ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ದುಡಿಯುವ ಜನರ ಧ್ವನಿಯಾಗಲಿ

‘ಹೊಂಜರಿಯದ ಮಂಜು’ ಮತ್ತು ‘ಭಾವ ವೈಭವ’ ಕೃತಿ ಬಿಡುಗಡೆ
Last Updated 21 ಜುಲೈ 2019, 13:27 IST
ಅಕ್ಷರ ಗಾತ್ರ

ದೇವನಹಳ್ಳಿ: ಸಮಾಜದಲ್ಲಿರುವ ಜಡತ್ವ ತೊಲಗಿಸಲು ದುಡಿಯುವ ಜನರ ದನಿಯಾಗಿ ಸಾಹಿತ್ಯ ಕೃಷಿಯಾಗುವ ಅವಶ್ಯಕತೆ ಇದೆ ಎಂದು ಸಾಹಿತಿ ಕಾರಹಳ್ಳಿ ಶ್ರೀನಿವಾಸ್ ಹೇಳಿದರು.

ಇಲ್ಲಿನ ಗುರುಭವನದಲ್ಲಿ ಡಾ. ಸಿದ್ದಲಿಂಗಯ್ಯ ಪ್ರತಿಷ್ಠಾನ ವತಿಯಿಂದ ಸುರವಿಸುತ ತಿಂಡ್ಲು ಅವರ ‘ಹೊಂಜರಿಯದ ಮಂಜು’ ಮತ್ತು ಆ.ನಾ. ಕೃಷ್ಣ ನಾಯಕ್ ರವರ ‘ಭಾವ ವೈಭವ’ ಪ್ರಥಮ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೊಸದಿಕ್ಕು ಮತ್ತು ವೈಚಾರಿಕತೆಯ ನೆಲೆಗಟ್ಟಿನಲ್ಲಿ ಹೊಸ ಹುರುಪು ತರುವ ಕವಿತೆಗಳು ಇಂದಿನ ಯುವ ಸಮುದಾಯಕ್ಕೆ ಅವಶ್ಯಕತೆ ಇದೆ. ಹಸಿವಿನ ವ್ಯಥೆ, ಅಸ್ಪೃಶ್ಯತೆ, ನೋವು, ಗಟ್ಟಿಯಾಗಿ ತಳವೂರಿರುವ ಮೌಢ್ಯತೆಯ ಜಾಡ್ಯವನ್ನು ಬರವಣಿಗೆಯ ಮೂಲಕ ಸಮಾಜದಲ್ಲಿನ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಾಗಿದೆ ಎಂದರು.

ಸಾಹಿತಿ ಬ್ಯಾಡರಹಳ್ಳಿ ಶಿವರಾಜು ಮಾತನಾಡಿ, ‘ಕೃತಿ, ಕವಿತೆ, ಕಾದಂಬರಿ ಬರಬೇಕಾದರೆ ಮೊದಲು ಶ್ರೇಷ್ಠ ಸಾಹಿತಿಗಳ ಬರಹಗಳನ್ನು ಓದಬೇಕು, ನೋವು ನಲಿವು ಭಾವನೆಗಳನ್ನು ತಮ್ಮ ಅಭಿಪ್ರಾಯದಲ್ಲಿ ಬರವಣಿಗೆ ಮೂಲಕ ವ್ಯಕ್ತಪಡಿಸುವುದೇ ಸಾಹಿತ್ಯ ಕೃಷಿ’ ಎಂದರು.

ಬರಿ ಕನ್ನಡ ಭೋದಕರಿಂದ ಸಾಹಿತ್ಯ ಉಳಿದಿಲ್ಲ. ವಿವಿಧ ವೃತ್ತಿಯಲ್ಲಿರುವವರು ಸಾಹಿತಿಗಳಾಗಿದ್ದಾರೆ. ನಾನು ಬರೆಯಬಲ್ಲೆ ಎಂಬ ಆತ್ಮವಿಶ್ವಾಸವಿರಬೇಕು. ತಲ್ಲಣ, ತುಮುಲಗಳನ್ನು ಅನಾವರಣಗೊಳಿಸಿ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುವಂತಿರಬೇಕು’ ಎಂದು ಹೇಳಿದರು.

ಸಾಹಿತಿ ಉದಂತ ಶಿವಕುಮಾರ್ ಮಾತನಾಡಿ, ಆರಿಸಿಕೊಳ್ಳುವ, ಓದಿಸಿಕೊಳ್ಳುವ ಪರಂಪರೆಗೆ ಜೋಪಾನ ಮಾಡುವ ಕವಿತೆಗಳು ಇಂದಿನ ಸಮಾಜಕ್ಕೆ ಬೇಕಾಗಿದೆ ಎಂದು ಹೇಳಿದರು.

ಕವನ ಸಂಕಲನಕಾರ ಸುರವಿಸುತ ತಿಂಡ್ಲು ಮಾತನಾಡಿ, ‘ನನ್ನ ಜೀವನದಲ್ಲಿ ನಡೆದ ಸತ್ಯ ಘಟನೆಗಳನ್ನೇ ಕವನ ರೂಪದಲ್ಲಿ ಮೊದಲ ಬಾರಿಗೆ ಹೊರತಂದಿದ್ದೇನೆ. ಪ್ರತಿಯೊಬ್ಬರೂ ಸಾಯುವುದು ಖಚಿತವಾದರೂ ಮೃತದೇಹ ಸುಡುವ ಬದಲು ದಾನ ಮಾಡಿ ಸಾವಿನಲ್ಲಿಯೂ ಸಾರ್ಥಕತೆಯಾಗಬೇಕು. ಮೃತದೇಹ ದಾನಕ್ಕೆ ನಾನು ಈಗಾಗಲೇ ನೋಂದಾಯಿಸಿಕೊಂಡಿದ್ದೇನೆ’ ಎಂದರು.

ಡಾ. ಸಿದ್ದಲಿಂಗಯ್ಯ ಪ್ರತಿಷ್ಠಾನದ ಅಧ್ಯಕ್ಷ ಮುದಲ್ ವಿಜಯ್, ಬೆಂಗಳೂರು ಕನ್ನಡ ಆಧ್ಯಯನ ಕೇಂದ್ರ ಅಧ್ಯಕ್ಷ ಗಂಗಾಧರ್, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ. ಸುಧಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ, ಸಾಹಿತಿಗಳಾದ ಶಶಿಕಾಂತ್ ರಾವ್, ಅ.ನಾ. ಕೃಷ್ಣಾನಾಯಕ್, ಬೈರಮಂಗಲ ರಾಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT