರತಿದೂರು ದಾಖಲಿಸುವಲ್ಲಿ ಮುಖ್ಯ ಪಾತ್ರವಹಿಸಿರುವ ಸಬ್ ಇನ್‌ಸ್ಪೆಕ್ಟರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ತನಿಖೆಗೆ ಒಳಪಡಿಸಬೇಕು. ಆರೋಪಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಮುನಿಯಪ್ಪ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಸರ್ಕಾರಿ ಭೂಮಿ ಕಬಳಿಸಿರುವ ಪ್ರಮುಖ ಆರೋಪಿಯ ರಕ್ಷಣೆಗೆ ಪೊಲೀಸರು ನಿಂತಿರುವುದು ಶೋಚನೀಯ ಎಂದರು.

ರಾಜ್ಯ ಕಾರ್ಯದರ್ಶಿ ನಂದಿಗುಂದ ಬಿ. ವೆಂಕಟೇಶ್ ಮಾತನಾಡಿ, ಪರಿಶಿಷ್ಟರ ಮೇಲೆ ನಡೆಯುತ್ತಿರುವ ಇಂತಹ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಬೇಕು. ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಕಾನೂನಿನಡಿ ಶಿಕ್ಷೆಗೆ ಒಳಪಡಿಸಬೇಕು. ದೌರ್ಜನ್ಯ ಎಸಗಿರುವ ಆರೋಪಿ ಪ್ರಕಾಶ್ ಅಕ್ರಮವಾಗಿ ಸಂಪಾದನೆ ಮಾಡಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್, ‘ಆರೋಪಿಯಿಂದ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೆ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಿ ಸರ್ಕಾರದ ವಶಕ್ಕೆ ಪಡೆಯಲಾಗುತ್ತದೆ. ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ತಲುಪಿಸಲಾಗುತ್ತದೆ’ ಎಂದರು.

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಪಿ.ವಿ. ನಾಗಪ್ಪ, ರಮಾದೇವಿ, ನಾಗವೇಣಿ, ಜಿಲ್ಲಾ ಅಧ್ಯಕ್ಷ ತಿಮ್ಮರಾಯಪ್ಪ, ಜಿಲ್ಲಾ ಸಂಯೋಜಕ ಎಚ್. ನರಸಿಂಹಯ್ಯ, ಮಹದೇವ್, ಮುನಿಕೃಷ್ಣ, ತಾಲ್ಲೂಕು ಅಧ್ಯಕ್ಷ ಬಂಗಾರಪ್ಪ, ವಕೀಲ ಎ. ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು