ಗುಡಿಗೆ ಸೇರದ, ಮುಡಿಗೆ ಏರದ ಈ ಹೂಗಳು

7
ತಂತಾನೇ ಯಾವ ಆರೈಕೆ ಇಲ್ಲದೆ ಬೆಳೆದು ಬಣ್ಣಗಳ ಹೂ ಬಿಡುತ್ತದೆ

ಗುಡಿಗೆ ಸೇರದ, ಮುಡಿಗೆ ಏರದ ಈ ಹೂಗಳು

Published:
Updated:
Deccan Herald

ವಿಜಯಪುರ: ಗುಡಿಗೆ ಸೇರದ ಮುಡಿಗೆ ಏರದ ಈ ಹೂಗಳಿಂದ ಒಂದೊಂದು ಸಲ ಆಶ್ಚರ್ಯ ಆಗುತ್ತದೆ. ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ ಎನ್ನುವ ಸಾಲು ಬಹಳಷ್ಟು ಸಾರಿ ಕೇಳಿದ್ದೇವೆ. ಈ ಸಾಲುಗಳನ್ನು ಹಾಡಿದವರು ಕನಕದಾಸರು ಎನ್ನುವುದನ್ನೂ ಕೇಳಿದ್ದೇವೆ. ಈ ಹಾಡಿನ ಸಾಲುಗಳಿಗೆ ಇಂಬು ನೀಡುವಂತೆ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲೆ ಅರಳುವಂತಹ ಲಂಟಾನ ಹೂಗಳು ಎಲ್ಲೆಡೆ ಜನರನ್ನು ಆಕರ್ಷಿಸುತ್ತಿವೆ.

ಲಂಟಾನ ಗಿಡ ಮೊದಲಿಗೆ ದಕ್ಷಿಣ ಅಮೆರಿಕದ ಗಿಡವಂತೆ, ಕ್ಯಾಲಿಫೋರ್ನಿಯಾದಲ್ಲಿ, ರಸ್ತೆ ನಡುವೆ ಸಿಂಗಾರಕ್ಕೆ ನೆಟ್ಟು, ನೀರು ಹಾಕಿ ಬೆಳೆಸುತ್ತಾರೆ. ಕರ್ನಾಟಕದಲ್ಲಿ ಇದು ತಂತಾನೇ ಯಾವ ಆರೈಕೆ ಇಲ್ಲದೆ ಬೆಳೆದು ಬಗೆ ಬಗೆ ಬಣ್ಣ ಬಣ್ಣದ ಹೂವನ್ನೂ ತಳೆಯುತ್ತದೆ. ಇಷ್ಟು ಬಣ್ಣವಾದ ಹೂವಿರೋ ಗಿಡದ ಎಲೆ ಮುಟ್ಟಿದರೆ ಮೈ ಕಡಿತ ಹತ್ತುತ್ತದೆ. ಇದನ್ನು ಗ್ರಾಮಾಂತರ ಪ್ರದೇಶದಲ್ಲಿ ಬೇಲಿ ಹೂ ಎಂತಲೂ ಕರೆಯುತ್ತಾರೆ.

ಎಲ್ಲೆಡೆ ಈ ಗಿಡಗಳಲ್ಲಿ ಕೆಂಪು, ಹಳದಿ, ಸೇರಿದಂತೆ ವಿವಿಧ ಬಣ್ಣಬಣ್ಣಗಳಿಂದ ಹೂಗಳು ಅರಳಿ ಎಲ್ಲರನ್ನೂ ಆಕರ್ಷಿಸುತ್ತಿವೆ. ರಸ್ತೆಯ ಬದಿ, ಹೊಲಗಳ ಬದುಗಳಲ್ಲಿ ಹಬ್ಬಿದ ಗಿಡಗಳು ಬಣ್ಣಗಳನ್ನು ಎರಚಿದಂತೆ ವಾಹನಗಳಲ್ಲಿ ಸಾಗುವವರಿಗೆ ಮುದ ನೀಡುತ್ತಿವೆ.

ಗಿಡದ ತುಂಬಾ ಹೂ ಹೊದ್ದು ಬಣ್ಣದ ಕಾರ್ಪೆಟ್‌ ರೀತಿ ಕಂಗೊಳಿಸುತ್ತಿವೆ. ಬಣ್ಣದ ಚಿಟ್ಟೆಗಳು ಮಕರಂದ ಹೀರುವಾಗ ಮತ್ತೊಂದು ಸೊಬಗು ಕಣ್ಣೆದುರಿಗೆ ಕಾಣುತ್ತದೆ. ಲಂಟಾನದ ಬಣ್ಣದ ಹೂಗಳೇ ಹಾರುತ್ತಿವೆ ಎನ್ನುವಂತೆ ನೋಡುಗರಿಗೆ ಭಾಸವಾಗುತ್ತದೆ.

