ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸೆಂಟ್‌ ಪಾರ್ಕ್‌: ಹೂ ಮುಡಿದ ಮರಗಳು   

Last Updated 29 ನವೆಂಬರ್ 2019, 13:48 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಹೊರವಲಯದ ಬೆಸೆಂಟ್‌ ಪಾರ್ಕ್‌ನಲ್ಲಿ ಗುಲಾಬಿ ಬಣ್ಣ ಬಣ್ಣದ ಹೂವುಗಳು ಹಚ್ಚ ಹಸಿರಿನ ಮರಗಳನ್ನು ಅಲಂಕರಿಸಿದ್ದು ನೋಡುಗರನ್ನು ಸೆಳೆಯುತ್ತಿವೆ.

ಬೆಸೆಂಟ್‌ ಪಾರ್ಕ್‌ ರಾಜ್ಯದ ಸ್ಕೌಟ್ಸ್ ಮತ್ತು ಗೈಡ್ಸ್‌ನ ತರಬೇತಿ ಕೇಂದ್ರ. ಸುಮಾರು ನೂರು ಎಕರೆಗಿಂತಲು ಹೆಚ್ಚಿನ ವಿಸ್ತಾರವನ್ನು ಹೊಂದಿದೆ. ಇದರಲ್ಲಿ ತರಹೇವಾರಿ ಹೂವು, ಹಣ್ಣಿನ ಮರಗಳು ಇವೆ. ಆಯಾ ಋತು, ಹವಾಮಾನಕ್ಕೆ ಅನುಗುಣವಾಗಿ ಹಣ್ಣು, ಹೂವುಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದು.

ಈಗಷ್ಟೇ ಆರಂಭವಾಗಿರುವ ಚಳಿಗಾಲದ ಈ ದಿನಗಳಲ್ಲಿ ಅರಳಿ ನಿಂತಿರುವ ಹೂವುಗಳ ವಿಶೇಷತೆ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಬರಹಗಾರ ಡಾ.ನೆಲ್ಲುಕುಂಟೆ ವೆಂಕಟೇಶ್‌, ಅರಬ್ಬಿ ಸಮುದ್ರದ ಮೇಲಿನಿಂದ ಗಾಳಿ ಬೀಸ ತೊಡಗಿದೊಡನೆ ಹೊಂಗೆ ಬೇವಿನಂಥ ಮರಗಳು ಹೂ ಹೊತ್ತುಕೊಳ್ಳುತ್ತವೆ. ಬಂಗಾಳ ಕೊಲ್ಲಿ ಮೇಲಿನಗಾಳಿ ಜತೆಗೆ ಸೈಬೀರಿಯಾದ ಶೀತ ಮಾರುತ ಕೊರೆಯತೊಡಗಿದೊಡನೆ ಎಲೆ ಉದುರುತ್ತಾ ಬಯಲಾಗುವ ಮರಗಳೆಲ್ಲ ಹೂ ಬಿಡುತ್ತವೆ.

ಡಿಸೆಂಬರ್‌ ತಿಂಗಳು ಮಾವು, ಅದರಾಚೆಗೆ ಮುತ್ತುಗ, ಅಲ್ಲಿಂದಾಚೆಗೆ ಹಿಪ್ಪೆ ಹೀಗೆ......ಅದ್ಭುತ ನಿಸರ್ಗದಲ್ಲಿ ಏಳು ಬಣ್ಣಗಳನ್ನು ಒಳಗೊಂಡ ಹೂವುಗಳು ಅರಳಿ ನಿಂತು ನೋಡುಗರ ಮನಸ್ಸಿಗೆ ಉಲ್ಲಾಸ ನೀಡುತ್ತವೆ. ಶಿವರಾತ್ರಿ ಕಳೆದ ಕೆಲವು ದಿನಗಳ ನಂತರ ಸ್ನೇಹಿತರೊಂದಿಗೆ ಕಲ್ಲತ್ತಿಗಿರಿಗೆ ಹೋಗಿದ್ದಾಗ ಅಲ್ಲಿ ಎಷ್ಟೊಂದು ಬಣ್ಣಗಳು, ಮರದ ತುದಿ, ರೆಂಬೆ ಕೊಂಬೆಗಳೆಲ್ಲ ರಂಗು ಬಳಿದಂತೆ, ಕೆಂಡ ಮುಡಿದಂತೆ ಹೂವುಗಳು ಮರಗಳನ್ನು ಅಲಂಕರಿಸಿದ್ದವು.

‘ಒಂದೆರಡು ಮಳೆ ಬಿದ್ದ ನಂತರ ದೊಡ್ಡಬಳ್ಳಾಪುರ ತಾಲ್ಲೂಕಿನ ಗುಂಡುಮಗೆರೆ ಕಡೆಯ ಕಿರು ಅರಣ್ಯಗಳಲ್ಲಿ ತರಹೇವಾರಿ ಹೂ ಮುಡಿಯುತ್ತವೆ. ಕಕ್ಕೆ, ಬಿಕ್ಕೆ, ಕುಲ್ಡೆ, ಮಿಲ್ಡೆ, ಗ್ಯಾದರೆ, ಕಾಡು ಹೊಂಗೆ, ಎಟ್ಟದ ಗಿಡಗಳಿವೆ. ಅದರಲ್ಲೂ ಮುತ್ತುಗದ ಕೆಂಪು ಹೂವಿನ ಬಗ್ಗೆ ಇಡೀ ದೇಶದುದ್ದಕ್ಕೂ ಅದೆಷ್ಟೋ ಕತೆಗಳಿವೆ. ಪ್ರಕೃತಿಯಲ್ಲಿನ ಹೂವುಗಳ ಸೊಬಗನ್ನು ಸವಿಯಲು ಕಣ್ಣು, ಕಿವಿ, ಒಳ ಮನಸ್ಸನ್ನು ಮುಕ್ತವಾಗಿ ತೆರೆದಿರಬೇಕಷ್ಟೆ’ ಎನ್ನುತ್ತಾರೆ ವೆಂಕಟೇಶ್‌.

ಬೆಸೆಂಟ್‌ ಪಾರ್ಕ್‌ನಲ್ಲಿ ಬೆಳೆದಿದ್ದ ನೀಲಗಿರಿ ಮರಗಳನ್ನು ತೆರವುಗೊಳಿಸಿದ ನಂತರ ಇಲ್ಲಿ ಸಂಘ ಸಂಸ್ಥೆಗಳ ಸಹಕಾರದಿಂದ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಇಲ್ಲಿನ ಮರ, ಬಳ್ಳಿಗಳಲ್ಲಿನ ಮಳೆಗಾಲದ ಪುಷ್ಪ ವೈಭವ ಅದ್ಭುತವಾಗಿದೆ. ಈಗ ಚಳಿಗಾಲದ ಆರಂಭದಲ್ಲಿ ಕೆಲವು ಮರಗಳು ಹೂ ಬಿಡುತ್ತಿವೆ. ಅದರಲ್ಲೂ ಕೆಲ ಪುಷ್ಪಭರಿತ ಮರಗಳಂತೂ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತಿವೆ ಎನ್ನುವ ಲೇಖಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ, ಚಳಿಗಾಲದಲ್ಲಿ ಕಾಲದಲ್ಲಿ ಸೈಬೀರಿಯಾ ದಿಕ್ಕಿನ ಶೀತಗಾಳಿಗೆ ನಮ್ಮಲ್ಲಿನ ಮರಗಳು ಎಲೆ ಉದುರಿಸಿ ಹೂ ಬಿಡುವುದೇ ಒಂದು ಕುತೂಹಲದ ಪ್ರಾಕೃತಿಕ ಸಂಬಂಧವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT