ಮಂಗಳವಾರ, ಸೆಪ್ಟೆಂಬರ್ 21, 2021
26 °C
ಮದ್ಯದ ಹೊಳೆ ಹರಿವಿಗೆ ಕೊರೊನಾದಿಂದ ತಾತ್ಕಾಲಿಕ ತಡೆ * ಸರ್ಕಾರದ ಬೊಕ್ಕಸಕ್ಕೂ ಅಪಾರ ನಷ್ಟ

ಮದ್ಯ ಪ್ರಿಯರಿಗೆ ಶುರುವಾದ ಚಡಪಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಸರ್ಕಾರದ ಬೊಕ್ಕಸಕ್ಕೆ ಅತಿ ಹೆಚ್ಚು ರಾಜಸ್ವ ಹರಿದು ಬರುತ್ತಿರುವುದು  ಅಬಕಾರಿ ಇಲಾಖೆಯಿಂದ. ಆದರೆ, ಮದ್ಯದ ಹೊಳೆ ಹರಿವಿಗೆ ಕೊರೊನಾ ತಾತ್ಕಾಲಿಕ ತಡೆ ನೀಡಿದೆ.

ಕೊರೊನಾ ರಾಜ್ಯಕ್ಕೆ ಕಾಲಿಟ್ಟ ಒಂದೆರಡು ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಮೇರೆಗೆ ಒಂದು ದಿನ ಸ್ವಯಂ  ಬಂದ್‌ ಆಗಿದ್ದ ಮದ್ಯವ್ಯಸನಿಗಳು ಮತ್ತು ಮದ್ಯ ಮಾರಾಟಗಾರರು ನಂತರ ಹೊರಡಿಸಿದ ಸುತ್ತೋಲೆಯಂತೆ ಇದುವರೆಗೂ ಮದ್ಯ ಮಾರಾಟ ನಡೆಸುತ್ತಿಲ್ಲ. ಇದರಿಂದ ಮದ್ಯಪ್ರಿಯರು ಚಡಪಡಿಸುವಂತೆ ಆಗಿದೆ.

ಕೆಂಪೇಗೌಡ ವಿಮಾನ ನಿಲ್ದಾಣ ಆರಂಭವಾದ ನಂತರ ದೇವನಹಳ್ಳಿ ಸುತ್ತಮುತ್ತ ಹೊರ ರಾಜ್ಯ, ಜಿಲ್ಲೆಗಳಿಂದ ಬಂದಿರುವ ಅಪಾರ ಪ್ರಮಾಣದ ಕಾರ್ಮಿಕರು ನೆಲೆನಿಂತಿದಿದ್ದಾರೆ. ಸಂಜೆ ಸುತ್ತಲಿನ ಬಾರ್‌ಗಳಿಗೆ ಮುಗಿ ಬೀಳುತ್ತಿದ್ದರು. ಬಾರ್ ಮಾಲೀಕರಿಗೂ ಭರ್ಜರಿ ವ್ಯಾಪಾರ ನಡೆಯುತ್ತಿದ್ದು. ಈಗ ಕೊರೊನಾ ಮಹಾಮಾರಿ ತಂದಿಟ್ಟಿರುವ ವಿಪತ್ತು ಎಲ್ಲವನ್ನೂ ತಲೆಕೆಳಗೆ ಮಾಡಿದೆ.   

ಕೊರೊನಾ ಸೋಂಕು ತಡೆಗಟ್ಟಲು ಮದ್ಯ ಮಾರಾಟ ನಿರ್ಬಂಧ ಮಾಡಿರುವುದುರಿಂದ ಸರ್ಕಾರದ ಬೊಕ್ಕಸಕ್ಕೂ ಅಪಾರ ನಷ್ಟವುಂಟಾಗಿದೆ. ದೇವನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ಮದ್ಯ ದಾಸ್ತಾನು ಕೇಂದ್ರದಿಂದ ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳಿಗೂ ಮದ್ಯ ಸರಬರಾಜು ನಡೆಯುತ್ತಿತ್ತು. ಈಗ ಎಲ್ಲದಕ್ಕೂ ತಡೆ ಆಗಿದೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಎರಡು ಎಂ.ಎಸ್.ಐ.ಎಲ್ ಮದ್ಯ ಮಾರಾಟ ಘಟಕ ಸೇರಿದಂತೆ ಒಟ್ಟು 49 ಮದ್ಯ ಮಾರಾಟ ಕೇಂದ್ರಗಳಿದ್ದು ಕಳೆದ ವರ್ಷ ದೊಡ್ಡಬಳ್ಳಾಪುರದಿಂದ ಒಂದು ಬಾರ್ ಆಂಡ್ ರೆಸ್ಟೋರೆಂಟ್ ದೇವನಹಳ್ಳಿ ತಾಲ್ಲೂಕು ಗ್ರಾಮೀಣ ಪ್ರದೇಶಕ್ಕೆ ಸ್ಥಳಾಂತರಗೊಂಡಿದೆ.

ಹಣಬೆಗಳಂತೆ ತಲೆ ಎತ್ತಿರುವ ಮದ್ಯದಂಗಡಿ ಮಾಲಿಕರಿಂದಲೇ ನೇರವಾಗಿ ಗ್ರಾಮೀಣ ಪ್ರದೇಶದಲ್ಲಿರುವ ಚಿಲ್ಲರ ಅಂಗಡಿಗಳಲ್ಲಿ ಅಕ್ರಮ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೊರೊನಾ ತಡೆಗಟ್ಟಲು ಬಂದ್ ಮಾಡುವಂತೆ ಸೂಚಿಸಿದ ಒಂದೆರಡು ತಾಸುಗಳಲ್ಲಿ ಕೊಟ್ಯಂತರ ಮೌಲ್ಯದ ವಿವಿಧ ಮಾದರಿಯ ಮದ್ಯ  ಆಯಾಕಟ್ಟಿನ ಸ್ಥಳಗಳಲ್ಲಿ ದಾಸ್ತಾನು ಮಾಡಿ ಎಗ್ಗಿಲ್ಲದೆ ಮಾರಾಟ ನಡೆದಿದೆ. ಇದಕ್ಕೆ ಅಬಕಾರಿ ಇಲಾಖೆಯೇ ಬೆಂಬಲ ನೀಡಿದೆ ಎಂದು ಆರೋಪಿಸುತ್ತಾರೆ ಮದ್ಯಮಾರಾಟ ವಿರೋಧಿ ಮತ್ತು ಜನಸೇನಾ ಸಂಘದ ಪದಾಧಿಕಾರಿಗಳು.

ಅಬಕಾರಿ ಇಲಾಖೆ ಮಾಹಿತಿ ಮೇರೆಗೆ 2014 ಜು.5ರಂದು ’ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ವರದಿ ಅನ್ವಯ ₹87ಕೋಟಿ ರಾಜಸ್ವ ಸಂಗ್ರಹ ಮಾಡಿತ್ತು. 2016ನೇ ಸಾಲಿನಲ್ಲಿ ₹103 ಕೋಟಿ  ಸರ್ಕಾರದ ಬೊಕ್ಕಸಕ್ಕೆ ಸೇರಿತ್ತು. ಪ್ರತಿವರ್ಷ ಸರ್ಕಾರ ವಿವಿಧ ಮದ್ಯ ಮಾರಾಟ ತೆರಿಗೆಯನ್ನು ಶೇ15 ರಿಂದ 22ರವರೆಗೆ ಏರಿಕೆ ಮಾಡುತ್ತಾ ಬಂದಿದೆ. ಅದೇ ರೀತಿ ಪ್ರತಿ ತಾಲ್ಲೂಕಿಗೆ ಇಂತಿಷ್ಟು ಗುರಿಯನ್ನು ನಿಗದಿ ಮಾಡುವುದರಿಂದ ಅನಿವಾರ್ಯವಾಗಿ ಒತ್ತಡ ಇರುತ್ತದೆ. 2019–20ನೇ ಸಾಲಿನಲ್ಲಿ ₹135 ಕೋಟಿ ತಾಲ್ಲೂಕಿಗೆ ಗುರಿ ನೀಡಲಾಗಿದೆ. ಬಹುತೇಕ ತಲುಪಿರುವುದಾಗಿ ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು