ಗುರುವಾರ , ಡಿಸೆಂಬರ್ 12, 2019
16 °C
ವಿಜಯಪುರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೂತನ ಶಾಖೆ ಉದ್ಘಾಟನೆ

ಪಡೆದ ಸಾಲ ಸರಿಯಾದ ಉದ್ದೇಶಕ್ಕೆ ಬಳಕೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸ್ಟೇಟ್ ಬ್ಯಾಂಕ್ ಇಂಡಿಯಾ ವಿಜಯಪುರ ಶಾಖೆ ಆರಂಭದಿಂದ ಇದುವರೆಗೂ ₹100ಕೋಟಿಯಷ್ಟು ವ್ಯವಹಾರ ನಡೆದಿದೆ. ಗ್ರಾಹಕರೊಂದಿಗೆ ಉತ್ತಮ ಸಂಪರ್ಕ ಸಾಧಿಸಿರುವ ತೃಪ್ತಿ ಇದೆ ಎಂದು ಸ್ಥಳೀಯ ಪ್ರಧಾನ ಕಚೇರಿ ಪ್ರಧಾನ ವ್ಯವಸ್ಥಾಪಕ ಎಸ್.ಮುರಳೀಧರನ್ ಹೇಳಿದರು.

ಇಲ್ಲಿ ಚನ್ನರಾಯಪಟ್ಟಣ ಸರ್ಕಲ್‌ನಿಂದ ಹಳೆ ಕೆನರಾಬ್ಯಾಂಕ್ ರಸ್ತೆಗೆ ಸ್ಥಳಾಂತರಗೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಬ್ಯಾಂಕ್‌ ಆಗಲಿ ಅದರ ಪ್ರಮುಖ ಗುರಿ ಗ್ರಾಹಕನಿಗೆ ಸೇವೆ ಸಲ್ಲಿಸುವುದೇ ಆಗಿದೆ. ಗ್ರಾಹಕನೇ ಬ್ಯಾಂಕ್‌ನ ಬಂಡವಾಳ. ಪ್ರತಿಯೊಬ್ಬ ಗ್ರಾಹಕನಿಗೆ ಶೂನ್ಯ ಹೂಡಿಕೆಯಡಿ ಖಾತೆ ತೆರೆಯಲು ಅವಕಾಶವಿದೆ. ಗೃಹ ನಿರ್ಮಾಣ, ವಾಹನ ಖರೀದಿ, ಚಿನ್ನದ ಮೇಲೆ ಸಾಲ ವಿತರಣೆ ಮಾಡಲು ಅವಕಾಶ ಬ್ಯಾಂಕಿನಲ್ಲಿವೆ. ಇಲ್ಲಿ ಪಡೆಯುವಂತಹ ಸಾಲ ನಿರ್ದಿಷ್ಟ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವ ಮೂಲಕ ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕ್‌ಗಳ ಏಳಿಗೆಯಲ್ಲಿ ಕೈಜೋಡಿಸಬೇಕೆಂದು ಹೇಳಿದರು.

ಮುಂದಿನ ಎರಡು ವರ್ಷದಲ್ಲಿ ₹150ಕೋಟಿಯಷ್ಟು ವಹಿವಾಟು ನಡೆಸುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಬೇಕು. ಪ್ರತಿಯೊಬ್ಬ ಗ್ರಾಹಕ ಎಟಿಎಂ ಕಾರ್ಡ್‌ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಉಪಪ್ರಧಾನ ವ್ಯವಸ್ಥಾಪಕ ಸಂಜಯ.ವಿ.ಎಸ್.ಮಾತನಾಡಿ, ಗ್ರಾಮೀಣ ಜನರ ಆರ್ಥಿಕ ಪ್ರಗತಿಯಲ್ಲಿ ಬ್ಯಾಂಕ್‌ಗಳು ಗಣನೀಯ ಪಾತ್ರ ವಹಿಸುತ್ತಿವೆ. ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ಪದವೀಧರರು ಹಾಗೂ ಅನುಭವಿ ವೃತ್ತಿಪರರ ಬದುಕಿಗೆ ಸಾಕಷ್ಟು ಅವಕಾಶವಿದೆ. ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಬ್ಯಾಂಕ್‌ ಸಿಬ್ಬಂದಿ ಕೂಡ ಇಲ್ಲಿಗೆ ಬರುವ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳಬೇಕು. ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಕಿವಿಮಾತು ಹೇಳಿದರು.

ಇಂಡೋ – ಟಿಬೆಟಿಯನ್ ಬಾರ್ಡರ್ ಪೊಲೀಸ್ ಕಮಾಡೆಂಟ್ ಸೇಂದಿಲ್ ಕುಮಾರ್ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಬ್ಯಾಂಕ್‌ಗಳ ಪಾತ್ರ ಮಹತ್ತರವಾದದ್ದು. ದೇಶದ ನಾಗರಿಕರ ಭವಿಷ್ಯದ ದೃಷ್ಟಿಯಿಂದ ಬ್ಯಾಂಕ್‌ಗಳಲ್ಲಿ ವ್ಯವಹರಿಸುವುದನ್ನು ರೂಢಿಸಿಕೊಳ್ಳಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ಮಂದಿಗೆ ಬ್ಯಾಂಕ್‌ಗಳಲ್ಲಿ ವ್ಯವಹರಿಸುವ ಬಗ್ಗೆ ಮಾಹಿತಿ ಕೊರತೆ ಇದೆ. ಅವರನ್ನು ಜಾಗೃತಿಗೊಳಿಸುವ ಮೂಲಕ ಬ್ಯಾಂಕ್‌ಗಳ ಸೇವೆ ತಿಳಿಸಿಕೊಡಬೇಕಾಗಿದೆ ಎಂದರು.

ಶಾಖಾ ವ್ಯವಸ್ಥಾಪಕಿ ಅನ್ನಿಪ್ರಮೋದ್ ಗೋನಿ ಮಾತನಾಡಿ, ಸ್ಥಳೀಯ ಬ್ಯಾಂಕ್‌ನ ಏಳಿಗೆ ಗ್ರಾಹಕರ ಕೈಯಲ್ಲಿದೆ. ಗ್ರಾಹಕರೇ ಹೂಡಿಕೆ ಮಾಡಿದ ಹಣವನ್ನು ಜನರಿಗೆ ಸಾಲದ ರೂಪದಲ್ಲಿ ಕೊಡಲಾಗಿದೆ. ಇಂತಹ ಸಾಲ ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಇತರರಿಗೆ ಅನುಕೂಲವಾಗುವಂತೆ ಗಮನಹರಿಸಬೇಕು. ಸಾಲ ಪಡೆಯಬೇಕಾದರೆ ಮುಖ್ಯವಾಗಿ ಸಿಬಿಲ್ ಸ್ಕೋರ್ 700ಕ್ಕೂ ಮೇಲ್ಪಟ್ಟು ಇರಬೇಕಾಗುತ್ತದೆ. ಇದನ್ನು ಗ್ರಾಹಕರು ಗಮನದಲ್ಲಿಟ್ಟುಕೊಳ್ಳಬೇಕು. ಸಾಲ ಪಡೆದ ಉದ್ದೇಶಕ್ಕಾಗಿ ಮಾತ್ರವೇ ಬಳಕೆ ಮಾಡಿಕೊಳ್ಳಬೇಕು ಎಂದರು.

ಬ್ಯಾಂಕ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ನೂತನವಾಗಿ ಮಂಜೂರಾಗಿರುವ ಸಾಲದ ಪತ್ರಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಯಿತು. ಶಾಲಾ ಮಕ್ಕಳಿಗೆ ಬ್ಯಾಗ್‌ ವಿತರಿಸಲಾಯಿತು. ಪ್ರಾದೇಶಿಕ ವ್ಯವಸ್ಥಾಪಕ ಕಿಶೋರ್‌ಕುಮಾರ್ ಪಿ.ಪಾಟೀಲ, ವ್ಯವಸ್ಥಾಪಕಿ ದೇವಿ, ಸಮೀಪದ ಬ್ಯಾಂಕ್‌ ಸಿಬ್ಬಂದಿ ಇದ್ದರು.

ಪ್ರತಿಕ್ರಿಯಿಸಿ (+)