ಮಂಗಳವಾರ, ನವೆಂಬರ್ 19, 2019
23 °C

ಸಾಮಾಜಿಕ ಜಾಲತಾಣ ನೈಜ ಕಲೆಗೆ ಮಾರಕ

Published:
Updated:
Prajavani

ದೊಡ್ಡಬಳ್ಳಾಪುರ: ಆಧುನಿಕ ಬದುಕಿನಲ್ಲಿ ಸಾಮಾಜಿಕ ಜಾಲತಾಣಗಳು ನೈಜ ಕಲೆಯ ನಾಶಕ್ಕೆ ಮೂಲ ಕಾರಣವಾಗಿವೆ. ನಿಜವಾದ ಕಲೆಗೆ ಎಲ್ಲರೂ ಬೆಲೆ ಕೊಟ್ಟಾಗ ಕಲೆಯ ಶ್ರೀಮಂತಿಕೆ ಉಳಿಯಲು ಸಾಧ್ಯವಾಗಲಿದೆ ಎಂದು ರಾಜ್ಯ ವಿಜ್ಞಾನ ಪರಿಷತ್‌ ರಾಜ್ಯ ಉಪಾಧ್ಯಕ್ಷ ಹುಲಿಕಲ್ ನಟರಾಜ್ ಹೇಳಿದರು.

ಅವರು ತಾಲ್ಲೂಕಿನ ಕಂಟನಕುಂಟೆ ಗ್ರಾಮದ ಹಿರಿಯ ಕಲಾವಿದ ಕೆ.ಎಂ.ಕೃಷ್ಣಮೂರ್ತಿ ನಿವಾಸದಲ್ಲಿ ದೇವನಹಳ್ಳಿ ತಾಲ್ಲೂಕು ಕನ್ನಡ ಕಲಾವಿದರ ಸಂಘದಿಂದ ಆಯೋಜಿಸಲಾಗಿದ್ದ 60ನೇ ಮಾಸದ ಕನ್ನಡ ದೀಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿರಿಯ ಕಲಾವಿದರು ನೈಜ ಕಲೆಯ ಸತ್ವವನ್ನು ನೀಡಿದ್ದರ ಪರಿಣಾಮ ಇಂದು ಕಲೆಯಲ್ಲಿ ಜೀವಂತಿಕೆ ಕಾಣಬಹುದಾಗಿದೆ. ವ್ಯಕ್ತಿ ಮಾನಸಿಕ ಖಿನ್ನತೆಯಿಂದ ಹೊರಗಡೆ ತರುವಲ್ಲಿ ಕಲೆಯು ಪರಿಣಾಮಕಾರಿಯಾಗಿದೆ. ಮನಸ್ಸಿನ ನೋವು ಕಡಿಮೆ ಮಾಡಿ ಪ್ರಶಾಂತತೆಯ ಸ್ಥಿತಿ ಉಂಟು ಮಾಡುತ್ತದೆ. ನಿಜವಾದ ಕಲೆಗೆ ಜನ ಬೆಲೆ ಕೊಡುತ್ತಾರೆ. ದೊಡ್ಡಬಳ್ಳಾಪುರದಲ್ಲಿ ಗಂಡುಕಲೆಯ ಕಲಾವಿದರು ಯಕ್ಷಗಾನ ಬಯಲಾಟದಂತಹ ಪಾತ್ರಗಳಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ’ ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎನ್‌.ಹನುಮಂತೆಗೌಡ ಮಾತನಾಡಿ, ‘ವೃತ್ತಿ ಬದುಕಿನ ಬೆಳವಣಿಗೆಗೆ ಮೂಲ ಕಾರಣ ಕಲೆಯಾಗಿದೆ. ಕಲಾವಿದನಾಗಿ ಗುರುತಿಸಿಕೊಂಡು ಸಾಧನೆ ಮಾಡಿದ್ದೇನೆ. ಬರುವ ದಿನಗಳಲ್ಲಿ ಇಂತಹ ಕನ್ನಡ ದೀಪ ಕಾರ್ಯಕ್ರಮಗಳು ಆಯೋಜಿಸಲು ಸಹಕಾರ ನೀಡಲಾಗುವುದು’ ಎಂದರು.

ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಂಗಭೂಮಿ ಕಲಾವಿದ ಕೆ.ಎಂ.ಕೃಷ್ಣಮೂರ್ತಿ ಮಾತನಾಡಿ, ‘ಕನ್ನಡ ದೀಪ ಕಾರ್ಯಕ್ರಮವು ನಮ್ಮ ತಾಲ್ಲೂಕಿನಲ್ಲೂ ಆರಂಭಿಸಲಾಗುವುದು. ನೈಜ ಕಲೆಗೆ ಪ್ರೋತ್ಸಾಹ ನೀಡಿದರೆ ಕಲಾವಿದರು ಮುಂದೆ ಬರಲು ಸಾಧ್ಯವಾಗುತ್ತದೆ. ನಿಜವಾದ ಕಲೆಯು ಮನಸ್ಸುಗಳನ್ನು ಬೆಸೆದು ಐಕ್ಯತೆ ಮೂಡಿಸುತ್ತದೆ. ಪ್ರತಿಯೊಬ್ಬ ಕಲಾವಿದರು ತನ್ನ ಪಾತ್ರಕ್ಕೆ ಜೀವ ತುಂಬಿದರೆ ಮಾತ್ರ ಅದು ನೋಡುಗರ ಗಮನ ಸೆಳೆಯಲು ಸಾಧ್ಯ. ಕನ್ನಡ ಸಾಹಿತ್ಯದ ಭಾವಗೀತೆ ಜನಪದ ಸೊಗಡನ್ನು ತಿಳಿಸಬೇಕಾಗಿದೆ. ನಮ್ಮ ಕನ್ನಡ ಭಾಷೆಯ ಸ್ಥಿತಿಗತಿಗಳ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ನಾಡು ನುಡಿ ಕಟ್ಟಲು ಎಲ್ಲರೂ ಒಂದಾಗಬೇಕು’ ಎಂದರು.

ಕಾರ್ಯಕ್ರಮದಲ್ಲಿ ದೇವನಹಳ್ಳಿ ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಜಗೋಪಾಲ್, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷ ಚಿ.ಮಾ.ಸುದಾಕರ್, ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರಮೀಳ ಮಹದೇವ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್, ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ರಾಮಾಂಜಿನಪ್ಪ, ನೆಲಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹೊಂಬಯ್ಯ, ಮುಖಂಡರಾದ ರಬ್ಬನಹಳ್ಳಿ ಕೆಂಪಣ್ಣ, ಡಾ.ವಿ.ಎನ್ ರಮೇಶ್, ಬಿ.ಜಿ.ಅಮರ್‌ನಾಥ್, ನಂ.ಮಹದೇವ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಇದ್ದರು.

 

ಪ್ರತಿಕ್ರಿಯಿಸಿ (+)