ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದರೆ ಬಿಜೆಪಿ ಸೇರುತ್ತಾನೆ ಎಂಬುದು ಅಪಪ್ರಚಾರ : ಶರತ್ ಬಚ್ಚೇಗೌಡ

ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡ ತೀವ್ರ ವಾಗ್ದಾಳಿ
Last Updated 25 ನವೆಂಬರ್ 2019, 14:55 IST
ಅಕ್ಷರ ಗಾತ್ರ

ಸೂಲಿಬೆಲೆ: ಜಾತಿ,ಧರ್ಮದ ನಡುವೆ ಬಿರುಕು ಮೂಡಿಸುತ್ತಿರುವ ಬಿಜೆಪಿ ಜನರನ್ನು ತಪ್ಪು ದಾರಿಗೆ ನೂಕುತ್ತಿದೆ. ರಾಜ್ಯಮಟ್ಟದ ನಾಯಕರು, ಮಂತ್ರಿಗಳನ್ನು ಜಾತಿಗೆ ಒಬ್ಬರಂತೆ ಕರೆತಂದು ಚುನಾವಣಾ ಪ್ರಚಾರ ನಡೆಸಲಾಗುತ್ತಿದೆ ಎಂದು ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿನ ನಂದಗುಡಿ ಹೋಬಳಿಯ ಕೊರಟಿ, ಹೆಡಕನಹಳ್ಳಿ, ಬೈಲನರಸಾಪುರ, ಮೋತಕದಹಳ್ಳಿ, ಕೊರಡಹಳ್ಳಿ, ಸತ್ಯವಾರ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು.

‘ನಮ್ಮ ಕುಟುಂಬ ಇದುವರೆಗೂ ಜಾತಿ, ಧರ್ಮದ ಆಧಾರದಲ್ಲಿ ರಾಜಕಾರಣ ಮಾಡಿಲ್ಲ. ಎಲ್ಲ ಜಾತಿ, ಧರ್ಮ, ಸಮುದಾಯದ ಜತೆ ಸೇರಿಯೇ ರಾಜಕಾರಣ ಮಾಡುತ್ತಿರುವುದು ತಾಲ್ಲೂಕಿನ ಜನರಿಗೆ ತಿಳಿದ ವಿಷಯ. ಮೊದಲಿನಿಂದಲೂ ಜಾತ್ಯತೀತ ತತ್ವಕ್ಕೆ ಅಂಟಿಕೊಂಡಿದ್ದೇವೆ’ ಎಂದು ಎಂಟಿಬಿ ನಾಗರಾಜ್‌ ವಿರುದ್ಧ ಕುಟುಕಿದರು.

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೊದಲು ಕಾರ್ಯಕರ್ತರು, ಮತದಾರರ ಸಲಹೆ, ಅಭಿಪ್ರಾಯ ಕೇಳಿಯೇ ನಿರ್ಣಯ ತೆಗೆದುಕೊಳ್ಳಲಾಗಿದೆ. ಜನರ ನಂಬಿಕೆ ಉಳಿಸಿಕೊಳ್ಳಲಾಗುವುದು.‌ ತಾಲ್ಲೂಕಿನ ಸ್ವಾಭಿಮಾನ ಉಳಿಸಬೇಕಾಗಿದೆ ಎಂದು ಮತದಾರರಿಗೆ ಮನವಿ ಮಾಡಿದರು.

ಟಿಎಪಿಸಿಎಂಎಸ್ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಮಾತನಾಡಿ, ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಶರತ್ ಬಚ್ಚೇಗೌಡ ಅವರಿಗೆ ವಿಧಾನಪರಿಷತ್‌ ಸದಸ್ಯತ್ವ ಇಲ್ಲವೇ ದೊಡ್ಡಬಳ್ಳಾಪುರ ಅಭ್ಯರ್ಥಿ ಮಾಡುವುದಾಗಿ ಆಮಿಷವೊಡ್ಡಿದರು. ಒಪ್ಪದೆ ಇದ್ದಾಗ ನಮ್ಮನ್ನು ನಂಬಿ ರಾಜೀನಾಮೆ ನೀಡಿರುವ 17ಜನರಿಗೆ ವಿಷ ಕೊಡಲೇ ಎಂದು ಕೇಳಿದರು. ಕ್ಷೇತ್ರದ ಮತದಾರರು ಕೈ ಹಿಡಿಬೇಕೆಂದು’ ಮನವಿ ಮಾಡಿದರು.

ಸಿದ್ದರಾಮಯ್ಯ ಗೆ ಟಾಂಗ್: ಶರತ್ ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್ ಒಂದೇ ಮುಖದ ಎರಡು ನಾಣ್ಯಗಳು ಎಂದು ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್‌ ನೀಡಿದ ಅವರು, ಶರತ್‌ ಅವರ ಗೆಲುವು ನಿಶ್ಚಿತ ಎಂದು ಮನವರಿಕೆ ಆಗಿರಬಹುದು. ಇದೆಲ್ಲ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಜಾತ್ಯತೀತ ಸಿದ್ಧಾಂತ: ಗೆದ್ದ ನಂತರ ಬಿಜೆಪಿ ಸೇರುತ್ತಾರೆ ಎಂದು ಸಿದ್ದರಾಮಯ್ಯ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಶರತ್, ಚುನಾವಣೆಯಲ್ಲಿ ಗೆದ್ದರೆ ಮತದಾರರು, ಕಾರ್ಯಕರ್ತರು ಹಾಗೂ ಎಲ್ಲ ಜಾತಿ, ಧರ್ಮದ ಮುಖಂಡರ ಸಲಹೆ ಸೂಚನೆ ಪಡೆದೇ ಮುಂದಿನ ನಡೆ ನಿರ್ಧರಿಸಲಾಗುವುದು ಎಂದರು.

ಮುಖಂಡರಾದ ರಾಜಶೇಖರಗೌಡ, ಸಿ.ಮುನಿಯಪ್ಪ, ಎಲ್.ಎನ್.ಟಿ.ಮಂಜು, ವೈಎಸ್.ಎಂ.ಮಂಜು, ಎಪಿಎಂಸಿ ಸತೀಶ್, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ (ಶ್ರೀಕಾಂತ್), ಕರಪನಗಹಳ್ಳಿ ಮಂಜುನಾಥ್ ಹಾಗೂ ಸುತ್ತ ಮತ್ತಲಿನ ಗ್ರಾಮಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT