ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಚಟುವಟಿಕೆಗೆ ನಿರ್ಬಂಧ ಇಲ್ಲ: ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರಿಗೆ ಅಭಯ

ಶಾಸಕರು, ಅಧಿಕಾರಿಗಳೊಂದಿಗೆ ಸಭೆ
Last Updated 14 ಏಪ್ರಿಲ್ 2020, 15:36 IST
ಅಕ್ಷರ ಗಾತ್ರ

ದೇವನಹಳ್ಳಿ: ರಾಜ್ಯದಲ್ಲಿ ಲಾಕ್‌ ಡೌನ್ ಮುಂದುವರಿಯಲಿದೆ. ಆದರೆ, ರೈತರ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ಮಾರ್ಚ್‌ 24ರಿಂದ ರಾಜ್ಯದಾದ್ಯಂತ ಲಾಕ್ ಡೌನ್ ಆಗಿರುವ ಪರಿಣಾಮ ರೈತರ ಸಮಸ್ಯೆ ಮತ್ತು ಸಂಕಷ್ಟ ಹೇಳತೀರದಾಗಿದೆ. ಅಂತರ ರಾಜ್ಯ ರಸ್ತೆ ಸರಕು ಸಾಗಾಣಿಕೆ ಬಂದ್ ಆಗಿದೆ. ಖರೀದಿದಾರರ ಸಮಸ್ಯೆ ಜತೆಗೆ ಸಾರ್ವಜನಿಕರ ದೈನಂದಿನ ಪರಿಕರಗಳ ಖರೀದಿಗೂ ಕಷ್ಟವಾಗಿದೆ ಎಂದು ಹೇಳಿದರು.

ಕೃಷಿ ಕ್ಷೇತ್ರದ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆ. ಮುಂಗಾರು ಕೃಷಿ ಚಟುವಟಿಕೆ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾವಾರು ಸಭೆ ನಡೆಸಿ ಮಾಹಿತಿ ಪಡೆಯಲಾಗುತ್ತಿದೆ ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರಸ್ತುತ ನೀರಾವರಿ ವ್ಯಾಪ್ತಿಯಲ್ಲಿ 277.7 ಹೆಕ್ಟೇರ್‌ನಲ್ಲಿ ಭತ್ತ, ರಾಗಿ ಮತ್ತು ಮುಸುಕಿನ ಜೋಳ ಬಿತ್ತನೆಯಾಗಿದೆ. ಮುಂಗಾರಿನಲ್ಲಿ ಒಟ್ಟು 60,403 ಹೆಕ್ಟೇರ್ ಗುರಿ ಇದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜ 7,970ಕ್ವಿಂಟಲ್ ಅಗತ್ಯವಿದೆ. 3,720 ಕ್ವಿಂಟಲ್ ದಾಸ್ತಾನು ಇದೆ. 34,780 ಮೆಟ್ರಿಕ್ ಟನ್ ಗೊಬ್ಬರ ಅಗತ್ಯವಿದ್ದು 2,495 ಮೆಟ್ರಿಕ್ ಟನ್ ಪೂರೈಕೆ ಆಗಿದೆ. 3,160 ಮೆಟ್ರಿಕ್ ಟನ್ ಈ ಹಿಂದಿನ ವರ್ಷದ ಗೊಬ್ಬರ ದಾಸ್ತಾನು ಇದೆ’ ಎಂದು ತಿಳಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ದೇವನಹಳ್ಳಿ ನಗರ ವ್ಯಾಪ್ತಿ ಬೆಂಗಳೂರು ನಗರ ಪೊಲೀಸ್ ಇಲಾಖೆ ಸರಹದ್ದಿನಲ್ಲಿದೆ. ಗ್ರಾಮೀಣ ಪ್ರದೇಶದಿಂದ ರೈತರು ವಿವಿಧ ಪರಿಕರ ಖರೀದಿಸಲು ಬಂದರೆ ಪೊಲೀಸರು ಬಿಡುತ್ತಿಲ್ಲ. ಹೂವು, ದ್ರಾಕ್ಷಿ, ತರಕಾರಿ ಬೆಳೆದ ರೈತರು ಲಾಕ್‌ಡೌನ್‌ ಪರಿಣಾಮ ಒಂದು ರೀತಿಯಲ್ಲಿ ಕೋಮಾ ಸ್ಥಿತಿಗೆ ತಲುಪಿದ್ದಾರೆ ಎಂದರೂ ತಪ್ಪಲ್ಲ’ ಎಂದು ಹೇಳಿದರು.

ರೈತ ಮುಖಂಡರಾದ ರಮೇಶ್ ಹಾಗೂ ಕೆ.ಎಸ್.ಹರೀಶ್ ಮಾತನಾಡಿ, ‘ಕೃಷಿ ಇಲಾಖೆ ಪ್ರತಿ ಎಕರೆಗೆ 5ಕೆ.ಜಿ ರಾಗಿ, 5ಕೆ.ಜಿ ಮುಸಕಿನ ಜೋಳ ನೀಡುತ್ತದೆ ಇದು ಸಾಕಾಗದು. ಕನಿಷ್ಠ ರಾಗಿ 10, ಮುಸುಕಿನ ಜೋಳ 8 ಕೆ.ಜಿ ನೀಡಬೇಕು’ ಎಂದು ಕೋರಿದರು.

ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಕೆಂಚೇಗೌಡ ಮಾತನಾಡಿ, ‘ಬೆಳೆ ಉತ್ಪಾದನೆ ಮಾಡುತ್ತಿರುವ ರೈತರಿಗೆ ಮತ್ತು ಗ್ರಾಹಕರಿಗೆ ನಷ್ಟದ ಜೊತೆಗೆ ವಂಚನೆಯಾಗುತ್ತಿದೆ’ ಎಂದು ಗಮನ ಸೆಳೆದರು.

ಶಾಸಕರಾದ ಶರತ್ ಬಚ್ಚೇಗೌಡ, ವೆಂಕಟರಮಣಯ್ಯ, ಡಾ.ಶ್ರೀನಿವಾಸ್ ಮೂರ್ತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT