ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯ ಸಾಹಿತ್ಯ ಸಾಮಾಜಿಕ ಹೊಣೆಗಾರಿಕೆ: ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಂಡಾಯ ಸಾಹಿತ್ಯ ಸಮ್ಮೇಳನ, ಉತ್ಸವ
Last Updated 18 ಜನವರಿ 2020, 13:40 IST
ಅಕ್ಷರ ಗಾತ್ರ

ವಿಜಯಪುರ: ಬಂಡಾಯ ಸಾಹಿತ್ಯವೆಂದರೆ ಕೇವಲ ಸೌಂದರ್ಯ ಉಪಾಸನೆಯಲ್ಲ. ಬೌದ್ಧಿಕ ತುಡಿತವೂ ಅಲ್ಲ. ಅದೊಂದು ಸಾಮಾಜಿಕ ಹೊಣೆಗಾರಿಕೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಹೇಳಿದರು.

ಇಲ್ಲಿನ ಗಾಂಧಿಚೌಕದಲ್ಲಿನ ಬಂಡಾಯ ಸಾಹಿತ್ಯ ದಿಗ್ಗಜ ಚೆನ್ನಟ್ಟಿ ವಾಲೀಕರ್ ಮಂಟಪದಲ್ಲಿ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಂಡಾಯ ಸಾಹಿತ್ಯ ಸಮ್ಮೇಳನ ಹಾಗೂ ಉತ್ಸವ, ಬೆಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲಾ ಉತ್ಸವ-2020 ಕಾರ್ಯಕ್ರಮದ ಸಮ್ಮೇಳನ ಅಧ್ಯಕ್ಷರಾಗಿ ಅವರು ಮಾತನಾಡಿದರು.

1970 ರ ದಶಕದಲ್ಲಿ ಅನೇಕ ಸಾಮಾಜಿಕ, ರಾಜಕೀಯ ಘಟನೆಗಳು ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆಗಳನ್ನು ತಂದವು. ಬದುಕಿನಲ್ಲಿ ಉಂಟಾದ ಕೋಲಾಹಲದಿಂದಾಗಿ ಸಾಹಿತ್ಯದಲ್ಲೂ ಬದಲಾವಣೆ ಅನಿವಾರ್ಯವೆನಿಸಿ ಬಂಡಾಯದ ದನಿ ಮೊಳಗಿತು. ಸಾಹಿತ್ಯ ಸೃಷ್ಟಿ ಖುಷಿಗಾಗಿ ಅಲ್ಲ. ಸಾಂಸ್ಕೃತಿಕ ಬದಲಾವಣೆಗಳಿಗಾಗಿ. ಸಂಸ್ಕೃತಿಯಲ್ಲಿ ಪ್ರತಿಷ್ಠಾಪಿಸಿದ ಮೌಲ್ಯಗಳು ಜಡವಾದಾಗ, ಅವುಗಳ ವಿರುದ್ಧ ಹೋರಾಡುವುದು ಬಂಡಾಯ. ಅದು ಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡಾಗ ಬಂಡಾಯ ಸಾಹಿತ್ಯವಾಗುತ್ತದೆ ಎಂದು ವಿಶ್ಲೇಷಿಸಿದರು.

ಇಂದು ಸಮಾಜವನ್ನು ಕಿತ್ತು ತಿನ್ನುತ್ತಿರುವ ಅಧೋಗತಿಗೆ ತಳ್ಳಿರುವ ಯಜಮಾನ ಸಂಸ್ಕೃತಿಯ ಮುಖ್ಯ ಅಂಶಗಳಾದ ಜಾತಿ ವರ್ಗಗಳ ವಿರುದ್ಧ ಶೋಷಣೆಯ ವಿರುದ್ಧ ಶ್ರಮ ಜೀವಿಗಳನ್ನು ಬಂಡಾಯಕ್ಕೆ ಅನುಗೊಳಿಸುವುದೆ ಬಂಡಾಯ ಸಾಹಿತ್ಯದ ಗುರಿಯಾಗಿದೆ ಎಂದರು.

ಸಹಕಾರ ರತ್ನ ಪ್ರಶಸ್ತಿ ಸ್ವೀಕರಿಸಿದ ಕಾಂಗ್ರೆಸ್ ನಾಯಕ ಸಿ.ನಾರಾಯಣಸ್ವಾಮಿ ಮಾತನಾಡಿ, ಸಾಹಿತಿ ತನ್ನ ಸಾಮಾಜಿಕ ರಾಜಕೀಯ ಪ್ರಜ್ಞೆಯಿಂದ ಅಸ್ಪೃಶ್ಯತೆ, ಜಾತಿಪದ್ಧತಿ, ಲಿಂಗಭೇದ, ವರ್ಗಭೇದ ನೀತಿಯನ್ನು ವಿರೋಧಿಸುವಲ್ಲಿ ಬಂಡಾಯ ಸಾಹಿತ್ಯಕ್ಕೆ ತನ್ನದೇ ಆದ ಒಂದು ತಾತ್ವಿಕ ನೆಲೆಯಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಕಸಾಪ ಅಧ್ಯಕ್ಷ ಚಿ.ಮಾ.ಸುಧಾಕರ್ ಮಾತನಾಡಿ, ಸಾಹಿತ್ಯ ಪರಿಷತ್ತು ಇಂದು ಕೃಷಿ, ಪರಿಸರ, ವಿಜ್ಞಾನ ಮುಂತಾದ ಎಲ್ಲಾ ರಂಗಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಶೋಷಿತರ ಧ್ವನಿಯಾಗಿ ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಪ್ಪ, ಬಿ.ಟಿ.ಲಲಿತಾನಾಯಕ್, ಮುಂತಾದವರು ಶ್ರಮವಹಿಸಿದ್ದು, ಅವರ ಪರಿಶ್ರಮದ ಕುರಿತು, ಬಂಡಾಯ ಸಾಹಿತ್ಯದ ಕುರಿತು ದಲಿತ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಿ.ಟಿ.ಲಲಿತಾ ನಾಯಕ್ ರಾಷ್ಟ್ರಧ್ವಜಾರೋಹಣ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ಕೈವಾರ ಶ್ರೀನಿವಾಸ್, ಕನ್ನಡ ಧ್ವಜಾರೋಹಣವನ್ನು ಕೆ.ಶಿವಕುಮಾರ್ ನೆರವೇರಿಸಿದರು. ಸಾಂಸ್ಕೃತಿಕ ಕಲಾತಂಡದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿ.ನಾಯ್ಡು, ಮಹಾತ್ಮಾಂಜನೇಯ, ತಂಡದಿಂದ ನಾಡಗೀತೆ, ರಾಷ್ಟ್ರಗೀತೆ, ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರನ್ನು ಸನ್ಮಾನ ಮಾಡಲಾಯಿತು.

ಜೆಡಿಎಸ್ ಮುಖಂಡ ಕೆ.ಪಿ.ಬಚ್ಚೇಗೌಡ, ಬೆಂಗಳೂರು ನಗರ ಜಿಲ್ಲಾ ಉತ್ಸವಾಧ್ಯಕ್ಷ ಎಚ್.ಆರ್.ಬಸವರಾಜ್, ಪುರಸಭಾ ಮುಖ್ಯಾಧಿಕಾರಿ ಎ.ಬಿ. ಪ್ರದೀಪ್‌ಕುಮಾರ್, ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ಕಾರ್ಮಿಕ ಘಟಕದ ಅಧ್ಯಕ್ಷ ಚೌಡೇಗೌಡ, ನೆಲಮಂಗಲ ಕಸಾಪ ಅಧ್ಯಕ್ಷ ಉಮೇಶ್‌ಗೌಡ, ನಗರ ಘಟಕದ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಪ್ರಧಾನ ಕಾರ್ಯದರ್ಶಿ ಮುನಿವೆಂಕಟರಮಣಪ್ಪ ಇದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಕರ್ನಾಟಕ ಮಿತ್ರ ಸಂಘ ವಿಜಯಪುರ, ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT