ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾಸಗಿ ಶಾಲೆಗಳ ಸಮಸ್ಯೆಗಳಿಗೆ ಸ್ಪಂದಿಸಿ’

ರಾಜ್ಯ ಸರ್ಕಾರದ ನಡೆಗೆ ಅನುದಾನರಹಿತ ಶಾಲೆಗಳ ಒಕ್ಕೂಟದ ಖಂಡನೆ
Last Updated 4 ಮಾರ್ಚ್ 2021, 2:31 IST
ಅಕ್ಷರ ಗಾತ್ರ

ಆನೇಕಲ್:ಸರ್ಕಾರ ಅನುದಾನರಹಿತ ಶಾಲೆಗಳ ಬೇಡಿಕೆಗಳಿಗೆ ಸ್ಪಂದಿಸಬೇಕು. ಖಾಸಗಿ ಶಾಲೆಗಳು ತೀವ್ರ ಸಂಕಷ್ಟದಲ್ಲಿವೆ. ಹಾಗಾಗಿ ಸರ್ಕಾರ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಬೇಕು ಎಂದು ತಾಲ್ಲೂಕು ಅನುದಾನರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಡಿ. ಮುನಿರಾಜು ತಿಳಿಸಿದರು.

ತಾಲ್ಲೂಕಿನ ಕಿತ್ತಗಾನಹಳ್ಳಿಯಲ್ಲಿ ಸಂಘದಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸರ್ಕಾರ ಘೋಷಣೆ ಮಾಡುವ ಮುನ್ನವೇ ಆನೇಕಲ್‌ ತಾಲ್ಲೂಕಿನಲ್ಲಿ ಶುಲ್ಕದಲ್ಲಿ ಶೇಕಡ 30 ರಿಂದ 40ರಷ್ಟು ರಿಯಾಯಿತಿ ನೀಡಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವೇತನ ನೀಡಿ ಶಾಲೆಯನ್ನು ನಿರ್ವಹಣೆ ಮಾಡುವುದು ಅತ್ಯಂತ ಕಠಿಣವಾಗಿದೆ. ಆನ್‌ಲೈನ್‌ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ, ಶಾಲಾ ಶುಲ್ಕ ಪಾವತಿಯ ಪ್ರಮಾಣ ಅತ್ಯಂತ ಕಡಿಮೆಯಿದೆ. ಹಾಗಾಗಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ಆದರೆ, ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.

ಶಾಲೆಗಳ ಅನುಮತಿ ಸಂಬಂಧ ಹಲವಾರು ಸಮಸ್ಯೆಗಳು ತಲೆದೋರಿವೆ. ಅಗ್ನಿಶಾಮಕ, ಕಟ್ಟಡ ಸುರಕ್ಷತೆ ಇವುಗಳನ್ನು ಕಡ್ಡಾಯ ಮಾಡಲಾಗಿದೆ. ಹೊಸ ಶಾಲೆಗಳಿಗೆ ನಿಯಮ ಅನ್ವಯಿಸಲು ಅಡ್ಡಿಯಿಲ್ಲ. ಆದರೆ, ಹಲವಾರು ವರ್ಷಗಳಿಂದ ಅನುಮತಿ ಪಡೆದು ನಡೆಸುತ್ತಿರುವ ಶಾಲೆಗಳಿಗೆ ಏಕಾಏಕಿ ನಿಬಂಧನೆಗಳನ್ನು ವಿಧಿಸಿರುವುದನ್ನು ತೆರವುಗೊಳಿಸಬೇಕು. ಇದಕ್ಕೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ಕ್ಯಾಮ್ಸ್‌ನ ರಾಜ್ಯ ಪದಾಧಿಕಾರಿ ರೇಣುಕೇಶ್‌ ಮಾತನಾಡಿ, ಮಾನ್ಯತೆ ನವೀಕರಣ ಸಂಬಂಧ ಹಲವಾರು ಸಮಸ್ಯೆಗಳಿವೆ. ಈ ಸಂಬಂಧ ಕ್ಯಾಮ್ಸ್‌ನ ಸದಸ್ಯರ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ. ಸರ್ಕಾರದ ಗಮನ ಸೆಳೆಯುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಲ್ಲಾ ಹಂತದಲ್ಲೂ ಒತ್ತಡ ಹೇರಲಾಗುತ್ತಿದೆ ಎಂದರು.

ಸರ್ವ ಸದಸ್ಯರ ಸಭೆ: ಆನೇಕಲ್‌ ತಾಲ್ಲೂಕು ಅನುದಾನ ರಹಿತ ಶಾಲೆಗಳ ಒಕ್ಕೂಟದ ಸರ್ವ ಸದಸ್ಯರ ಸಭೆ ಕಿತ್ತಗಾನಹಳ್ಳಿಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಒಕ್ಕೂಟದ ಅಧ್ಯಕ್ಷರಾಗಿ ಡಿ. ಮುನಿರಾಜು, ಉಪಾಧ್ಯಕ್ಷರಾಗಿ ಅಜ್ಜಪ್ಪ ಮತ್ತು ವಿಧಾತ್‌, ಪ್ರಧಾನ ಕಾರ್ಯದರ್ಶಿಯಾಗಿ ಶೇಖರ್‌, ಜಂಟಿ ಕಾರ್ಯದರ್ಶಿಯಾಗಿ ಜ್ಯೋತಿಗೌಡ, ಸಂಘಟನಾ ಕಾರ್ಯದರ್ಶಿಯಾಗಿ ಎನ್. ಸುರೇಶ್, ಆಂತರಿಕ ಲೆಕ್ಕಾಧಿಕಾರಿಗಳಾಗಿ ಥಾಮಸ್‌ ಮತ್ತು ಅಶೋಕ್‌, ಹೆಬ್ಬಗೋಡಿ ಕ್ಲಸ್ಟರ್‌ ಉಪಾಧ್ಯಕ್ಷರಾಗಿ ಕೃಷ್ಣಪ್ಪ, ರಾಜೇಶ್‌ ನಾಯ್ಕ್‌, ಚಂದಾಪುರ ಕ್ಲಸ್ಟರ್‌ ಉಪಾಧ್ಯಕ್ಷರಾಗಿ ಮುನಿರಾಜು, ಸುರೇಶ್, ಸರ್ಜಾಪುರ ಕ್ಲಸ್ಟರ್‌ ಉಪಾಧ್ಯಕ್ಷರಾಗಿ ಕೃಷ್ಣಮೂರ್ತಿ, ಶಿವಶಂಕರ್‌, ಅತ್ತಿಬೆಲೆ ಕ್ಲಸ್ಟರ್‌ ಉಪಾಧ್ಯಕ್ಷರಾಗಿ ಬಿ.ಎಲ್. ಸುರೇಶ್, ಲಕ್ಷ್ಮಣ್‌, ಜಿಗಣಿ ಕ್ಲಸ್ಟರ್‌ ಉಪಾಧ್ಯಕ್ಷರಾಗಿ ರಾಹುಲ್‌ ಮತ್ತು ಅನಂತ್‌ಸಿಂಗ್‌, ಆನೇಕಲ್‌ ಕ್ಲಸ್ಟರ್‌ ಉಪಾಧ್ಯಕ್ಷರಾಗಿ ಸುಮ ಮಧು ಮತ್ತು ಗೌರಮ್ಮ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT