ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ವೈವಿಧ್ಯ ಸಂರಕ್ಷಣೆ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಸರ್ವೆ

Last Updated 21 ಜೂನ್ 2020, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿನ ಜೀವ ವೈವಿಧ್ಯತೆಯನ್ನು ಗುರುತಿಸಿ ಅವುಗಳನ್ನು ಸಂರಕ್ಷಿಸುವ ಹಾಗೂ ಕೊರತೆ ಇರುವ ಸ್ಥಳಗಳಲ್ಲಿ ಜೀವ ವೈವಿಧ್ಯವನ್ನು ಹೆಚ್ಚಿಸುವ ಸಲುವಾಗಿ ಸರ್ವೇ ನಡೆಸಿ ವರದಿ ನೀಡುವಂತೆ ಕೇಂದ್ರ ಜೀವ ವೈವಿಧ್ಯ ಮಂಡಳಿ ನೀಡಿದ್ದ ಗಡುವು ಮುಕ್ತಾಯವಾಗಿದೆ. ಸರ್ವೇ ಕೆಲಸ ನಡೆಸದೇ ಇರುವ ನಗರಸಭೆಗಳಿಗೆ ₹10 ಲಕ್ಷದವರೆಗೆ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ನಗರಸಭೆ ದಂಡ ವಿಧಿಸುವುದರಿಂದ ತಪ್ಪಿಸಿಕೊಳ್ಳಲು ಜೀವ ವೈವಿಧ್ಯದ ಸರ್ವೇ ಆರಂಭಿಸಿದೆ.

ಹೆಚ್ಚುತ್ತಿರುವ ನಗರೀಕರಣದಿಂದ ಜೀವ ವೈವಿಧ್ಯ ಧಕ್ಕೆಯುಂಟಾಗಿರುವುದು ಈಗ ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಜನ ಸಂಖ್ಯೆಗೆ ಅನುಗುಣವಾಗಿ ಜೀವ ವೈವಿಧ್ಯವನ್ನು ಸಂರಕ್ಷಿಸದೇ ಇದ್ದರೆ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳು ತಲೆದೋರುವ ಅಪಾಯಗಳು ಇವೆ. ಹೀಗಾಗಿ ಜೀವ ವೈವಿಧ್ಯವನ್ನು ಕಾಪಾಡುವ ಸಲುವಾಗಿ ನಗರಸಭೆ ವ್ಯಾಪ್ತಿಯಲ್ಲಿ ಯಾವ ರೀತಿಯ ಜೀವ ವೈವಿಧ್ಯ ಇದೆ ಎನ್ನುವುದನ್ನು ಸರ್ವೇ ನಡೆಸುವ ಕೆಲಸ ನಡೆಯುತ್ತಿದೆ.

ಜೀವ ವೈವಿಧ್ಯವನ್ನು ಸಂರಕ್ಷಿಸುವ ಹಾಗೂ ಜೀವ ವೈವಿಧ್ಯವನ್ನು ಹೆಚ್ಚಿಸುವ ಉಸ್ತುವಾರಿಯನ್ನು ನೋಡಿಕೊಳ್ಳುವ ಸಲುವಾಗಿ ನಗರಸಭೆ ಮಟ್ಟದಲ್ಲಿ ಪರಿಸರ ಆಸಕ್ತರು ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಮಿತಿಯನ್ನು ರಚಿಸಿ, ಸಮಿತಿ ಸದಸ್ಯರಿಗೆ ತಮ್ಮ ಕಾರ್ಯವ್ಯಾಪ್ತಿ, ಕರ್ತವ್ಯದ ಬಗ್ಗೆ ತರಬೇತಿಗಳನ್ನು ನೀಡಬೇಕಿತ್ತು. ಆದರೆ ಈ ಕೆಲಸ ಇದುವರೆಗೂ ಆಗಿಯೇ ಇಲ್ಲ ಎನ್ನುತ್ತಾರೆ ಸಮಿತಿಯಲ್ಲಿನ ಸದಸ್ಯರು. ಜೀವ ವೈವಿಧ್ಯವನ್ನು ಕಾಪಾಡಬೇಕಾದ ಮತ್ತು ಹೆಚ್ಚಿಸಲು ಅಗತ್ಯ ಇರುವ ಕ್ರಮಕಗಳ ಉಸ್ತುವಾರಿ ವಹಿಸಬೇಕಿರುವ ಸಾಮಾಜಿಕ ಅರಣ್ಯ ಇಲಾಖೆ ಜೀವ ವೈವಿಧ್ಯ ಸರ್ವೇ ಕೆಲಸಕ್ಕೂ ತಮಗೂ ಯಾವುದೇ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದೆ. ಹೀಗಾಗಿಯೇ ಸರ್ವೇ ಕೆಲಸ ಹಿಂದುಳಿಯಲು ಕಾರಣವಾಗಿದೆ ಎನ್ನುವ ಮಾತುಗಳು ನಗರಸಭೆ ಕಡೆಯಿಂದ ಕೇಳಿ ಬಂದಿವೆ.

ಇಡೀ ಜಿಲ್ಲೆಯಲ್ಲಿನ ಗ್ರಾಮ ಪಂಚಾಯಿತಿಯಿಂದ ಮೊದಲುಗೊಂಡು ನಗರಸಭೆಗಳವರೆಗೆ ಜೀವ ವೈವಿಧ್ಯದ ಸರ್ವೇ ಕೆಲಸದ ಪ್ರಗತಿಗೆ ಕಡೆಗೆ ಗಮನವಹಿಸಿ ಸಭೆ ನಡೆಸುವ ಮೂಲಕ ಸೂಕ್ತ ಮಾರ್ಗದರ್ಶನ ನೀಡಬೇಕಿದ್ದ ಜಿಲ್ಲಾ ಆಡಳಿತ ಇದುವರೆಗೂ ಒಂದೇ ಒಂದು ಸಭೆಯನ್ನು ಸಹ ನಡೆಸಿಯೇ ಇಲ್ಲ.

ಇತ್ತೀಚೆಗಷ್ಟೇ ಜೀವ ವೈವಿಧ್ಯ ಮಂಡಳಿ ವತಿಯಿಂದ ನಡೆದ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ನಗರಸಭೆ ಪೌರಾಯುಕ್ತರು, ಗ್ರಾಮ ಪಂಚಾಯಿತಿಗಳ ಪರವಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕರು ಸರ್ವೇ ನಡೆಸಲು ಸಮಯಬೇಕು ಎಂದು ಕೇಳಿದರೇ ವಿನಹ ಸರ್ವೇ ನಡೆಸುವಲ್ಲಿನ ಸಮಸ್ಯೆಗಳು, ಸವಾಲುಗಳ ಬಗ್ಗೆ ಅಥವಾ ಸರ್ವೇ ನಡೆಸುವ ವಿಧಾನದ ಬಗ್ಗೆ ಯಾರೋಬ್ಬರು ಪ್ರಶ್ನೆಯನ್ನೇ ಕೇಳಲಿಲ್ಲ. ಯಾರೂ ಸಹ ಪ್ರಶ್ನೆ ಕೇಳದೆ ಇರಲು ಕಾರಣ ಜೀವ ವೈವಿಧ್ಯದ ಸರ್ವೇ ಎಲ್ಲೂ ಸಹ ಸೂಕ್ತ ರೀತಿಯಲ್ಲಿ ಆರಂಭವೇ ಆಗಿಲ್ಲ, ಜೀವ ವೈವಿಧ್ಯವನ್ನು ಸಂರಕ್ಷಿಸುವ ಕೆಲಸವು ಅಭಿವೃದ್ಧಿ ಹಾಗೂ ಆಡಳಿತದ ಒಂದು ಭಾಗವೇ ಆಗಿದೆ ಎನ್ನುವುದನ್ನು ಗಂಭೀರವಾಗಿ ಪರಿಗಣಿಸದೇ ಇರುವುದೇ ಅಗಿದೆ ಎನ್ನುತ್ತಾರೆ ಜೀವ ವೈವಿಧ್ಯ ಮಂಡಳಿ ವತಿಯಿಂದ ನಡೆದ ವಿಡಿಯೋ ಸಂವಾದಲ್ಲಿ ಭಾಗವಹಿಸಿದ್ದ ಪ್ರತಿನಿಧಿಯೊಬ್ಬರು.

ನಗರಸಭೆ ವ್ಯಾಪ್ತಿಯಲ್ಲಿ ಜೀವ ವೈವಿಧ್ಯ ಸರ್ವೇ ಕೆಲಸ ಈಗಷ್ಟೇ ಆರಂಭವಾಗಿದೆ. ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಸರ್ವೇ ಕೆಲಸ ಅಂತಿಮ ಹಂತಕ್ಕೆ ಬಂದಿದ್ದರೆ ಮತ್ತೆ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಸರ್ವೇ ಕೆಲಸ ಇನ್ನು ಆರಂಭದ ಹಂತದಲ್ಲೇ ನಿಂತಿದೆ. ಜೀವ ವೈವಿಧ್ಯದ ಸರ್ವೇ ಕೆಲಸ ಸರ್ಕಾರಿ ದಾಖಲೆಗಾಗಿ ಮಾತ್ರವಲ್ಲದೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಹಾಗೂ ಪರಿಸರ ಅಭಿವೃದ್ಧಿಯಲ್ಲಿನ ಕೊರತೆಯನ್ನು ಗುರುತಿಸಲು ಸುಲಭವಾಗಲಿದೆ. ಇದರಿಂದ ಮನುಷ್ಯರ ಆರೋಗ್ಯವು ಸೇರಿದಂತೆ ಅಳಿವಿನ ಅಂಚಿನಲ್ಲಿರುವ ಪ್ರಾಣಿ,ಪಕ್ಷಿಗಳ ಸಂರಕ್ಷಣೆ ಕೆಲಸವು ಸುಲಭವಾಗಲಿದೆ ಎನ್ನುತ್ತಾರೆ ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT