ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ಸ್ವಚ್ಛತೆಯಲ್ಲಿ ಅಧಿಕಾರಿಗಳು ವಿಫಲ

Last Updated 21 ಏಪ್ರಿಲ್ 2021, 5:18 IST
ಅಕ್ಷರ ಗಾತ್ರ

ವಿಜಯಪುರ: ‘ಎಲ್ಲೆಡೆ ಕೊರೊನಾ ಸೋಂಕಿನ ಅಬ್ಬರ ಹೆಚ್ಚಾಗುತ್ತಿದೆ. ಜನರು ಭಯಭೀತರಾಗುತ್ತಿದ್ದಾರೆ. ಒಂದು ಕಡೆ ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಿರಿ ಎಂದು ಜನರಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಹಳ್ಳಿಗಳಲ್ಲಿ ಚರಂಡಿಗಳು ಕೊಳಚೆ ತಾಣಗಳಾಗಿವೆ’ ಎಂದು ಎ.ಪಿ.ಎಂ.ಸಿ.ನಿರ್ದೇಶಕ ಸುಧಾಕರ್ ಆರೋಪಿಸಿದ್ದಾರೆ.

ಹೋಬಳಿಯ ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹುಡ್ಯ ಗ್ರಾಮದಲ್ಲಿ ಮಾತನಾಡಿದ ಅವರು, ‘ನಮ್ಮೂರಿನಲ್ಲಿ ಎಲ್ಲೆಡೆ ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿಗಳಲ್ಲಿ ಕಸದ ರಾಶಿಗಳು ತುಂಬಿ ಹೋಗಿವೆ. ಸಂಜೆಯಾಗುತ್ತಿದ್ದಂತೆ ದುರ್ವಾಸನೆ ಬೀರಲಾರಂಭಿಸುತ್ತವೆ. ಹಲವು ಕಡೆ ಚರಂಡಿಗಳಲ್ಲಿನ ನೀರು ಸರಾಗವಾಗಿ ಮುಂದೆ ಹರಿಯಲಿಕ್ಕೆ ಸಾಧ್ಯವಾಗದೇ ನಿಂತಲ್ಲೆ ನಿಂತಿರುತ್ತದೆ. ಇದರಿಂದ ಜನರು ನೆಮ್ಮದಿಯಿಂದ ಜೀವನ ಮಾಡಲಿಕ್ಕೂ ಕಷ್ಟವಾಗಿದೆ’ ಎಂದರು.

‘ಚರಂಡಿಗಳಿಗೆ ಕನಿಷ್ಠ ತಿಂಗಳಿಗೊಮ್ಮೆಯಾದರೂ ಬ್ಲೀಚಿಂಗ್ ಪೌಡರ್ ಹಾಕಲ್ಲ. ರಾಸಾಯನಿಕಗಳನ್ನು ಸಿಂಪಡಣೆ ಮಾಡಲ್ಲ. ಈ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸಾಕಷ್ಟು ಬಾರಿಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಪ್ರಶ್ನಿಸಿದರೆ ನಿಮ್ಮೂರಿನಲ್ಲಿ ಯಾರೂ ತೆರಿಗೆ ಕಟ್ಟಲ್ಲ, ನಮ್ಮ ಪಂಚಾಯಿತಿಯಲ್ಲಿ ಹಣವಿಲ್ಲ ಎಂದು ಬೇಜವಾಬ್ದಾರಿಯಿಂದ ಉತ್ತರ ನೀಡುತ್ತಿದ್ದಾರೆ. ಹಳ್ಳಿಗೆ ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡಿ, ಜನರಿಗೆ ಸಂಕಷ್ಟ ಎದುರಾದರೆ ಅಧಿಕಾರಿಗಳೇ ನೇರವಾಗಿ ಹೊಣೆಗಾರರಾಗುತ್ತಾರೆ’ ಎಂದು ಆರೋಪಿಸಿದರು.

ಸ್ಥಳೀಯ ನಿವಾಸಿ ನಾರಾಯಣಸ್ವಾಮಿ ಮಾತನಾಡಿ, ‘ಗ್ರಾಮ ಪಂಚಾಯಿತಿ ಅಧಿಕಾರಿಗಳಾರೂ ನಮ್ಮೂರಿನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಪಂಚಾಯಿತಿಗೆ ಹೋಗಿ ದೂರು ಕೊಡೋಣವೆಂದರೆ ಕೊರೊನಾ ಕೆಲಸದಲ್ಲಿದ್ದಾರೆ ಎನ್ನುತ್ತಾರೆ. ಮೊಬೈಲ್ ಮೂಲಕ ದೂರು ಕೊಡೋಣವೆಂದರೆ ನಮ್ಮ ನಂಬರ್‌ಗಳಲ್ಲಿ ಕರೆ ಮಾಡಿದರೆ ಅಧಿಕಾರಿಗಳು ಫೋನ್ ತೆಗೆಯುವುದಿಲ್ಲ’ ಎಂದು ದೂರಿದ್ದಾರೆ.

ಕ್ರಿಯಾಯೋಜನೆಗೆ ತಯಾರಿ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವನಗೌಡ ಮಾತನಾಡಿ, ‘ಹೊಸಹುಡ್ಯ ಗ್ರಾಮದಲ್ಲಿ ಚರಂಡಿಗಳು ಸ್ವಚ್ಛಗೊಳಿಸಿ 3 ತಿಂಗಳೂ ಪೂರ್ಣಗೊಂಡಿಲ್ಲ. ಒಂದು ಕಡೆಯಲ್ಲಿ ಸ್ವಚ್ಛಗೊಳಿಸಿಲ್ಲವೆಂದು ಈ ರೀತಿಯಾಗಿ ಆರೋಪ ಮಾಡುವುದು ಸರಿಯಲ್ಲ. ನಾನು ಎಂಜಿನಿಯರ್‌ಗೆ ತಿಳಿಸಿದ್ದೇನೆ. ಚರಂಡಿಗಳ ಸ್ವಚ್ಛತೆಗಾಗಿ ಕ್ರಿಯಾಯೋಜನೆ ತಯಾರು ಮಾಡಿಕೊಳ್ಳುತ್ತಿದ್ದೇವೆ. ಅನುದಾನ ತೊಡಗಿಸಿಕೊಂಡು ಕೂಡಲೇ ಸ್ವಚ್ಛ ಮಾಡುವಂತಹ ಕೆಲಸವನ್ನು ಮಾಡಿಕೊಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT