ಬುಧವಾರ, ಆಗಸ್ಟ್ 4, 2021
22 °C
ಬೆಳೆಗಳಲ್ಲಿನ ಕೀಟ ನಿಯಂತ್ರಣದ ಕ್ರಮಗಳು, ಆಹಾರ ಸರಪಳಿಯ ಹಾಗೂ ಪರಿಸರ ವ್ಯವಸ್ಥೆಯಲ್ಲಿನ ಅಸಮತೋಲನದ ಕಾರಣದಿಂದಾಗಿ ಸಣ್ಣ ಕಳ್ಳಿಪೀರಗಳು ಕಾಣುವುದು ಕಡಿಮೆಯಾಗುತ್ತಿವೆ.

ಕಳ್ಳಿಪೀರ ಮರಿಗೆ ಆಹಾರ ಉಣಿಸುತ್ತಿದೆ ನೋಡಿದಿರಾ

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಒಂದು ವಾರದಿಂದ ಈಚೆಗೆ ಆಷಾಡ ಮಾಸದ ಗಾಳಿಗೆ ತೇಲಿಬರುತ್ತಿರುವ ಮೋಡಗಳಿಗೆ ಬಿಟ್ಟು ಬಿಟ್ಟು ಆಗೊಂದಿಷ್ಟು, ಈಗೊಂದಿಷ್ಟು ಮಳೆ ಬೀಳುತ್ತಿದೆ. ಇಂತಹ ಸಮಯದಲ್ಲಿ ಹೆಚ್ಚಾಗಿ ಏರೋಪ್ಲೇನ್‌‌ ಹುಳು (ತೂಗುಕೋಲು)ಗಳ ಹೆಚ್ಚಾಗಿ ಹಾರಾಟ ಆರಂಭಿಸಿವೆ. ಇಂತಹ ಸಂದರ್ಭಕ್ಕೆ ಕಾದು ಕುಳಿತಿರುವ ಸಣ್ಣ ಕಳ್ಳಿಪೀರ (Green Bee-eater)ಗಳು ಬೇಟೆಯನ್ನು ಆರಂಭಿಸುತ್ತವೆ. ಆಹಾರ ಸಿಕ್ಕ ಕೂಡಲೆ ತಾವು ತಿನ್ನುವುದಕ್ಕಿಂತಲು ಮೊದಲು ಮರಿಗಳಿಗೆ ಉಣಿಸುವ ಈ ಪಕ್ಷಿಯ ತಾಯಿ ಹೃದಯದ ಮುಖಭಾವದ ದೃಶ್ಯ ನೋಡಲು ಚಂದ.

ಸಣ್ಣ ಕಳ್ಳಿಪೀರ ಪಕ್ಷಿಯ ಫೋಟೊ ತೆಗೆಯುವುದೇ ಒಂದು ಸಾಹಸ. ಒಂದು ಕ್ಷಣ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಇದು ಚಂಚಲ ಸ್ವಭಾವದ ಪಕ್ಷಿ ಎನ್ನುವ ಹವ್ಯಾಸಿ ಛಾಯಾಗ್ರಾಹಕ ಹಾಗೂ ಪಕ್ಷಿ ವೀಕ್ಷಕ ವೈ.ಟಿ.ಲೋಹಿತ್‌, ಬೆಳಗಿನ ಅಥವಾ ಸಂಜೆ ವೇಳೆಯ ಸೂರ್ಯನ ಬಂಗಾರದ ಬಣ್ಣದ ಬಿಸಿಲಿನಲ್ಲಿ ಹೆಚ್ಚಾಗಿ ಮರಿಗಳೊಂದಿಗೆ ಆಹಾರ ಬೇಟೆಗೆ ಇಳಿಯುತ್ತದೆ. ಸಣ್ಣ ಸಣ್ಣ ಕೀಟಗಳಿಂದ ಮೊದಲುಗೊಂಡು ಯಾವುದೇ ರೀತಿಯ ಕೀಟಗಳು ಕಣ್ಣಿಗೆ ಬಿದ್ದರು ಸೈ ಥಟ್ಟನೆ ಹಾರಿ ಹೋಗಿ ಕ್ಯಾಚ್‌ ಹಾಕಿಕೊಳ್ಳುತ್ತದೆ.

ಕೆಲವೇ ಕೆಲವು ಪಕ್ಷಿಗಳು ಮಾತ್ರ ಉಳುಮೆ ಮಾಡಿರುವ ಅಥವಾ ಕೆರೆ ಅಂಗಳದಲ್ಲಿ ಒಣಗಿರುವ ದೂಳಿನಂತಹ ಮಣ್ಣಿನಲ್ಲಿ ರೆಕ್ಕೆಗಳನ್ನು ಹೊರಳಾಡಿಸುತ್ತ ಸ್ನಾನ ಮಾಡುತ್ತವೆ. ಸಣ್ಣ ಕಳ್ಳಿಪೀರ ಪಕ್ಷಿ ಸಹ ತನ್ನ ಮರಿ ಸೇರಿದಂತೆ ಇಡೀ ಕುಟುಂಬ ಸಮೇತ ಒಟ್ಟಾಗಿ ಮಣ್ಣಿನಲ್ಲಿ ಹೊರಳಾಡುತ್ತ ಸ್ನಾನ ಮಾಡುವ ದೃಶ್ಯವನ್ನು ನೋಡಿ ಕಣ್ತುಂಬಿಕೊಳ್ಳುವುದೇ ಖುಷಿ.

‘ಸುಮಾರು ಸಮಯ ಕಾದು ಕುಳಿತಿದ್ದರೂ ಕ್ಯಾಮೆರಾ ಕಣ್ಣಿಗೆ ಕಾಣದಂತೆ ಪುರ್‌ ಎಂದು ಹಾರಿ ಹೋಗುತ್ತಿದ್ದ ಸಣ್ಣ ಕಳ್ಳಿಪೀರ ಪಕ್ಷಿ ಜತೆಯಲ್ಲಿ ಮರಿ ಇದ್ದ ಕಾರಣಕ್ಕೋ ಅಥವಾ ಬಾಯಲ್ಲಿ ಆಹಾರ ಇದ್ದದ್ದರಿಂದಲೋ ನೆಮ್ಮದಿಯಾಗಿ ಕುಳಿತು ಮರಿಯ ಬಾಯಿಗೆ ಆಹಾರ ಉಣಿಸುತ್ತಿತ್ತು. ಹೀಗಾಗಿ ಒಂದಿಷ್ಟು ಫೋಟೋಗಳನ್ನು ತೆಗೆಯಲು ಸಾಧ್ಯವಾಯಿತು’ ಎಂದರು ಹವ್ಯಾಸಿ ಛಾಯಾಗ್ರಾಹಕ ಹರೀಶ್‌ ದ್ರುವ.

ಸಣ್ಣ ಕಳ್ಳಿಪೀರ ಸಾಮಾನ್ಯವಾಗಿ ವಿದ್ಯುತ್‌ ತಂತಿಗಳ ಮೇಲೆ ಹೆಚ್ಚಾಗಿ ಕುಳಿತಿರುವುದನ್ನು ಕಾಣುತ್ತೇವೆ. ಕೀಟಗಳನ್ನು ಕಂಡ ಕೂಡಲೆ ವೇಗವಾಗಿ ಹಿಂಬಾಲಿಸಿ ಹಿಡಿಯುತ್ತದೆ. ಜೇನು ಹುಳುಗಳು ಹೋಗಿ ಬರುವ ದಾರಿಯಲ್ಲಿನ ಒಣಗಿದ ರೆಂಬೆಯ ಮೇಲೆ ಅಥವಾ ವಿದ್ಯುತ್‌ ತಂತಿಯ ಮೇಲೆ ಕುಳಿತು ಬೇಟೆಯಾಡುವುದೇ ಹೆಚ್ಚು ಎನ್ನುವ ವೈ.ಟಿ.ಲೋಹಿತ್‌, ಬೆಳೆಗಳಲ್ಲಿನ ಕೀಟ ನಿಯಂತ್ರಣದ ಕ್ರಮಗಳು, ಆಹಾರ ಸರಪಳಿಯ ಹಾಗೂ ಪರಿಸರ ವ್ಯವಸ್ಥೆಯಲ್ಲಿನ ಅಸಮತೋಲನದ ಕಾರಣದಿಂದಾಗಿ ಸಣ್ಣ ಕಳ್ಳಿಪೀರಗಳು ಕಾಣುವುದು ಕಡಿಮೆಯಾಗುತ್ತಿವೆ. ಆಕರ್ಷಕ ಹಸಿರು ಬಣ್ಣವನ್ನು ಹೊಂದಿರುವುದರಿಂದ ನೋಡಲು ತುಂಬಾ ಮನಮೋಹಕವಾಗಿದೆ ಈ ಪಕ್ಷಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.