ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನಶ್ಚೇತನ ನಿರೀಕ್ಷೆಯಲ್ಲಿ ದಕ್ಷಿಣ ಪಿನಾಕಿನಿ

ಒತ್ತುವರಿ ತೆರವಿಗೆ ಸಮೀಕ್ಷೆ ನಡೆಸಲು ಜನರ ಆಗ್ರಹ l ಇಚ್ಛಾಶಕ್ತಿ ಕೊರತೆ ನಿರ್ಲಕ್ಷ್ಯಕ್ಕೊಳಗಾದ ನದಿ
Last Updated 19 ಸೆಪ್ಟೆಂಬರ್ 2022, 4:02 IST
ಅಕ್ಷರ ಗಾತ್ರ

ವಿಜಯಪುರ(ಬೆಂ.ಗ್ರಾಮಾಂತರ): ಸರ್ಕಾರದಕ್ಷಿಣ ಪಿನಾಕಿನಿ ನದಿ ಪುನಶ್ಚೇತನಗೊಳಿಸದ ಕಾರಣ 4,370 ಚದರ ಕೀ.ಮಿ ವ್ಯಾಪ್ತಿಯ ಜನರು ನದಿ ನೀರಿನ ಬಳಕೆಯಿಂದ ವಂಚಿತರಾಗುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹಾಗೂ ಐಬಸಾಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನದಿ ಹಾದುಹೋಗುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದಲ್ಲಿ ಉಗಮವಾಗುವ ದಕ್ಷಿಣ ಪಿನಾಕಿನಿ ನದಿ, ಅಲ್ಲಿಂದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರದ ಮೂಲಕ ತಮಿಳುನಾಡಿನ ಕುಡಲೂರು ಬಳಿ ಬಂಗಾಳಕೊಲ್ಲಿಗೆ ಸೇರಿತ್ತದೆ.

ಹಲವು ವರ್ಷಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಕಾರಣ ನದಿಯಲ್ಲಿ ನೀರು ಹರಿಯುವುದು ನಿಂತು ಒಣಗಿ ಹೋಗುವ ಹಂತ ತಲುಪಿತ್ತು. ನದಿ ಪಾತ್ರವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಿಸಿದ್ದಾರೆ. ಕೆಲವರು ನದಿ ಜಾಗದಲ್ಲಿ ಕೃಷಿ ಮಾಡುತ್ತಿದ್ದಾರೆ. ಒತ್ತುವರಿ ತೆರವುಗೊಳಿಸಿ ನದಿ ರಕ್ಷಣೆ ಮಾಡಬೇಕು. ಇದಕ್ಕಾಗಿ ಸಮೀಕ್ಷೆ ನಡೆಸಬೇಕೆಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

‘ನದಿ ಅಳಿವಿನ ಅಂಚಿನಲ್ಲಿದೆ. ನದಿ ಪುನಶ್ಚೇತನಗೊಳಿಸಿ, ಜೀವ ತುಂಬುವಂತಹ ಕೆಲಸವನ್ನು ಸರ್ಕಾರ ಮಾಡಬೇಕು. ಆದರೆ ಸರ್ಕಾರ ಇದುವರೆಗೂ ಈ ಬಗ್ಗೆ ಚಿಂತಿಸಿಯೇ ಇಲ್ಲ ಎನ್ನುತ್ತಾರೆ’ ನೀರಾವರಿ ಹೋರಾಟಗಾರ ಕಲ್ಯಾಣ್ ಕುಮಾರ್ ಬಾಬು.

‘ದಕ್ಷಿಣ ಪಿನಾಕಿನಿ ನದಿ ಪುನಶ್ಚೇತನಗೊಳಿದರೆ ಸುಮಾರು ಏಳು ಲಕ್ಷ ಎಕರೆ ಕೃಷಿ ಭೂಮಿಯಲ್ಲಿ ಎರಡು ಬೆಳೆ ಬೆಳೆಯುವಷ್ಟು ನೀರು ನಿಲ್ಲಲಿದೆ. ನದಿಯ ಸಂಪೂರ್ಣ ಜಲಾನಯನ ಪ್ರದೇಶದಲ್ಲಿ ಪುನಶ್ಚೇತನ ಕಾರ್ಯಕ್ಕೆ ಅನುಮತಿ ನೀಡುವಂತೆ ಸರ್ಕಾರವನ್ನು ಹಲವಾರು ಬಾರಿ ಒತ್ತಾಯಿಸಿದರೂ ಸರ್ಕಾರ, ಯಾವುದೇ ಬಜೆಟ್ ನಲ್ಲಿ ನದಿಯನ್ನು ಪುನಶ್ಚೇತನಗೊಳಿಸಲು ಅನುದಾನ ಮೀಸಲಿಟ್ಟಿಲ್ಲ’ ಎಂದು ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ತಿಳಿಸಿದರು.

ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ನದಿ ತಪ್ಪಲಿನಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಸರ್ಕಾರ ಮುಂದಾಗಿದೆ. ನದಿ ಪುನಶ್ವೇತನಗೊಳಿಸದಿರುವುದಕ್ಕೆ ಇದು ಕೂಡಾ ಪ್ರಮುಖ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.

ಜನಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ, ದಕ್ಷಿಣ ಪಿನಾಕಿನಿ ನದಿ ಪುನಶ್ಚೇತನಗೊಳಿಸಲು ಸರ್ಕಾರದ ಹಂತದಲ್ಲಿ ಆಕ್ಷೇಪ ಕೇಳಿ ಬರುತ್ತಿವೆ. ಇದಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಗುವುದೂ ಅನುಮಾನ ಎಂದು ಹೇಳುತ್ತಾರೆ. ಇದಕ್ಕೆ ಬೇಕಾಗುವ ₹26 ಸಾವಿರ ಕೋಟಿ ಸಿ.ಎಸ್‌.ಆರ್‌ ಅನುದಾನ ಪಡೆಯುವುದು ಅಸಾಧ್ಯ. ಆದರೆ, ರಾಜ್ಯದ ಸಂಸದರು ಹಾಗೂ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದರೆ, ಸಾಧ್ಯವಾಗಬಹುದು ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT