ಸರ್ಕಾರಿ ಶಾಲೆಗಳಿಗೆ ಉತ್ತಮ ಮೂಲ ಸೌಲಭ್ಯ

7
ಅತ್ಯಾಧುನಿಕ ಶಾಲಾ ಕೊಠಡಿಗಳ ನೂತನ ಕಟ್ಟಡ ಉದ್ಘಾಟನೆ

ಸರ್ಕಾರಿ ಶಾಲೆಗಳಿಗೆ ಉತ್ತಮ ಮೂಲ ಸೌಲಭ್ಯ

Published:
Updated:
ದೇವನಹಳ್ಳಿ ಸರ್ಕಾರಿ ಹೆಣ್ಣುಮಕ್ಕಳ ನೂತನ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ಜಿತು ವಿರ್ವಾನಿ ಉದ್ಘಾಟಿಸಿದರು

ದೇವನಹಳ್ಳಿ: ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಸಂಸ್ಥೆಯಾದ ಎಂಬೆಸಿ ಸಮೂಹವು ಸ್ಟಿಸ್‌ ರೇ ಫೌಂಡೇಷನ್‌ನೊಂದಿಗೆ ಸರ್ಕಾರಿ ಶಾಲೆಗಳಿಗೆ ವಿಶ್ವದರ್ಜೆ ಮಟ್ಟದ ಮೂಲ ಸೌಲಭ್ಯ ನೀಡಲು ಮುಂದಾಗಿದೆ ಎಂದು ಎಂಬೆಸಿ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷ ಜಿತು ವಿರ್ವಾನಿ ತಿಳಿಸಿದರು.

ಇಲ್ಲಿನ ಸರ್ಕಾರಿ ಹಿರಿಯ ಮಾದರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಮಂಗಳವಾರ ಹೈಟೆಕ್ ಶಾಲಾ ಕೊಠಡಿಗಳ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಸಾಮೂಹಿಕ ಜವಾಬ್ದಾರಿಯನ್ನು ಹೊತ್ತಿರುವ ಎಂಬೆಸಿ ಕಾರ್ಪೊರೇಟ್‌ ಸಂಸ್ಥೆಯು ಹಣ, ಶ್ರಮ ಹಾಗೂ ಸಮಯವನ್ನು ಒದಗಿಸಿದೆ. ದುರ್ಬಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳಿಗೆ ಸಹಾಯಹಸ್ತ ನೀಡುತ್ತಿದ್ದೇವೆ ಎಂದರು.

ತಾಲ್ಲೂಕಿನ ವಿವಿಧೆಡೆ 9 ಗ್ರಾಮಗಳ ವ್ಯಾಪ್ತಿಯಲ್ಲಿ ಮಕ್ಕಳ ಶೈಕ್ಷಣಿಕ ಅಗತ್ಯವನ್ನು ಪೂರೈಸುತ್ತಿದೆ. ಭವಿಷ್ಯದ ಭಾರತ ಉತ್ತಮ ಗುಣಮಟ್ಟದ ತಳಮಟ್ಟದ ಶಿಕ್ಷಣವನ್ನು ಅವಲಂಬಿಸಿದೆ ಎಂದರು. ಶಿಕ್ಷಣ ಕ್ಷೇತ್ರಕ್ಕೆ ಸುಸ್ಥಿರ ಪರಿಸರ ವ್ಯವಸ್ಥೆ ಇರಬೇಕು. ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಇದು ಅವಶ್ಯಕತೆ ಎಂದರು.

ಸ್ವಿಸ್‌ ರೇ ಗ್ಲೋಬಲ್ ಬ್ಯುಸಿನೆಸ್‌ ಸಲ್ಯೂಷನ್ಸ್‌ನ ವ್ಯವಸ್ಥಾಪಕ ಅಮಿತ್‌ ಕರ್ಲ ಅವರು ಮಾತನಾಡಿ, ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಸಮಾಜದ ಮೇಲೆ ದೀರ್ಘಾವಧಿ ಹಾಗೂ ಪರಿಣಾಮಕಾರಿ ಪ್ರಭಾವ ಬೀರುವ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ಸಮಗ್ರ ಶಿಕ್ಷಣದ ಮೂಲಕ ಸಬಲೀಕರಣವೇ ಸಂಸ್ಥೆಯ ಗುರಿ ಎಂದರು.

ಎಂಬೆಸಿ ಮತ್ತು ಸ್ವಿಸ್ ರೇ ಹಾಗೂ ಬೆಂಗಳೂರು ಉತ್ತರ ರೌಂಡ್ ಟೇಬಲ್ ಸಂಸ್ಥೆ ಸಮೂಹ ಸಂಯೋಜಕಿ ನರ್ಮದಾ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡಿದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ ಎಂದರು. ನಾಲ್ಕಾರು ತರಗತಿಯ ನಂತರ ವ್ಯಾಸಂಗ ಸ್ಥಗಿತಗೊಳಿಸಬೇಡಿ. ಖಾಸಗಿ ಶಾಲೆಗಳನ್ನು ನಾಚಿಸುವ ಈ ಶಾಲೆ ಲಂಡನ್ ಮಾದರಿಯಲ್ಲಿ ವಿನ್ಯಾಸಗೊಳಿಸಿ ನಿರ್ಮಾಣ ಮಾಡಲಾಗಿದೆ ಎಂದರು.

ಭವಿಷ್ಯದ ಜೀವನದಲ್ಲಿ ಶಿಕ್ಷಣ ಅತಿ ಮುಖ್ಯ. ಸಮಾಜಕ್ಕೆ ಮತ್ತು ದೇಶಕ್ಕೆ ಹೆಮ್ಮೆಯ ನಾಯಕರಾಗಿ. ಸಾಧನೆಗೆ ಗುರಿ ಬೇಕು, ಪೊಷಕರು ಮಕ್ಕಳ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹುಸಿಗೊಳಿಸುವ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಸಿ.ಇ.ಟಿ. ಮೂಲಕ ಆಯ್ಕೆಯಾಗುವ ಶಿಕ್ಷಕರು ಗುಣಮಟ್ಟದ ಬೋಧನೆ ಮಾಡುತ್ತಿದ್ದಾರೆ ಎಂದರು. ಇನ್ನಷ್ಟು ಶಾಲೆಗಳನ್ನು ಆಯ್ಕೆ ಮಾಡಿ ಉತ್ತಮ ಸೌಲಭ್ಯವನ್ನು ನೀಡಬೇಕೆಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಕುಮಾರ್, ರೌಂಡ್ ಟೇಬಲ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಪಿಯೂಷ್ ದಗಾ, ಎಂಬೆಸಿ ಸಮೂಹ ಸಂಸ್ಥೆ ವಿವಿಧ ಘಟಕ ಆಡಳಿತಾಧಿಕಾರಿಗಳಾದ ಷರೀಫ್ ಇಮಾಮ್, ಐಶ್ವರ್ಯ ಮೆನನ್, ಸೈನಾ ಗಣಪತಿ, ಚೆಂಗಪ್ಪ, ಮಾಧುರಿ ಗತಾನಿ, ರೀತಿ ಅಂಬಾನಿ, ಮುಖ್ಯ ಶಿಕ್ಷಕಿ ಮುನಿರತ್ನಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !