ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯ ದಾಖಲೆಗಳ ಜಾಗೃತಿ ಮೂಡಿಸಿ: ಎಸ್‌ಪಿ ರವಿ ಡಿ.ಚನ್ನಣ್ಣನವರ್

ಫೆ.1ರಂದು ವಿಜಯಪುರದಲ್ಲಿ ಡಿ.ಎಲ್ ಮೇಳ:
Last Updated 24 ಜನವರಿ 2020, 14:53 IST
ಅಕ್ಷರ ಗಾತ್ರ

ವಿಜಯಪುರ: ಫೆ.1ರಂದು ವಿಜಯಪುರದಲ್ಲಿ ಡಿಎಲ್ ಮೇಳ ಆಯೋಜಿಸಲಾಗಿದೆ. ಅಗತ್ಯ ದಾಖಲೆಗಳನ್ನು ಸರಿಪಡಿಸಿಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವಿ ಡಿ.ಚನ್ನಣ್ಣನವರ್ ಸೂಚನೆ ನೀಡಿದರು.

ಇಲ್ಲಿನ ಅನ್ನಪೂರ್ಣೇಶ್ವರಿ ಕನ್ವೆಂಕ್ಷನ್ ಹಾಲ್‌ನಲ್ಲಿ ಗುರುವಾರ ವಿಜಯಪುರ, ಚನ್ನರಾಯಪಟ್ಟಣ, ವಿಶ್ವನಾಥಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯ ನಾಗರಿಕರ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿ ತಿಂಗಳು 2ನೇ ಭಾನುವಾರ ದಲಿತರ ಕುಂದು –ಕೊರತೆ ಸಭೆ ನಡೆಯುತ್ತದೆ. 34 ಇಲಾಖೆಗಳ ಬಗ್ಗೆ ಜನರು ಮಾಹಿತಿ ಇಟ್ಟುಕೊಳ್ಳಬೇಕು. ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸುವ ಹೊಣೆಗಾರಿಕೆ ಜನರ ಮೇಲೂ ಇದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಅಪರಾಧ ತಡೆಗಟ್ಟಬೇಕು. ಜೂಜಾಟ, ಗಾಂಜಾ ಸೇವನೆ, ಅಕ್ರಮ ಮದ್ಯಮಾರಾಟ, ಮಟ್ಕಾ, ಹುಕ್ಕಾ, ಅನಧಿಕೃತ ಕ್ಲಬ್‌ ಸೇರಿದಂತೆ ಸಮಾಜಕ್ಕೆ ಮಾರಕವಾದ ಎಲ್ಲ ರೀತಿಯ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಅಂಗಡಿ ವ್ಯಾಪಾರಿಗಳು, ಖಾಸಗಿ ಶಾಲಾ –ಕಾಲೇಜುಗಳಲ್ಲಿ ಕರ್ನಾಟಕ ಪಬ್ಲಿಕ್ ಆಕ್ಟ್‌ನಡಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಮಹಿಳೆಯರು ಮತ್ತು ಹೆಣ್ಣು ಮಕ್ಕಳ ರಕ್ಷಣೆಗಾಗಿ ಓಬವ್ವ ಪಡೆ ಸಕ್ರಿಯವಾಗಿದೆ. ಇದರಿಂದ ಪುಂಡರಿಗೆ ತಕ್ಕ ಶಾಸ್ತಿಯಾಗಲಿದೆ ಎಂದು ಎಚ್ಚರಿಸಿದರು.

ದೊಡ್ಡಬಳ್ಳಾಪುರ ಉಪವಿಭಾಗದ ಡಿ.ವೈ.ಎಸ್.ಪಿ.ಟಿ.ರಂಗಪ್ಪ ಮಾತನಾಡಿ, ಪ್ರತಿಯೊಬ್ಬರು ಮಕ್ಕಳ ಜವಾಬ್ದಾರಿ ಬಗ್ಗೆ ಅರಿಯಬೇಕು. ಮೊಬೈಲ್‌ ಬಳಕೆಯಿಂದ ಮಕ್ಕಳು ಕೆಟ್ಟ ದಾರಿ ಹಿಡಿಯುತ್ತಿದ್ದಾರೆ. ಕಳವು, ಸುಲಿಗೆ, ದರೋಡೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿ ಆಗುತ್ತಿದ್ದಾರೆ. ಇದೆಲ್ಲ ಕಾನೂನು ವಿರೋಧಿ ಕೃತ್ಯ. ಇದರಿಂದ ದೂರ ಇರಬೇಕು ಎಂದು ಹೇಳಿದರು.

ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆ.ಐ.ಎ.ಡಿ.ಬಿಯಿಂದ ಭೂಮಿ ವಶಪಡಿಸಿಕೊಳ್ಳುತ್ತಿದ್ದು ಕೆಲ ಮಧ್ಯವರ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಲು ಯತ್ನಿಸುತ್ತಿದ್ದಾರೆ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದರು.

ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ಮಾತನಾಡಿ, ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ನಿರ್ದಿಷ್ಟ ಗುರಿ ನಿಗದಿ ಮಾಡುತ್ತದೆ. ಆದರೆ, ‍ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಳ್ಳುತ್ತಾರೆ. ಈ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.

ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಮಲ್ಲಿಕಾರ್ಜುನ್, ಸಬ್‌ಇನ್‌ಸ್ಪೆಕ್ಟರ್‌ಗಳಾದ ಡಿ.ಮಂಜುನಾಥ್, ನಂದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT