ಮಂಗಳವಾರ, ನವೆಂಬರ್ 19, 2019
29 °C

ಅಯೋಧ್ಯೆ ತೀರ್ಪು: ತಾಲ್ಲೂಕಿನಾದ್ಯಂತ ಬಂದೋಬಸ್ತ್

Published:
Updated:
Prajavani

ದೊಡ್ಡಬಳ್ಳಾಪುರ: ದೇಶದಾದ್ಯಂತ ಕುತೂಹಲ ಕೆರೆಳಿಸಿದ್ದ ಅಯೋಧ್ಯೆ ತೀರ್ಪು ಪ್ರಕಟಣೆಯ ಹಿನ್ನೆಲೆಯಲ್ಲಿ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಎರಡನೇ ಶನಿವಾರದ ಪ್ರಯುಕ್ತ ಸರ್ಕಾರಿ ಕಚೇರಿಗಳಿಗೆ ರಜೆ ಇದ್ದುದರಿಂದ ಬಸ್ ನಿಲ್ದಾಣದಲ್ಲಿ ಜನಸಂದಣಿ ವಿರಳವಾಗಿತ್ತು. ಯಾವುದೇ ಸಂಭ್ರಮೋತ್ಸವ, ವಿಜಯೋತ್ಸವ ಆಚರಿಸದಂತೆ ಮೊದಲೇ ಸೂಚನೆ ನೀಡಲಾಗಿದ್ದರಿಂದ ಗುಂಪು ಸೇರುವಿಕೆಗೆ ಅವಕಾಶವಿರಲಿಲ್ಲ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ರಾಜ್ಯ ಮೀಸಲು ಪೊಲೀಸ್ ಪಡೆ ಸೇರಿದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಅಲ್ಪ ಸಂಖ್ಯಾತರು ಹೆಚ್ಚಾಗಿರುವ ಇಸ್ಲಾಂಪುರ, ಚಿಕ್ಕಪೇಟೆ, ಪಾಲನಜೋಗಹಳ್ಳಿಯಲ್ಲಿ ಜನಸಂದಣಿ ಇರುವ ಬಸ್ ನಿಲ್ದಾಣ ಕಡೆಗಳಲ್ಲಿ ನಿಯೋಜಿಸಲಾಗಿತ್ತು.

ಡಿವೈಎಸ್‍ಪಿ ಟಿ.ರಂಗಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ರಾಘವ ಎಸ್.ಗೌಡ ನೇತೃತ್ವದ ಪೊಲೀಸ್ ಪಡೆ, ಪೊಲೀಸ್ ವಾಹನಗಳಲ್ಲಿ ನಗರದಾದ್ಯಂತ ಗಸ್ತು ತಿರುಗುವ ಮೂಲಕ ಶಾಂತಿ ಭಂಗವಾಗದಂತೆ ನೋಡಿಕೊಂಡರು.

ಅಯೋಧ್ಯೆ ರಾಮ ಮಂದಿರದ ಬಗ್ಗೆ ಶತಮಾನದಿಂದ ಇದ್ದ ವಿವಾದ ಸುಪ್ರೀಂ ಕೋರ್ಟ್‍ ತೀರ್ಪಿನಿಂದ ಅಂತ್ಯ ಕಂಡಿದ್ದು, ತೀರ್ಪು ಯಾವುದೇ ಇರಲಿ ಶಾಂತಿ ಸಹಬಾಳ್ವೆಯಿಂದ ಬದುಕುವುದು ಮುಖ್ಯ. ಈಗ ನಿರಾಳವಾಗಿದೆ ಎನ್ನುವ ಅಭಿಪ್ರಾಯಗಳು ಬಹಳಷ್ಟು ಹಿಂದು ಹಾಗೂ ಮುಸ್ಲಿಂ ಮುಖಂಡರಿಂದ ಕೇಳಿ ಬಂದವು.

ತೀರ್ಪು ಸ್ವಾಗತಾರ್ಹ: ‘ಸುಪ್ರೀಂಕೋರ್ಟ್‌ನ ಐವರು ನ್ಯಾಧೀಶರನ್ನು ಒಳಗೊಂಡ ಸಂವಿಧಾನಿಕ ಪೀಠವು ಅಯೋಧ್ಯೆ ವಿವಾದ ಕುರಿತು ನೀಡಿರುವ ಸರ್ವಸಮ್ಮತ ತೀರ್ಪನ್ನು ಭಾರತೀಯ ಜನತಾ ಪಕ್ಷವು ಸ್ವಾಗತಿಸುತ್ತದೆ’ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಚ್‌.ಅಮರನಾಥ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)