ಸೋಮವಾರ, ಆಗಸ್ಟ್ 8, 2022
21 °C
ಬಂಡೆಗಳ ಪ್ರದೇಶಗಳು ಪ್ರವಾಸಿ ತಾಣಗಳಾಗಲಿ l ಐತಿಹಾಸಿಕ ಮಾನ್ಯತೆಗೆ ಪರಿಗಣಿಸಿ

ಕಲ್ಲುಬಂಡೆಗಳ ವಿಸ್ಮಯ ಲೋಕ

ವಡ್ಡನಹಳ್ಳಿ ಭೋಜ್ಯಾನಾಯ್ಕ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ತಾಲ್ಲೂಕಿನಲ್ಲಿ ಬೆರಳಣಿಕೆಯಷ್ಟು ಬೆಟ್ಟಗಳಿದ್ದರೂ ಪ್ರಕೃತಿ ತನ್ನ ಮಡಿಲಿನಲ್ಲಿ ಸೃಷ್ಟಿಸಿರುವ ವಿಸ್ಮಯಕಾರಿ ಕಲ್ಲಿನಾಕೃತಿಗಳು ಗಮನ ಸೆಳೆಯುತ್ತವೆ. ರಾಜ ಮಹಾರಾಜರು, ಪಾಳೆಗಾರರು, ಬೆಂಗಳೂರು ನಿರ್ಮಾತೃ ನಾಡ ಪ್ರಭುಗಳ ವಂಶಜರ ಇತಿಹಾಸದ ಕುರುಹುಗಳು ಇಲ್ಲಿ ಕಾಣಬಹುದಾಗಿದೆ. ವಿವಿಧ ಅಕಾರದ ವಿಸ್ಮಯ ಲೋಕವನ್ನು ಸೃಷ್ಟಿಸಿರುವ ಹಲವು  ಕಲ್ಲು ಬಂಡೆಗಳಿಗೂ ಸಹಸ್ರಾರು ವರ್ಷಗಳ ಇತಿಹಾಸವಿದೆ. 

ಎಲ್ಲರ ಗಮನ ಸೆಳೆಯುವ ಬೆಟ್ಟಗಳೆಂದರೆ ಬಿಳಿ ಚಿನ್ನ ಎಂದೆ ಖ್ಯಾತಗೊಂಡಿರುವ ಕೊಯಿರಾ ಮತ್ತು ಚಿಕ್ಕಗೊಲ್ಲಹಳ್ಳಿ ಬೊಡುಬಂಡೆ. ಐತಿಹಾಸಿಕ ಬೆಂಗಳೂರು ಕೆಂಪೇಗೌಡರ ವಂಶಸ್ಥರು ನೆಲೆಸಿದ್ದ ಆವತಿ (ಕುಂಬಿ) ಬೆಟ್ಟ ಮಹರ್ಷಿ ಗೌತಮ ತಪ್ಸಿನ  ತಪೋಭೂಮಿ ಎಂಬ ಪ್ರತೀತಿ. ತಿಮ್ಮರಾಯಸ್ವಾಮಿಬೆಟ್ಟ ಪ್ರಕೃತಿ ಸೌಂದರ್ಯದ ಪ್ರತೀಕ. ದಿಬ್ಬಗಿರಿ ಬೆಟ್ಟ, ನಗರದ ಪಕ್ಕದಲ್ಲಿರುವ ಪಾರಿವಾಳ ಗುಡ್ಡ, ಕದಂಬರ ಕಾಲದಲ್ಲಿ ಸೈನಿಕರ ಕುದುರೆ ಸವಾರಿ ತರಬೇತಿ ಮತ್ತು ಕುದುರೆ ಪಾಲನಾ ಕೇಂದ್ರವಾಗಿದ್ದ ಕುಂದಾಣ ಬೆಟ್ಟಗಳು ಪ್ರಮುಖ ಆಕರ್ಷಣ ತಾಣಗಳಾಗಿವೆ.

ಪಾರಿವಾಳ ಗುಡ್ಡಕ್ಕೆ ಮೆರುಗು ನೀಡುವ ಗಗನಕ್ಕೆ ಚುಂಬಿಸಿದಂತೆ ಭಾಸವಾಗುವ ನಿಲುಕಲ್ಲು ಮತ್ತು ಮಂಡೂಕ ಕೃತಿಯ ಕಲ್ಲು, ಬೆಟ್ಟದ ಪಕ್ಕದಲ್ಲಿ ವಜ್ರದಾಕಾರದ ಕಲ್ಲು ಆವತಿ ಬೆಟ್ಟದಲ್ಲಿರುವ ಮುದ್ದೆ ಅಕಾರದ ಏಕಕಲ್ಲು, ಕೊಯಿರಾ ಬೆಟ್ಟದ ಕೆಳಗೆ ಬಿದ್ದಿರುವ ಪಕ್ಷಿ, ಅಮೀಬಾ ಮತ್ತು ಆಮೆ ಅಕಾರದ ಕಲ್ಲು ಕುಂದಾಣ ಬೆಟ್ಟದಲ್ಲಿರುವ ಕಲ್ಲು ಅಪರೂಪ ಮತ್ತು ವಿಸ್ಮಯಕಾರಿ.

ಇಲ್ಲೇ ಸಮೀಪದ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಈ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಾರೆ ಸ್ಥಳೀಯರು. ತಾಲ್ಲೂಕಿನ ಆನೇಕ ಬೆಟ್ಟ ಗುಡ್ಡಗಳು ಐತಿಹಾಸಿಕ ತಾಣಗಳಿವೆ. ಪ್ರಾಚ್ಯ ಮತ್ತು ವಸ್ತು ಸಂಗ್ರಹಾಲಯ ಇಲಾಖೆ,  ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳು ಒಗ್ಗೂಡಿ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಮುನಿನಂಜಪ್ಪ.

ಗ್ರಾಮಾಂತರ ಜಿಲ್ಲೆಯ ಪ್ರವಾಸೋದ್ಯಮಕ್ಕಾಗಿ ಸರ್ಕಾರ ಇದುವರೆಗೂ ಬಿಡಿಗಾಸು ನೀಡಿಲ್ಲ ಎನ್ನುತ್ತಾರೆ ಇತಿಹಾಸ ಸಂಶೋಧಕ ಬಿ.ಜಿ.ಗುರುಸಿದ್ದಯ್ಯ.

ಹಾಲಿ ಇರುವ ಬೆಟ್ಟಗುಡ್ಡ ಜಾಗವನ್ನು ಸಂಬಂಧಪಟ್ಟ ಇಲಾಖೆ ಅಳತೆ ಮಾಡಿ ತಡೆಗೋಡೆ ನಿರ್ಮಿಸಬೇಕು. ಒಂದೊಂದು ಬೆಟ್ಟದಲ್ಲಿ ಗಿಡ ಮರ ಬೆಳೆಸಲು ಬೇಕಾದಷ್ಟು ಸ್ಥಳಾವಕಾಶವಿದೆ. ಪರಿಸರ ಸಂರಕ್ಷಣೆ ಜತೆಗೆ ಬೆಟ್ಟಗಳನ್ನು ಸಂರಕ್ಷಿಸಿದರೆ ಅತ್ಯುತ್ತಮ ಪ್ರವಾಸಿ ತಾಣವಾಗಿಸಲು ಸಾಧ್ಯವಿದೆ ಎನ್ನುತ್ತಾರೆ ಪರಿಸರವಾದಿ ಶಿವನಾಪುರ ರಮೇಶ್‍.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು