ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ ಚಂಪಕಧಾಮ ಸ್ವಾಮಿ ಬ್ರಹ್ಮರಥೋತ್ಸವ

ಬನ್ನೇರುಘಟ್ಟದಲ್ಲಿ ಅಲಂಕೃತ ಉತ್ಸವ ಮೂರ್ತಿಗೆ ಧಾರ್ಮಿಕ ಪೂಜೆ
Last Updated 2 ಏಪ್ರಿಲ್ 2021, 6:10 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಚಂಪಕಧಾಮ ಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು. ಶ್ರದ್ಧಾ ಭಕ್ತಿಯ ಆಚರಣೆಗಳಿಗೆ ನೂರಾರು ಭಕ್ತರು ಸಾಕ್ಷಿಯಾದರು.

ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯದ ಪ್ರಾಂಗಣದಲ್ಲಿ ಶ್ರೀದೇವಿ ಭೂದೇವಿ ಸಮೇತ ಚಂಪಕಧಾಮಸ್ವಾಮಿಯ ಅಲಂಕೃತ ಉತ್ಸವ ಮೂರ್ತಿಗೆ ಧಾರ್ಮಿಕ ಪೂಜೆಗಳನ್ನು ನೆರವೇರಿಸಲಾಯಿತು ದೇವಾಲಯದ ಪ್ರಧಾನ ಅರ್ಚಕರು ಸಾಂಪ್ರದಾಯಿಕ ಪೂಜೆಗಳನ್ನು ಸಲ್ಲಿಸಿದ ನಂತರ ಶ್ರೀದೇವಿ ಭೂದೇವಿ ಸಮೇತ ಚಂಪಕಧಾಮ ಸ್ವಾಮಿಯ ಅಲಂಕೃತ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳರಿಸುತ್ತಿದ್ದಂತೆಯೇ ನೆರೆದಿದ್ದ ಭಕ್ತರು ದೇವರನ್ನು ಕಣ್ತುಂಬಿಕೊಂಡು ಗೋವಿಂದ ಗೋವಿಂದ ಎಂದು ಜಯಘೋಷ ಮಾಡುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ದೇವಾಲಯದ ಮುಂಭಾಗದ ರಸ್ತೆಯಲ್ಲಿ ರಥ ಸಾಗುತ್ತಿದ್ದಂತೆಯೇ ದವನ ಚುಚ್ಚಿದ ಬಾಳೆಹಣ್ಣನ್ನು ರಥಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ತೇರು ಚಂಪಕವಲ್ಲಿ ಮಾರಮ್ಮನ ದೇವಾಲಯದ ಮೂಲಕ ಸಾಗಿ ಬನ್ನೇರುಘಟ್ಟದ ಆಂಜನೇಯ ದೇವಾಲಯದವರೆಗೂ ಸಾಗಿತು.

ರಥೋತ್ಸವದ ಅಂಗವಾಗಿ ಗರಡವಾಹನೋತ್ಸವ, ಹನುಮಂತೋತ್ಸವ, ಸೂರ್ಯಮಂಡಲೋತ್ಸವ, ಶೇಷ ವಾಹನೋತ್ಸವ, ಮೋಹಿನಿ ತಿರುಕುಳೋತ್ಸವ, ವೈರಮುಡಿ ಉತ್ಸವ, ಗಜೇಂದ್ರ ಮೋಕ್ಷ, ಗರಡೋತ್ಸವ, ಉಂಜಲಿಸೇವೆ, ಧೂಳೋತ್ಸವ, ರಾಜಮುಡಿ ಉತ್ಸವಗಳು ನಡೆದವು.

ಮಂಗಳಮುಖಿಯರ ಆಕರ್ಷಣೆ: ಬನ್ನೇರುಘಟ್ಟ ಚಂಪಕಧಾಮ ಸ್ವಾಮಿ ಜಾತ್ರೆಯ ಮತ್ತೊಂದು ವಿಶೇಷತೆಯೆಂದರೆ ಜಾತ್ರೆಯಲ್ಲಿ ನೂರಾರು ಮಂದಿ ಜಮಾವಣೆಗೊಳ್ಳುವ ಮಂಗಳಮುಖಿಯರು. ರಾಜ್ಯ ಮತ್ತು ನೆರೆ ರಾಜ್ಯದ ವಿವಿಧ ಭಾಗಗಳಿಂದ ಮಂಗಳಮುಖಿಯರು ಆಗಮಿಸುತ್ತಾರೆ.

ಮಂಗಳಮುಖಿಯರು ಬನ್ನೇರುಘಟ್ಟದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಸುಡುವ ಬಿಸಿಲಿನಲ್ಲಿ ಬರಿಗಾಲಿನಲ್ಲಿ ಚಂಡೆ, ತಮಟೆಯ ತಾಳಕ್ಕೆ ಕುಣಿಯುತ್ತಾ ಎರಡು ಕಿ.ಮೀ. ದೂರದ ಬೇಗಿಹಳ್ಳಿಯ ಬೇಗಳಮ್ಮ ದೇವಾಸ್ಥಾನಕ್ಕೆ ತೆರಳಿ ಮಂಗಳಮುಖಿಯರ ಆರಾಧ್ಯದೈವವಾದ ಬೇಗಳಮ್ಮನಿಗೆ ಪೂಜೆ ಸಲ್ಲಿಸಿದರು.

ಮುಂದಿನ ಜನ್ಮದಲ್ಲಾದರೂ ತಮಗೆ ಒಳ್ಳೆಯದಾಗಲಿ ಎಂಬ ನಂಬಿಕೆಯಿಂದ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ. ಹಾಗಾಗಿ ಜಾತ್ರೆಯ ವೇಳೆಗೆ ಎಲ್ಲೆಡೆಯಿಂದ ಮಂಗಳಮುಖಿಯರ ದಂಡು ಬನ್ನೇರುಘಟ್ಟಕ್ಕೆ ಬರುತ್ತದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಹಲವಾರು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಕಳೆದ ವರ್ಷಗಳಿಗೆ ಹೋಲಿಸಿದರೆ ಭಕ್ತರ ಸಂಖ್ಯೆ ಕಡಿಮೆಯಿತ್ತು. ಜಾತ್ರೆಯಲ್ಲಿ ಸಾಂಪ್ರದಾಯಿಕ ಆಚರಣೆಗಳು ನಡೆದವು. ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದರ ಬಗ್ಗೆ ಹೆಚ್ಚಿನ ಗಮನ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT