ಆ ತೋಟದ ಮನೆಯ ಅಂಗಳ ಪ್ರತಿ ಭಾನುವಾರ ಆಸ್ಪತ್ರೆಯಾಗಿ ರೂಪಾಂತರಗೊಳ್ಳುತ್ತದೆ. ವಿಶಾಲ ಗೇಟ್ ಎದುರು ಶಿಸ್ತಾಗಿ ಸರತಿಯಲ್ಲಿ ನಿಲ್ಲುವ ಜನರು, ಗೇಟ್ ತೆರೆಯುತ್ತಿದ್ದಂತೆಯೇ ಒಳ ಹೋಗಿ ವೈದ್ಯರ ಮುಂದೆ ಕುಳಿತುಕೊಳ್ಳುತ್ತಾರೆ. ಕೆಲವರು ರಾತ್ರಿಯೇ ಬಂದವರು; ಕೆಲವರು ಬೆಳಗಿನ ಮೊದಲ ಬಸ್ಸಿನಲ್ಲಿ ಇಳಿದವರು. ದೂರದ ಹಳ್ಳಿಗಳಿಂದ ಬಂದವರ ಕೈಯಲ್ಲಿ ಚಿಕ್ಕ ಚೀಲ, ವರದಿಗಳ ಕಡತ, ಕೆಲವರ ಮುಖದಲ್ಲಿ ದಣಿವು, ಕೆಲವರಲ್ಲಿ ನಿರೀಕ್ಷೆ. ಇಲ್ಲಿ ಚಿಕಿತ್ಸೆ, ಔಷಧ, ಮಾತ್ರೆಗಳು ಎಲ್ಲವೂ ಉಚಿತ. ಕೆಲವೊಮ್ಮೆ ಅಗತ್ಯವಿರುವವರಿಗೆ ಔಷಧೀಯ ಪರಿಕರಗಳೂ. ಫಲಕವಿಲ್ಲದ ಈ ‘ವಾರದ ಆರೋಗ್ಯ ಕ್ಲಿನಿಕ್’ಗೆ ಸರತಿಯಲ್ಲಿರುವ ಜನರೇ ವಿಳಾಸ; ಇದೇ ಅದರ ಗುರುತು, ಇದೇ ಅದರ ನಂಬಿಕೆ.
.ಗ್ರಾಮೀಣ ಚಿಕಿತ್ಸಾಲಯದ ರೂವಾರಿ ರಾವ್ಗೆ ಜನರೇ ಇಟ್ಟ ಹೆಸರು ‘ಭಾನುವಾರದ ಡಾಕ್ಟ್ರು’.
ಇದು ಬೆಂಗಳೂರಿನ ಹೃದ್ರೋಗ ತಜ್ಞ ಡಾ.ರಮಣ್ ರಾವ್ ಅವರ ‘ಭಾನುವಾರದ ಗ್ರಾಮೀಣ ಚಿಕಿತ್ಸಾಲಯ’. ಬೆಂಗಳೂರಿನಿಂದ ತುಮಕೂರಿಗೆ ಹೋಗುವ ರಸ್ತೆಯಲ್ಲಿ ನೆಲಮಂಗಲ ದಾಟಿದ ನಂತರ ಟಿ.ಬೇಗೂರು–ಬ್ಯಾಡರಹಳ್ಳಿ ಗೇಟ್ ಸಿಗುತ್ತದೆ. ಗೇಟ್ನಿಂದ ಎಡಕ್ಕೆ ತಿರುಗಿ 200 ಮೀಟರ್ ನಡೆದರೆ ತೋಟದ ಮನೆ ಕಾಣಿಸುತ್ತದೆ. ಒಳಗೆ ಚಟುವಟಿಕೆಯಿಂದ ಕೂಡಿರುವ ಚಿಕಿತ್ಸಾಲಯ–ಇದೊಂದೇ ಇದರ ವಿಶೇಷತೆ. 1973ರಲ್ಲಿ ಆರಂಭವಾದ ಈ ಕಾರ್ಯ ಈಗ ಐದು ದಶಕಗಳನ್ನು ದಾಟಿದೆ. ಪ್ರತಿ ಭಾನುವಾರ 700 ರಿಂದ 1000 ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಬೆಳಿಗ್ಗೆ 9ಕ್ಕೆ ಶುರುವಾಗುವ ಚಿಕಿತ್ಸಾ ಕಾರ್ಯ, ಸರತಿಯಲ್ಲಿರುವ ಕೊನೆಯ ರೋಗಿ ಹೊರಡುವವರೆಗೂ ಮುಂದುವರಿಯುತ್ತದೆ. ಕೆಲವೊಮ್ಮೆ ಸಂಜೆಗೂ ದಾಟುತ್ತದೆ. ಈವರೆಗೆ ಸುಮಾರು 20 ಲಕ್ಷ ಮಂದಿ ಇಲ್ಲಿ ಆರೋಗ್ಯ ಚಿಕಿತ್ಸೆ ಪಡೆದಿದ್ದಾರೆ ಎನ್ನುವ ಅಂದಾಜಿದೆ.

ಭಾನುವಾರ ಬೆಳಿಗ್ಗೆ ಡಾ.ರಮಣ್ ರಾವ್ ಗಣಪತಿಗೆ ಪೂಜೆ ಸಲ್ಲಿಸಿ, ಸರತಿಯಲ್ಲಿರುವವರಿಗೆ ನಮಸ್ಕರಿಸಿ ಸೇವೆ ಆರಂಭಿಸುತ್ತಾರೆ. ಒಳಗೆ ವರನಟ ಡಾ.ರಾಜ್ಕುಮಾರ್ ಅವರ ಗೀತೆಗಳು ನಿಧಾನವಾಗಿ ಕೇಳಿಬರುತ್ತಿದ್ದರೆ, (ಡಾ.ರಮಣ್ ರಾವ್ ರಾಜ್ ಕುಟುಂಬದ ವೈದ್ಯರು ಮತ್ತು ಅಭಿಮಾನಿ) ಹೊರಗೆ ಸ್ವಯಂ ಸೇವಕರು ರೋಗಿಗಳ ನೋಂದಣಿ ಮತ್ತು ಪ್ರಾಥಮಿಕ ಪರೀಕ್ಷೆಗಳಲ್ಲಿ ತೊಡಗಿರುತ್ತಾರೆ. ಒಂದೆಡೆ ರಕ್ತದ ಒತ್ತಡ ಪರೀಕ್ಷೆ, ಮತ್ತೊಂದೆಡೆ ಮಧುಮೇಹ ತಪಾಸಣೆ, ಇನ್ನೊಂದೆಡೆ ದಂತ ಚಿಕಿತ್ಸೆಯ ಸಿದ್ಧತೆ–ಹೀಗೆ ಒಂದೇ ಸ್ಥಳದಲ್ಲಿ ಹಲವು ಸೇವೆಗಳು ಸಾಗುತ್ತವೆ. ಹೃದ್ರೋಗದಿಂದ ದಂತ ಸಮಸ್ಯೆಯವರೆಗೂ, ಮಧುಮೇಹದಿಂದ ಮೂಳೆನೋವಿನವರೆಗೂ ವಿವಿಧ ಕಾಯಿಲೆಗಳೊಂದಿಗೆ ಬಂದವರು ಇಲ್ಲಿ ಒಂದೇ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ. ಚಿಕಿತ್ಸೆ ಮಾತ್ರವಲ್ಲ, ಮಾತಿನಲ್ಲೂ ಆತ್ಮೀಯತೆ ಬೆಳೆಯುತ್ತದೆ; ಅದೇ ಇವರಿಗೆ ಧೈರ್ಯ ನೀಡುತ್ತದೆ.

‘ಕಾಲು ಬಾತುಕೊಂಡಿತ್ತು. ನಾಲ್ಕು ವರ್ಷದಿಂದ ಇಲ್ಲಿಗೆ ಬರ್ತಿದ್ದೀನಿ. ಈಗ ಪರವಾಗಿಲ್ಲ. ಡಾಕ್ಟ್ರು ಚೆನ್ನಾಗಿ ನೋಡ್ತಾರೆ. ದುಡ್ಡು ತಗೊಳ್ಳಲ್ಲ’ ಎಂದು ಹೇಳುವ ಚಳ್ಳಕೆರೆ ಸಮೀಪದ ಮೈಲಹಳ್ಳಿಯ ಕೃಷಿಕ ಭೀಮಣ್ಣನ ಕಣ್ಣಲ್ಲಿ ಕೃತಜ್ಞತೆ ಇತ್ತು. ಯಡಿಯೂರು ಪಕ್ಕದ ಶೆಟ್ಟಹಳ್ಳಿಯ ಜಯಲಕ್ಷ್ಮಮ್ಮ ಇಪ್ಪತ್ತಾರು ವರ್ಷಗಳ ಹಿಂದೆ ಅಸ್ತಮಾಕ್ಕೆ ಚಿಕಿತ್ಸೆಗಾಗಿ ಬಂದವರು. ಗುಣಮುಖರಾದ ನಂತರ ಈಗ ಸ್ವಯಂ ಸೇವಕಿಯಾಗಿ ವಾರಕ್ಕೊಮ್ಮೆ ಸೇವೆ ಸಲ್ಲಿಸುತ್ತಿದ್ದಾರೆ. ‘ನಾನು ಪಡೆದ ಸೇವೆ, ಇತರರಿಗೆ ಕೊಡಬೇಕು’ ಎನ್ನುವ ಮನೋಭಾವದಿಂದ ಅವರು ಇಲ್ಲಿ ನಿಂತಿದ್ದಾರೆ. ಇಂಥವರೇ ಇಲ್ಲಿನ ಶಕ್ತಿಯಾಗಿದ್ದಾರೆ. ಐವತ್ತಕ್ಕೂ ಹೆಚ್ಚು ಸ್ವಯಂ ಸೇವಕರು ಈ ಚಿಕಿತ್ಸಾಲಯದ ನಾಡಿಯಂತೆ ಕೆಲಸ ಮಾಡುತ್ತಾರೆ.

‘ಇಲ್ಲಿ ಚಿಕಿತ್ಸೆ ಮಾತ್ರವಲ್ಲ, ಪ್ರೀತಿ ಸಿಗುತ್ತದೆ’ ಎನ್ನುತ್ತಾರೆ ಬ್ಯಾಡರಹಳ್ಳಿಯ ರಾಜಶೇಖರ್. ಇಲ್ಲಿಗೆ ಬರುವ ಅನೇಕರ ಅನುಭವ ಇದೇ ಆಗಿದೆ. ವೈದ್ಯರು ರೋಗಿಯನ್ನು ಕೇಳುವ ರೀತಿ, ಸಮಾಧಾನ ಹೇಳುವ ದನಿ–ಇವೆಲ್ಲವೂ ಚಿಕಿತ್ಸೆ ಭಾಗವಾಗುತ್ತವೆ. ಚಿಕಿತ್ಸೆ ಪಡೆದು ಹೊರಡುವ ಮುಖಗಳಲ್ಲಿ ಕಾಣುವ ಸಮಾಧಾನ, ನೆಮ್ಮದಿ ಈ ಸ್ಥಳದ ನಿಜವಾದ ಗುರುತು.

ಈ ಸೇವೆಯ ಬೀಜ ಬಾಲ್ಯದಲ್ಲೇ ಬಿತ್ತನೆ ಆಯಿತು. ಡಾ.ರಮಣ್ ರಾವ್ ಅವರ ತಂದೆ ತುಂಗಭದ್ರಾ ಅಣೆಕಟ್ಟು ಯೋಜನೆಯಲ್ಲಿ ಮುಖ್ಯ ಎಂಜಿನಿಯರ್ ಆಗಿದ್ದರು. ಹೊಸಪೇಟೆ ಸಮೀಪದ ವಡ್ಡರಹಟ್ಟಿಯಲ್ಲಿ ನೆಲೆಸಿದ್ದಾಗ ಸುತ್ತಮುತ್ತಲಿನ ಹಳ್ಳಿಗಳ ಜನರು ಸಣ್ಣ ಕಾಯಿಲೆಗಳಿಗೂ ಪಟ್ಟಣದತ್ತ ತೆರಳುತ್ತಿದ್ದ ದೃಶ್ಯ, ರಾವ್ ಅವರ ಮನಸ್ಸಿನಲ್ಲಿ ಪ್ರಶ್ನೆ ಮೂಡಿಸಿತು. ‘ನೀನು ವೈದ್ಯನಾದರೆ ಇವರ ನೋವನ್ನು ಕಡಿಮೆ ಮಾಡಬಹುದು’ ಎಂಬ ತಂದೆಯ ಮಾತು, ದಿಕ್ಕು ತೋರಿಸಿತು.

ಆ ಮಾತು ಕೇವಲ ಸಲಹೆಯಾಗಿರಲಿಲ್ಲ; ಅದು ಜೀವನದ ದಿಕ್ಕಾಯಿತು. ಎಂಬಿಬಿಎಸ್ ಪೂರ್ಣಗೊಳಿಸಿದ ಮಾರನೆಯ ದಿನವೇ ತಮ್ಮ ಫಾರಂ ಹೌಸ್ನಲ್ಲಿ ಉಚಿತ ಚಿಕಿತ್ಸಾಲಯ ಆರಂಭಿಸಿದರು.

ಅಂದು ಬಿತ್ತಿದ ಸೇವಾಭಾವದ ಬೀಜ ಇಂದು ಸಾವಿರಾರು ಜೀವಗಳಿಗೆ ನೆರಳಾಗಿದೆ, ಅನೇಕ ಕುಟುಂಬಗಳಿಗೆ ಆಶ್ರಯವಾಗಿದೆ.

ಈ ಕಾರ್ಯ ‘ರಾಜ್ಪ್ರಕಾಶ್ ಪಬ್ಲಿಕ್ ಚಾರಿಟಬಲ್ ಟ್ರಸ್ಟ್’ ಮೂಲಕ ಸಾಗುತ್ತಿದೆ. ದಾನಿಗಳು, ಸಂಸ್ಥೆಗಳ ಸಹಕಾರದಿಂದ ಸೇವೆ ವಿಸ್ತರಿಸಿದೆ. ಹರ್ಷ ಆಸ್ಪತ್ರೆಯ ಸಿಬ್ಬಂದಿ ಫಿಸಿಯೋಥೆರಪಿ, ಎಂ.ಎಸ್.ರಾಮಯ್ಯ ಆಸ್ಪತ್ರೆಯ ತಂಡ ದಂತ ಚಿಕಿತ್ಸೆಯಲ್ಲಿ ಕೈಜೋಡಿಸಿದ್ದಾರೆ. ಮೈಕ್ರೊ ಲ್ಯಾಬ್ಸ್, ಹಿಮಾಲಯ ವೆಲ್ನೆಸ್ ಸಂಸ್ಥೆಗಳು ಔಷಧ ಮತ್ತು ವೈಯಕ್ತಿಕ ಶುಚಿತ್ವ ಸಾಮಗ್ರಿಗಳನ್ನು ಪೂರೈಸುತ್ತಿವೆ. ತಿಂಗಳಿಗೊಮ್ಮೆ ನೇತ್ರ, ದಂತ, ಹೃದಯ ಪರೀಕ್ಷಾ ಶಿಬಿರಗಳು ನಡೆಯುತ್ತವೆ. ಕೆಲ ಬಡ ರೋಗಿಗಳಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ವ್ಯವಸ್ಥೆಯೂ ಇದೆ. ವ್ಯಾಯಾಮಗಳ ಮೂಲಕ ನೋವು ನಿವಾರಣೆಯ ಪ್ರಯತ್ನವೂ ನಡೆಯುತ್ತದೆ. ಈ ಎಲ್ಲವೂ ಸೇರಿ ಒಂದು ಸಮಗ್ರ ಆರೋಗ್ಯ ಸೇವೆಯ ರೂಪ ಪಡೆಯುತ್ತವೆ.

ಈ ಸೇವೆಯಲ್ಲಿ ಕುಟುಂಬವೂ ಕೈಜೋಡಿಸಿದೆ. ಪತ್ನಿ ಹೇಮಾ, ಪುತ್ರರಾದ ಡಾ.ಚರಿತ್ ಭೋಗರಾಜ್, ಡಾ.ಅಭಿಜಿತ್, ಸೊಸೆಯಂದಿರು ಡಾ.ಶಾಂತಿನಿ ಮತ್ತು ಜಾಹ್ನವಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ನೆರವಾಗುತ್ತಾರೆ. ಪಾಳಿಯಂತೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಕುಟುಂಬದ ಬೆಂಬಲ ಇಲ್ಲದೆ ಇಷ್ಟು ದೀರ್ಘಕಾಲ ಸೇವೆ ಮುಂದುವರಿಸುವುದು ಸುಲಭವಲ್ಲ ಎಂಬುದನ್ನು ರಾವ್ ಅವರು ಹಲವಾರು ಬಾರಿ ಹೇಳಿದ್ದಾರೆ.

ಭಾನುವಾರ ಹಬ್ಬ ಬಂದರೂ, ಹಬ್ಬದ ಬಳಿಕವೇ ಚಿಕಿತ್ಸಾಲಯಕ್ಕೆ ಬರುವ ರಾವ್ ಅವರ ಶಿಸ್ತಿನ ಹಿಂದೆ ನಿಷ್ಠೆ ಇದೆ. ಸೇವೆ ಅವರಿಗೊಂದು ಕರ್ಮದಂತೆ. ಅವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ, ಐಎಂಎ ಬಿ.ಸಿ.ರಾಯ್ ಪ್ರಶಸ್ತಿ ನೀಡಿ ಗೌರವಿಸಿದೆ. ಚಿಕಿತ್ಸಾಲಯದ ರಸ್ತೆಗೆ ಅವರ ಹೆಸರನ್ನೇ ಇಡಲಾಗಿದೆ. ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಗೂ ಈ ಸೇವೆ ದಾಖಲಾಗಿದೆ. ಆದರೆ ಈ ಎಲ್ಲ ಗೌರವಗಳಿಗಿಂತ, ಗೇಟ್ ಮುಂದೆ ನಿಂತಿರುವ ಸರತಿಯೇ ಈ ಸೇವೆಯ ನಿಜವಾದ ಮಾನ್ಯತೆ; ಜನರ ನಂಬಿಕೆಯೇ ದೊಡ್ಡ ಪ್ರಶಸ್ತಿ. v

ಉಚಿತ ಊಟ, ಉಪಹಾರ

ಚಿಕಿತ್ಸೆಗೆ ರಾತ್ರಿಯೇ ಬರುವವರಿಗೆ ಲಘು ಉಪಹಾರ, ಭಾನುವಾರ ಮಧ್ಯಾಹ್ನ ಊಟದ ವ್ಯವಸ್ಥೆಯೂ ಇದೆ. ದೂರದಿಂದ ಬರುವವರಿಗೆ ಇದು ದೊಡ್ಡ ನೆರವು. ರೊಟರೇರಿಯನ್ ಜಯರಾಮ್ ಅವರ ಸಮಗ್ರ ಜನಾಭಿವೃದ್ಧಿ ಸಂಸ್ಥೆ (ಐಪಿಡಿಪಿ) ಈ ಕಾರ್ಯ ನೋಡಿಕೊಳ್ಳುತ್ತದೆ. ರೋಗಿಗಳ ಅನುಕೂಲಕ್ಕಾಗಿ ತಾತ್ಕಾಲಿಕ ಶೌಚಾಲಯಗ ಳನ್ನೂ ನಿರ್ಮಿಸಲಾಗಿದೆ. ಸಣ್ಣಸಣ್ಣ ಸೌಲಭ್ಯಗಳೇ ಇಲ್ಲಿ ಬರುವವರಿಗೆ ದೊಡ್ಡ ಸಮಾಧಾನ.

ಗ್ರಾಮಾಭಿವೃದ್ಧಿಯ ಪರ್ವ

ಚಿಕಿತ್ಸೆಯೊಂದಿಗೆ ಗ್ರಾಮಾಭಿವೃದ್ಧಿಯತ್ತಲೂ ಟ್ರಸ್ಟ್ ಗಮನ ಹರಿಸಿದೆ. ಟಿ.ಬೇಗೂರು ಮತ್ತು ಬ್ಯಾಡರಹಳ್ಳಿ ಪಂಚಾಯಿತಿಯ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣ, ಕುಡಿಯುವ ನೀರಿಗಾಗಿ ಕೊಳವೆಬಾವಿ, ಹಬ್ಬಗಳಲ್ಲಿ ಧಾನ್ಯ ವಿತರಣೆ, ಶಾಲಾ ಮಕ್ಕಳಿಗೆ ನೋಟ್ಪುಸ್ತಕ, ವಿಟಮಿನ್ ಮಾತ್ರೆಗಳು ನೀಡುವಂತಹ ಹಲವು ಕಾರ್ಯಗಳು ನಡೆಯುತ್ತಿವೆ. ಕೆಲವು ಶಾಲೆಗಳ ಕೊಠಡಿಗಳ ದುರಸ್ತಿ, ದೇವಾಲಯ ನಿರ್ಮಾಣಕ್ಕೂ ಸಹಾಯ ನೀಡಲಾಗಿದೆ. ಈ ಸೇವೆಗಳು ಗ್ರಾಮಸ್ಥರ ಬದುಕಿನಲ್ಲಿ ತಣ್ಣಗೆ ಬದಲಾವಣೆ ತಂದಿವೆ; ಆರೋಗ್ಯದಿಂದ ಆರಂಭವಾದ ಸೇವೆ, ಬದುಕಿನ ವಿವಿಧ ಆಯಾಮಗಳನ್ನು ಸ್ಪರ್ಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.