ಗುರುವಾರ , ನವೆಂಬರ್ 21, 2019
23 °C

ಬಿಜೆಪಿ ಮುಖಂಡರು ಅಭಿವೃದ್ಧಿಗೆ ಅಡ್ಡಿ: ಆರೋಪ   

Published:
Updated:
Prajavani

ದೊಡ್ಡಬಳ್ಳಾಪುರ: ‘ವಾಲ್ಮೀಕಿ ಸಮುದಾಯಕ್ಕಾಗಿ ₹ 2ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕ್ಷೇತ್ರದ ಶಾಸಕನಾದ ಮೇಲೆ ಎಲ್ಲಾ ಹಿಂದುಳಿದ ಮತ್ತು ಪರಿಶಿಷ್ಟ ಜಾತಿಗಳಿಗೆ ಸಮುದಾಯ ಭವನವನ್ನು ನಿರ್ಮಿಸಿಕೊಡಲಾಗಿದೆ’ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಅವರು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ನಗರದ ತಾಲ್ಲೂಕು ಕಚೇರಿಯಲ್ಲಿ ಭಾನುವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಭಿವೃದ್ಧಿ ವಿರುದ್ಧ ಬಿಜೆಪಿ ನಾಯಕರ ದೋರಣೆ ಖಂಡನೀಯ: ‘ತಾಲ್ಲೂಕಿನ ಪ್ರತಿ ಹೋಬಳಿ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಈಗಾಗಲೆ ಜಿಲ್ಲಾ ಆಸ್ಪತ್ರೆಯಾಗಿ ನಗರದಲ್ಲಿನ ತಾಯಿ ಮಗು ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲಾಗಿದೆ. 100 ಹಾಸಿಗೆಗಳಿಂದ 200 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮಾಡುವಲ್ಲಿ ₹ 9 ಕೋಟಿ ಬಿಡುಗಡೆಯಾಗಿದೆ. ರಾಜ್ಯ ರಸ್ತೆ ಅಭಿವೃದ್ಧಿ ಮಂಡಲಿಯಿಂದ ₹ 8 ಕೋಟಿ ಹಣವನ್ನು ತುರ್ತು ರಸ್ತೆ ಅಭಿವೃದ್ಧಿಗೆ ತರಲಾಗಿತ್ತು. ಇಲ್ಲಿನ ಬಿಜೆಪಿ ನಾಯಕರು ಈ ಕಾಮಗಾರಿಗಳನ್ನು ನಿಲ್ಲಿಸಿದ್ದಾರೆ. ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸದ ಬಿಜೆಪಿ ಮುಖಂಡರು ಧೋರಣೆ ಖಂಡನೀಯ’ ಎಂದರು.

ವಾಲ್ಮೀಕಿ ಸಂಘದ ತಾಲ್ಲೂಕು ಉಪಾಧ್ಯಕ್ಷ ಕುಮಾರ್ ಮಾತನಾಡಿ, ‘ಹಳೇ ಬಸ್ ನಿಲ್ದಾಣದಲ್ಲಿ ಇರುವ ಅಂಬೇಡ್ಕರ್ ಮತ್ತು ಜಗಜೀವನ್‌ರಾಂ ಪುತ್ಥಳಿ ಜೊತೆ ಶ್ರೀವಾಲ್ಮೀಕಿ ಪುತ್ಥಳಿ ನಿರ್ಮಾಣ ಮಾಡುವಲ್ಲಿ ಮುಂದಾಗಬೇಕು’ ಎಂದು ಶಾಸಕರಿಗೆ ಮನವಿ ಮಾಡಿದರು.

ಶ್ರೀದೇವರಾಜು ಅರಸು ವ್ಯವಹಾರ ನಿರ್ವಹಣಾ ಮಹಾ ವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಚಿಕ್ಕಣ್ಣ ಮಾತನಾಡಿ, ‘ರಾಜ್ಯದ ಜನಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ವಾಲ್ಮೀಕಿ ಸಮುದಾಯಕ್ಕೆ ನೀಡುತ್ತಿರುವ ಶೇ 3ರಷ್ಟು ಮೀಸಲಾತಿ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿಲ್ಲ. ಹೀಗಾಗಿ ಕೇಂದ್ರದ ಮಾದರಿಯಲ್ಲಿ ಶೇ7.5 ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ನೀಡಬೇಕು. ಪರಿಶಿಷ್ಠ ವರ್ಗದ ವಾಲ್ಮೀಕಿ ಸಮುದಾಯ ಸರ್ಕಾರದ ಸವಲತ್ತುಗಳನ್ನು ಸಕಾಲಕ್ಕೆ ಪಡೆಯುವ ಮೂಲಕ ಅಭಿವೃದ್ಧಿ ಕಾಣಬೇಕಿದೆ. ಆದರೆ ಈ ನಿಟ್ಟಿನಲ್ಲಿ ಜನಾಂಗ ವಿಫಲವಾಗುತ್ತಿರುವುದು ಬೇಸರ ತಂದಿದೆ. ವಾಲ್ಮೀಕಿ ಜಯಂತಿಯೆ ಅಲ್ಲದೆ ಎಲ್ಲಾ ಮಹನೀಯರ ಜಯಂತಿಗಳು ಅರ್ಥ ಪೂರ್ಣವಾಗಿ ಆಚರಣೆ ಮಾಡುವಲ್ಲಿ ತಾಲ್ಲೂಕು ಆಡಳಿತ ಶ್ರಮಿಸಬೇಕಿದೆ’ ಎಂದರು.

ವಾಲ್ಮೀಕಿ ಸಂಘದ ತಾಲ್ಲೂಕು ಅಧ್ಯಕ್ಷ ಪ್ರೇಮಕುಮಾರ್ ಮಾತನಾಡಿ, ‘ವಾಲ್ಮೀಕಿ ಸಂಘದ ಸಮುದಾಯ ಭವನಕ್ಕೆ 2 ಎಕರೆಗೂ ಹೆಚ್ಚು ಭೂಮಿ ನೀಡಿರುವ ಶಾಸಕ ಕಾರ್ಯ ಶ್ಲಾಘನೀಯ. ಇದರಲ್ಲಿ 4 ಗುಂಟೆಯಷ್ಟು ಭೂಮಿಯನ್ನು ಖಾಸಗಿಯವರು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವಂತೆ’ ಶಾಸಕರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಂ.ಕೆ.ರಮೇಶ್, ನಗರಸಭೆ ಪೌರಾಯುಕ್ತ ಮಂಜುನಾಥ್, ಬಿಇಓ ಬೈಯ್ಯಪ್ಪರೆಡ್ಡಿ, ಕನ್ನಡ ಪಕ್ಷ ತಾಲ್ಲೂಕು ಅಧ್ಯಕ್ಷ ಸಂಜೀವನಾಯಕ್, ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಅಧ್ಯಕ್ಷೆ ಪ್ರಮೀಳಾಮಹದೇವ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಅಶೋಕ್, ಸಮುದಾಯದ ಮುಖಂಡರಾದ ದೇವರಾಜಮ್ಮ,ಡಿ.ಡಿ.ಕೆ.ಹಳ್ಳಿ ಮುನಿಕೃಷ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಪ್ರತಿಕ್ರಿಯಿಸಿ (+)