ವಿಜಯಪುರ(ದೇವನಹಳ್ಳಿ): ಶಿಡ್ಲಘಟ್ಟ ಕ್ರಾಸ್‌ನಲ್ಲಿ ಮಳೆಯ ನೀರು ಹರಿಯಬೇಕಾಗಿರುವ ರಾಜಕಾಲುವೆಯಲ್ಲಿ ಗುಜರಿ ಸಾಮಾನು ತುಂಬಲಾಗಿದ್ದು, ಮಳೆ ನೀರು ಹರಿಯಲು ಅಡ್ಡಿಯಾಗಿದೆ. ಅಲ್ಲದೆ ರಸ್ತೆ ಇಕ್ಕೆಲ್ಲಗಳಿಲ್ಲಿರುವ ಗುಜರಿ ಮಳಿಗೆಗಳಿಂದ ಸಂಚಾರಕ್ಕೆ ತೊಂದರೆ ಆಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ರಸ್ತೆಯ ಇಕ್ಕೆಲ್ಲದಲ್ಲಿರುವ ಗುಜರಿ ಅಂಗಡಿಯವರು ರಸ್ತೆಯವರೆಗೂ ಗುಜರಿ ಸಾಮಾನು ಹಾಕಿದ್ದಾರೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಿಸಿದ್ದಾರೆ.
ರಾಜಕಾಲುವೆಯಲ್ಲಿ ಗುಜರಿ ಸಾಮಾನು ತುಂಬಿಸಿರುವ ಕಾರಣ ಮಳೆಯ ನೀರು ಸರಾಗವಾಗಿ ಹರಿಯುತ್ತಿಲ್ಲ. ಕಾಲುವೆಯ ಸಮೀಪದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ಮಳೆಯ ನೀರು ಸರಾಗವಾಗಿ ರಾಜಕಾಲುವೆಯ ಮೂಲಕ ಹರಿದು ಕೆರೆಗೆ ಸೇರುವಂತೆ ಮಾಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ರಾಜಕಾಲುವೆಯಲ್ಲಿ ಗುಜರಿ ಸಾಮಾನು ತುಂಬಿ ನೀರು ಹರಿಯುವುದಕ್ಕೆ ಅಡ್ಡಿಪಡಿಸಿರುವವರಿಗೆ ಎಚ್ಚರಿಕೆ ನೀಡಲಾಘಿದೆ. ಆದರೂ ತೆರವು ಮಾಡಿಲ್ಲ. ತಹಶೀಲ್ದಾರರಿಂದ ನೊಟೀಸ್ ಜಾರಿ ಮಾಡಿಸಿ ತೆರವುಗೊಳಿಸಲಾಗುವುದು.ಲವಕುಮಾರ್, ಉಪ ತಹಶೀಲ್ದಾರ್, ವಿಜಯಪುರ
ರಸ್ತೆ ಉದ್ದಕ್ಕೂ ಎರಡೂ ಕಡೆಗಳಲ್ಲಿ ದ್ವಿಚಕ್ರ ವಾಹನಗಳ ರಿಪೇರಿ ಅಂಗಡಿಗಳು, ಪಂಚ್ಚರ್ ಅಂಗಡಿಗಳು, ಸೇರಿದಂತೆ ಹೊಟೇಲ್, ಅಟಿಕೆಗಳ ಮಾರಾಟ ಮಳಿಗೆಗಳು ತಲೆ ಎತ್ತಿವೆ. ಬೆಂಗಳೂರು–ಶಿಡ್ಲಘಟ್ಟ, ಶಿಡ್ಲಘಟ್ಟ–ಬೆಂಗಳೂರು ಕಡೆಗೆ ಸಂಚರಿಸುವ ಬಸ್‌ಗಳು ವಾಹನಗಳು ಶಿಡ್ಲಘಟ್ಟ ಕ್ರಾಸ್‌ನಲ್ಲಿ ಸರಾಗವಾಗಿ ತಿರುವು ಪಡೆದುಕೊಳ್ಳಲು ಸಮಸ್ಯೆ ಆಗುತ್ತಿದೆ. ಪಾದಚಾರಿಗಳ ಓಡಾಟಕ್ಕೂ ಜಾಗವಿಲ್ಲ. ಇಲ್ಲಿ ಎರಡು ಕಾಲೇಜುಗಳಿವೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಿದ್ದು, ಬಸ್‌ಗಳ ಸುಗಮ ಸಂಚಾರ ಹಾಗೂ ಜನರ ಓಡಾಟಕ್ಕೆ ಅನುಕೂಲ ಆಗುವಂತೆ ಕ್ರಮವಹಿಸಬೇಕೆಂದು ಕೋರಿದ್ದಾರೆ.
ರಶೀದಿ ಕೊಡದೆ ಸುಂಕ ವಸೂಲಿ
‘ಪುರಸಭೆಯವರ ಹೆಸರಿನಲ್ಲಿ ಪ್ರತಿನಿತ್ಯ ಅಂಗಡಿಗಳಿಂದ ಸುಂಕ ವಸೂಲಿ ಮಾಡುತ್ತಿದ್ದಾರೆ. ರಶೀದಿ ಕೊಡುತ್ತಿಲ್ಲ’ ಎಂದು ಇಲ್ಲಿನ ಮಳಿಗೆದಾರರು ಆರೋಪ ಮಾಡಿದ್ದಾರೆ.
ಅನಧಿಕೃತ ಮಳಿಗೆ ಶೀಘ್ರ ತೆರವು
ಈಗಾಗಲೇ ಚಿಕ್ಕಬಳ್ಳಾಪುರ-ಕೋಲಾರ ಮುಖ್ಯರಸ್ತೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಕುರಿತು ದೂರುಗಳು ಬಂದಿವೆ. ಗುಜರಿ ಹಾಗೂ ರಸ್ತೆ ಬದಿಯ ಅಂಗಡಿ ಮಾಲೀಕರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಪೊಲೀಸರೊಂದಿಗೆ ಸೇರಿ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಸಂತೋಷ್ ತಿಳಿಸಿದ್ದಾರೆ. ರಾಜಕಾಲುವೆ ಮುಚ್ಚಿರುವ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.