ಹೂವಿನ ಮಕರಂದ ಹೀರಲು ಬಂದ ದುಂಬಿಗಳ ಝೇಂಕಾರ ಕಿವಿಗೆ ಇಂಪು, ಹೂಗಳ ಸುವಾಸನೆ ಮನಕ್ಕೆ ಮುದ ನೀಡುತ್ತಿದೆ. ಈ ಸಸ್ಯದ ಮೂಲ ಅಮೆರಿಕದ ಉಷ್ಣವಲಯ. ಗಾಢ ಸುಗಂಧ ಹೊರಸೂಸುತ್ತಾ ಅರಳುವ ಹೂಗಳು ಚಿಟ್ಟೆ ಮತ್ತು ಪತಂಗಗಳನ್ನು ಆಕರ್ಷಿಸುತ್ತವೆ. ಮಕರಂದ ಹೀರುವ ಕೆಲ ಸಣ್ಣ ಹಕ್ಕಿಗಳಿಗೂ ಇವು ಇಷ್ಟ.

ಒಂದು ಜಾತಿಯ ಅತಿ ಸಣ್ಣ ನೊಣಗಳು ಈ ಹೂಗಳಿಂದ ಮಕರಂದ ಸಂಗ್ರಹಿಸಿ ಪಾಯದ ಕಲ್ಲುಗಳ ನಡುವೆ ಮೆದು ಭಾಗ ಹುಡುಕಿ ಇರುವೆ ರಂದ್ರಕ್ಕಿಂತ ಕೊಂಚ ದೊಡ್ಡದಾಗಿ ಮಾಡಿ ಅಲ್ಲಿ ಜೇನನ್ನು ಕೂಡಿಡುತ್ತವೆ. ಇದನ್ನು ‘ನಸುರು’ ಜೇನು ಎಂದು ಕರೆಯುವರು.

ಒಂದು ಗೂಡಿನಲ್ಲಿ ಸುಮಾರು 5 ರಿಂದ 10 ಎಂಎಲ್‌ ತುಪ್ಪ ಇರುತ್ತದೆ. ಇದು ರುಚಿಯಲ್ಲಿ ಒಗರು. ಸಿಹಿ ಮಿಶ್ರಿತ. ಮಣ್ಣು ಬೆರೆತಿರುವುದರಿಂದ ತಿನ್ನುವುದಕ್ಕೆ ಕಷ್ಟ. ಆದರೆ ಆಯುರ್ವೇದದ ಔಷಧಿ ತಯಾರಿಸುವವರಿಗೆ ಇದು ಬಹಳ ಉಪಯುಕ್ತವಾದದ್ದು ಎಂದು ಔಷಧಿ ಸಿದ್ಧಪಡಿಸುವ ಲಕ್ಷ್ಮಪ್ಪ ಹೇಳುತ್ತಾರೆ.

ಉದುರೆಲೆ ಜಾತಿಗೆ ಸೇರಿರುವ ಪೊದೆ ಸಸ್ಯವಾದ ಲಂಟಾನ ಎಲೆಗಳು ಭೂಮಿಯನ್ನು ಫಲವತ್ತಾಗಿಸುತ್ತವೆ. ಅಜೀರ್ಣವಾದಾಗ ನಾಯಿಗಳು ಇದರ ಎಲೆಗೆ ಮೊರೆ ಹೋಗುತ್ತವೆ. ಜ್ವರ ಹೆಚ್ಚಾಗಿ ನಾಲಿಗೆ ಜಡ್ಡುಕಟ್ಟಿದಾಗ ಹಳ್ಳಿಗಳಲ್ಲಿ ಲಂಟಾನ ಎಲೆಯಿಂದ ನಾಲಿಗೆಯನ್ನು ತಿಕ್ಕಿಕೊಳ್ಳುತ್ತಾರೆ. ರೈತರು ಜಮೀನಗಳ ಬದುಗಳಲ್ಲಿ ಕಾಂಪೌಂಡ್ ಮಾದರಿಯಲ್ಲಿ ಕಡ್ಡಿಗಳನ್ನು ನಾಟಿ ಮಾಡಿ ಅಂದವಾಗಿ ಕತ್ತರಿಸಿ ಭೂಮಿಯ ಒತ್ತುವರಿ ತಡೆಗಟ್ಟಲು ಉಪಯೋಗ ಮಾಡಿಕೊಳ್ಳುತ್ತಾರೆ.

ಮಕ್ಕಳ ಆಟಕ್ಕೆ ಸಿಗುವ ಪ್ರಕೃತಿಯ ಉಚಿತ ಕೊಡುಗೆ ಗಿಡ ಎಂದು ಸ್ಥಳೀಯ ನಿವಾಸಿ ಮುನಿರಾಜಪ್ಪ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !