ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂ.ಗ್ರಾಮಾಂತರ: ಬಿದಿರಿಗೆ ಮತ್ತೆ ಜೀವಕಳೆ

ಪ್ಲಾಸ್ಟಿಕ್ ವಸ್ತುಗಳಿಂದ ಮಂಕಾಗಿದ್ದ ಮಾರುಕಟ್ಟೆ
Last Updated 1 ಅಕ್ಟೋಬರ್ 2022, 4:25 IST
ಅಕ್ಷರ ಗಾತ್ರ

ವಿಜಯಪುರ(ಬೆಂ.ಗ್ರಾಮಾಂತರ):ಆಧುನಿಕತೆಯ ಭರಾಟೆಯಲ್ಲಿ ಅಳಿವಿನಂಚಿಗೆ ಸಿಲುಕಿದ್ದ ಬಿದಿರಿಗೆ ಮತ್ತೆ ಜೀವಕಳೆ ಬಂದಿರುವುದು ಬಿದಿರು ಸಲಕರಣೆ ತಯಾರಿಕೆಯಲ್ಲಿ ತೊಡಗಿಸಿಕೊಂಡವರಲ್ಲಿ ಸ್ವಲ್ಪ ಸಮಾಧಾನ ಮೂಡಿಸಿದೆ.

ರೇಷ್ಮೆಹುಳು ಮೇಯಿಸುವ ತಟ್ಟೆಗಳು, ಹಣ್ಣು ಹುಳು ಕೊಂಡೊಯ್ಯುವ ಸಣ್ಣತಟ್ಟೆಗಳು, ಚಂದ್ರಿಕೆಗಳು, ಮಕ್ಕಳ ಮಲಗಿಸುವ ತೊಟ್ಟಿಲು, ಅಕ್ಕಿ, ರಾಗಿ ಕೇರುವ ಮೊರ, ಬುಟ್ಟಿ, ಕುರ್ಚಿ, ಮೇಜು, ಮಂಕರಿ, ಮೀನು ಹಿಡಿಯುವ ಬುಟ್ಟಿ, ಅಕ್ಕಿ ಕುಟ್ಟುವ ಕುದುರು, ಎಳೆ ಮಕ್ಕಳಿಗೆ ಬುಟ್ಟಿ, ಬೀಸಣಿಗೆ, ಕೋಳಿಗಳನ್ನು ಮುಚ್ಚುವ ಬುಟ್ಟಿಗಳು ಸೇರಿದಂತೆ ಹತ್ತು ಹಲವು ಬಗೆಯ ಸಲಕರಣೆಗಳನ್ನು ತಯಾರು ಮಾಡುತ್ತಿದ್ದರು.

ಇತ್ತೀಚೆಗೆ ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಪ್ಲಾಸ್ಟಿಕ್ ಕಾಲಿಟ್ಟಿರುವ ಪರಿಣಾಮ ಬಿದಿರಿನ ವಸ್ತುಗಳು ಮಾರುಕಟ್ಟೆ ಮಂಕಾಗಿತ್ತು. ಪ್ಲಾಸ್ಟಿಕ್ ವಸ್ತುಗಳಿಂದ ಆಗಬಹುದಾದ ದುಷ್ಪರಿಣಾಮ ಕುರಿತು ಜನರಲ್ಲಿ ಅರಿವು ಮೂಡುತ್ತಿರುವ ಕಾರಣ, ಇದೀಗ ಜನರು ಮತ್ತೆ ಬಿದಿರಿನ ವಸ್ತುಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ವಸ್ತುಗಳು ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ವ್ಯಾಪಾರಿ ಗೋಪಾಲ್ ಹೇಳುತ್ತಾರೆ.

ಬಿದಿರಿನಿಂದ ತಯಾರಿಸಿದ ವಸ್ತುಗಳು ದೀರ್ಘಕಾಲ ಬಾಳಿಕೆ ಬರುವಂತೆ ಮಾಡುವ ಕಲೆ ಗ್ರಾಮೀಣ ಮಹಿಳೆಯರಲ್ಲಿ ಕರಗತವಾಗಿದೆ. ಬಿಳಿ ಕುಸುಬೆಯನ್ನು ಚೆನ್ನಾಗಿ ಬೇಯಿಸಿ ಅದನ್ನು ಕುಟ್ಟಿ ಹದಗೊಳಿಸುವುದು ಮತ್ತು ಹುಣಸೆ ಬೀಜ ನೆನೆಸಿ ರುಬ್ಬಿ ಪೇಸ್ಟ್‌ ತಯಾರಿಸಿ, ಹದದೊಂದಿಗೆ ಮೊರ, ಬುಟ್ಟಿ ಮುಂತಾದವುಗಳಿಗೆ ಸವರಿ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಇದರಿಂದ ಮರಗಳು ಮತ್ತು ಬುಟ್ಟಿಗಳು ದೀರ್ಘಕಾಲ ಬಾಳಿಕೆ ಬರುತ್ತವೆ.

ಮೂಲೆಗುಂಪಾದ ವಸ್ತುಗಳು: ಮದುವೆ ಶಾಸ್ತ್ರಗಳಲ್ಲಿ ಬುಟ್ಟಿಗಳಿಗೆ ತನ್ನದೇ ಆದ ಸ್ಥಾನವಿತ್ತು. ಗೋಣಿ ಚೀಲ ಬಂದ ಮೇಲೆ ಬಹಳ ವರ್ಷ ಬುಟ್ಟಿ ಸಂಸ್ಕೃತಿ ಜಾರಿಯಲ್ಲಿತ್ತು. ಪ್ಲಾಸ್ಟಿಕ್‌ ವಸ್ತುಗಳು ಬಂದ ಮೇಲೆ ಬುಟ್ಟಿ, ಮೊರಗಳಿಗೆ ಸಂಬಂಧಿಸಿದ ಉಪಕರಣಗಳು ಮೂಲೆ ಗುಂಪಾಗುತ್ತಿವೆ.

ನಮ್ಮ ರಾಜ್ಯದಲ್ಲಿ ಕೆಲ ತಿಂಗಳ ಕಾಲ ಮಾತ್ರವೇ ಬಿದಿರು ಸಿಗುತ್ತದೆ. ಉಳಿದಂತೆ ಮಹಾರಾಷ್ಟ್ರದ ಕಡೆಯಿಂದ ಬಿದಿರು ತರಿಸಿಕೊಳ್ಳಬೇಕು. ಪ್ರಸ್ತುತ ನಾವು ಶಿರಸಿಯಿಂದ ಬಿದಿರು ತರಿಸಿಕೊಳ್ಳುತ್ತಿದ್ದೇವೆ. ಒಂದು ಗಳಕ್ಕೆ ₹ 170 ವೆಚ್ಚವಾಗುತ್ತದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.

ಹೊಸದಾಗಿ ಮನೆಗಳು ನಿರ್ಮಾಣ ಮಾಡುವವರು, ಮೇಲ್ಚಾವಣಿಯಲ್ಲಿ ಮೋಲ್ಡ್ ಹಾಕುವ ಮುಂಚೆ ಬಿದಿರಿನ ಚಾಪೆಗಳನ್ನು ಹಾಕುತ್ತಾರೆ. ಇದರಿಂದ ಬಿದಿರಿನ ಚಾಪೆಗಳಿಗೆ ಒಂದಷ್ಟು ಬೇಡಿಕೆ ಬರುತ್ತಿದೆ. ಜಾತ್ರೆಗಳಿಗೆ ಒಂದಷ್ಟು ಬುಟ್ಟಿಗಳು ಮಾಡಿಕೊಟ್ಟಿದ್ದೇವೆ. ಮನೆಗಳಲ್ಲಿ ಸ್ಟಾಂಡ್‌ಗಳನ್ನು ಮಾಡಿ ಹುಳು ಸಾಕಾಣಿಕೆ ಮಾಡುತ್ತಿರುವ ಕಾರಣ ತಟ್ಟೆಗಳನ್ನು ತಯಾರು ಮಾಡುತ್ತಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT