ಸಸಿಗಳ ಜನ್ಮ ದಿನಕ್ಕೆ ಪರಿಸರ ಗೀತಗಾಯನ

7
ಗಂಡರಗೋಳಿಪುರದ ಅರಣ್ಯದಲ್ಲಿ ನೀಲಗಿರಿ ಮರ ತೆರವಿನ ಬಳಿಕ ಬೀಜ ಬಿತ್ತನೆ

ಸಸಿಗಳ ಜನ್ಮ ದಿನಕ್ಕೆ ಪರಿಸರ ಗೀತಗಾಯನ

Published:
Updated:
Deccan Herald

ದೊಡ್ಡಬಳ್ಳಾಪುರ: ತಾಲ್ಲೂಕಿನ ಕಾಡನೂರು ಕೈ ಮರ ಸಮೀಪದ ಗಂಡರಗೋಳಿಪುರದ 150 ಎಕರೆ ಮೀಸಲು ಅರಣ್ಯದಲ್ಲಿ ಯುವ ಸಂಚಲನ ತಂಡದಿಂದ ಸಸಿಗಳಿಗೆ ಜನ್ಮದಿನದ ಸಂಭ್ರಮಾಚರಣೆ ಮಾಡಲಾಯಿತು.

ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ್‌ ಮಾಹಿತಿ ನೀಡಿ, 2017ರ ಆಗಸ್ಟ್‌ 15ರಂದು ವಿವಿಧ ಜಾತಿಯ ಬೀಜಗಳನ್ನು ಇಲ್ಲಿನ ಮೀಸಲು ಅರಣ್ಯದಲ್ಲಿ ಯುವ ಸಂಚಲನ ತಂಡ, ವಲಯ ಅರಣ್ಯ ಇಲಾಖೆ ಹಾಗೂ ಶ್ರೀಕೊಂಗಾಡಿಯಪ್ಪ ಪದವಿ ಕಾಲೇಜಿನ ಎನ್‌ಎಸ್‌ಎಸ್‌ ಘಟಕದ ವತಿಯಿಂದ ನೇರ ಬಿತ್ತನೆ ಮಾಡಲಾಗಿತ್ತು ಎಂದರು.

ಅರಣ್ಯ ವಲಯದ ಭೂಮಿಯಲ್ಲಿ ಈ ಹಿಂದೆ ನೆಡಲಾಗಿದ್ದ ನೀಲಗಿರಿ ಮರಗಳನ್ನು ತೆರವುಗೊಳಿಸುತ್ತಿದೆ. ಹಾಗೆಯೇ ಗಂಡರಗೋಳಿಪುರದ ಅರಣ್ಯದಲ್ಲಿ ವಿವಿಧ ಜಾತಿಯ ಬೀಜಗಳನ್ನು ಹಿಂದಿನ ವರ್ಷದ ಸ್ವಾತಂತ್ರ್ಯ ದಿನದಂದು ಹಾಕಲಾಗಿತ್ತು. ಈ ಬೀಜಗಳ ಪೈಕಿ ಸುಮಾರು ಮುಕ್ಕಾಲು ಭಾಗದಷ್ಟು ಬೀಜಗಳು ಮೊಳೆತು ಸಸಿಗಳಾಗಿವೆ. ಇದಲ್ಲದೆ ಒಂದಿಷ್ಟು ಸಸಿಗಳನ್ನು ನಾಟಿ ಮಾಡಲಾಗಿತ್ತು ಎಂದರು.

‘ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಎಂದೂ ಫಲ ಕೊಡದೆ ಇರದೂ ಎನ್ನುವ ದೇವನೂರ ಮಹಾದೇವರ ಮಾತು ಅಕ್ಷರಶಃ ಇಲ್ಲಿ ಸಾಕಾರವಾಗಿದೆ. ನಾವು ಬಿತ್ತಿದ ಬೀಜಗಳು ಮೊಳಕೆಯೊಡೆದು ಬೆಳೆದು ನಿಂತಿರುವುದನ್ನು ನೋಡಿ ಖುಷಿಯಾಗಿದೆ. ಇದಕ್ಕಾಗಿಯೇ ನಮ್ಮ ತಂಡದಿಂದ ಸಸಿಗಳಿಗೆ ಹುಟ್ಟು ಹಬ್ಬವನ್ನು ಪರಿಸರ ಗೀತೆ ಹಾಡುವ ಮೂಲಕ ಆಚರಿಸಿದ್ದೇವೆ’ ಎಂದರು.

‘ಸಸಿಗಳಿಗೂ ಜೀವವಿದೆ, ಆ ಜೀವವೇ ನಮ್ಮ ಜೀವಗಳಿಗೆ ಜೀವ ನೀಡುತ್ತಿರುವುದು. ಸಸಿ ನೆಟ್ಟು ಬೀಜ ಬಿತ್ತಿ ಸುಮ್ಮನಾಗುವದಷ್ಟೇ ನಮ್ಮ ಕೆಲಸವಲ್ಲ. ಅವುಗಳನ್ನು ಬೆಳೆಸುವುದು ನಮ್ಮ ಬದ್ಧತೆಯಾಗಿದೆ. ಸಿಹಿ ತಿಂದು ಪರಿಸರ ಗೀತೆ ಹಾಡುವ ಮೂಲಕ ಈ ಸಂಭ್ರಮಿಸಿದ್ದೇವೆ. ನಮ್ಮ ತಂಡ ವಿವಿಧ ಕಾಲೇಜು ವಿದ್ಯಾರ್ಥಿಗಳನ್ನು ಸಂಘಟಿಸಿ ಬೀಜಗಳನ್ನು ಹಾಕುವ, ಸಸಿಗಳನ್ನು ನೆಡುವ ಕೆಲಸ ಮಾಡುತ್ತಿದೆ’ ಎಂದರು.

ಹುಟ್ಟು ಹಬ್ಬದ ಗೀತಗಾಯನದಲ್ಲಿ ಯುವ ಸಂಚಲನದ ಸದಸ್ಯ ದಿವಾಕರ್‌ ನಾಗ್, ಭರತ್‌ದಿವಾಕರ್, ಕೆಂಪರಾಜು, ನಂದಕಿಶೋರ್ ಭಾಗವಹಿಸಿ ಹಾಡುಗಳನ್ನು ಹಾಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !