ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ವ್ಯಾಯಾಮ ಶಾಲೆಯ ವಾರ್ಷಿಕೋತ್ಸವ, ರಕ್ತದಾನ ಶಿಬಿರ

Last Updated 19 ಜನವರಿ 2020, 14:08 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ದೇಹದ ಪ್ರಧಾನ ಅಂಗವಾಗಿರುವ ಕಣ್ಣು ಎಲ್ಲರಿಗೂ ಅತ್ಯಗತ್ಯ. ಇಂದು ರಕ್ತದಾನದಂತೆ ನೇತ್ರದಾನವೂ ಶ್ರೇಷ್ಟ ದಾನವಾಗಿದೆ. ಮರಣಾನಂತರ ಕಣ್ಣುಗಳು ಇನ್ನೊಬ್ಬರ ದೃಷ್ಟಿಗೆ ನೆರವಾಗಬೇಕಿದೆ ಎಂದು ದಕ್ಷಿಣ ಭಾರತ ನೇತ್ರ ಸಂಗ್ರಹಣಾ ಕೇಂದ್ರಗಳ ಸಂಘಟನೆ ಅಧ್ಯಕ್ಷ ಎಂ.ಕೆ.ಕೃಷ್ಣ ಹೇಳಿದರು.

ನಗರದ ಕುಚ್ಚಪ್ಪನಪೇಟೆಯಲ್ಲಿರುವ ಶ್ರೀಮಾರುತಿ ವ್ಯಾಯಾಮ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣೆ, ಕನ್ನಡಕಗಳ ವಿತರಣೆ, ದಂತ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಕಳಕಳಿ ಹೊಂದುವುದು ಅಗತ್ಯ. ಮರಣ ಹೊಂದಿದ ವ್ಯಕ್ತಿಯ ಕುಟುಂಬದವರು ಸಹ ಒಪ್ಪಿ ಕಣ್ಣುಗಳನ್ನು ದಾನ ಮಾಡಬಹುದು. ನೇತ್ರದಾನದ ಬಗ್ಗೆ ಜನರಲ್ಲಿ ಮೌಢ್ಯ ಹಾಗೂ ತಪ್ಪು ಕಲ್ಪನೆಗಳಿವೆ. ಆದರೆ ವ್ಯಕ್ತಿ ಮರಣಿಸಿದ ನಂತರ ಕಣ್ಣುಗಳನ್ನು ನೋಂದಣಿ ಮಾಡಿಸಿದ ನೇತ್ರಾಲಯಗಳು ಪಡೆಯಲಿದ್ದು,ಈ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಕಣ್ಣುಗಳನ್ನು ಸುರಕ್ಷಿತವಾಗಿಡುವುದು ಅಗತ್ಯ. ಇಡೀ ದೇಶದಲ್ಲಿಯೇ ಗ್ರಾಮಾಂತರ ಪ್ರದೇಶದಲ್ಲಿ ಅತಿ ಹೆಚ್ಚು ಕಣ್ಣುಗಳನ್ನು ಸಂಗ್ರಹಿಸಿದ ಹಿರಿಮೆ ದೊಡ್ಡಬಳ್ಳಾಪುರದಾಗಿದ್ದು, ಇತ್ತೀಚೆಗೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ನೇತ್ರದಾನದ ಬಗ್ಗೆ ಜಾಗೃತಿ ಮೂಡುತ್ತಿರುವುದು ಸಂತಸದ ಸಂಗತಿ. ರಕ್ತದಾನದಿಂದ ರೋಗಿಗಳ ಜೀವ ಉಳಿಸಬಹುದಾಗಿದೆ. ರಕ್ತಕ್ಕೆ ಬದಲಿ ವಸ್ತುವಿಲ್ಲ. ಅಂತೆಯೇ ಕಣ್ಣುಗಳು ಸಹ ನಮ್ಮ ಮರಣಾ ನಂತರ ಇನ್ನೊಬ್ಬರ ಬಾಳು ಬೆಳಗಿಸುತ್ತವೆ ಎಂದರು.

ಮಾರುತಿ ವ್ಯಾಯಾಮ ಶಾಲೆಯ ಮ್ಯಾನೇಂಜಿಂಗ್ ಟ್ರಸ್ಟ್ರೀ ಎಂ.ಬಿ.ಗುರುದೇವ ಮಾತನಾಡಿ, ‘ಅಭಿಷೇಕ್ ನೇತ್ರಧಾಮ, ಡಾ.ರಾಜ್‍ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರದ ಸಹಯೋಗದಲ್ಲಿ ತಾಲ್ಲೂಕಿನಲ್ಲಿ ಇದುವರೆವಿಗೂ 1,414 ಕಣ್ಣುಗಳನ್ನು ಸಂಗ್ರಹಿಸಲಾಗಿದೆ. ಮೃತ ವ್ಯಕ್ತಿ ವಿಕಾರವಾಗಿ ಅಥವಾ ಯಾವುದೇ ಸ್ಥಿತಿಯಲ್ಲಿದ್ದರೂ, ಸ್ಥಳಕ್ಕೆ ತೆರಳಿ ಕಣ್ಣುಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸಿ ತಲುಪಿಸುವುದು ಜವಾಬ್ದಾರಿಯ ಕೆಲಸ. ಡಾ.ಅಂಬಿಕಾ, ಡಾ.ಕೆ.ವಿ.ಹರೀಶ್ ಮಾರ್ಗದರ್ಶನದಲ್ಲಿ ನೇತ್ರ ಸಂಗ್ರಹಣಾ ಕೇಂದ್ರಕ್ಕೆ ತಲುಪಿಸುವವರಿವಿಗೂ ನೇತ್ರ ಸಂಗ್ರಹಣಕಾರರು ಪಡುವ ಶ್ರಮ ಹೆಚ್ಚಿದೆ. ನೇತ್ರದಾನಿಗಳಿಗೆ ಹಾಗೂ ನೇತ್ರ ಸಂಗ್ರಹಕಾರರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದೆ’ ಎಂದರು.

ಈ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ಚಂದ್ರಕಾಂತ್, ಭೂಪೇಂದ್ರನ್, ಸುಜಾತಾ ಭೂಪೇಂದ್ರನ್ ಅವರನ್ನು ಸನ್ಮಾನಿಸಲಾಯಿತು. ನೇತ್ರ ಸಂಗ್ರಹಣಕಾರರಾದ ಆರ್.ಲಕ್ಷ್ಮೀನಾರಾಯಣ್, ಟಿ.ವಿ.ರವಿ, ಶರತ್‌ಬಾಬು, ಜಗನ್ನಾಥ್ ಅವರನ್ನು ಸನ್ಮಾನಿಸಲಾಯಿತು. ಮೃತರ ನೇತ್ರದಾನ ಮಾಡಿದ ಕುಟುಂಬದ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.

ಎಚ್‌.ಆರ್‌.ದೇವಕಿ ಗುರುದೇವ ಅವರ ಸ್ಮರಣಾರ್ಥ ಅಭಿಷೇಕ್ ನೇತ್ರಧಾಮ ಕಣ್ಣಿನ ತಪಾಸಣೆ ಶಿಬಿರ, ಶ್ಮಾಮು ಹೆಲ್ತ್ ಕೇರ್, ರೆಡ್ ಕ್ರಾಸ್ ಸಂಸ್ಥೆಯಿಂದ ರಕ್ತದಾನ ಶಿಬಿರ, ವಿಜಯ ದಂತ ಚಿಕಿತ್ಸಾಲಯದಿಂದ ಉಚಿತ ದಂತ ತಪಾಸಣಾ ಶಿಬಿರ ನಡೆಯಿತು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಮೋಹನ್ ಕುಮಾರ್, ಅಭಿಷೇಕ್ ನೇತ್ರಧಾಮದ ಡಾ. ಕೆ.ವಿ.ಹರೀಶ್, ಡಾ.ಕೆ.ಎಸ್.ಶ್ಯಾಮ ಪ್ರಸಾದ್, ಡಾ.ಎಲ್.ಎ.ಅಂಬಿಕಾ, ವ್ಯಾಯಾಮ ಶಾಲೆಯ ಟ್ರಸ್ಟ್ರೀ ಎಂ.ಎನ್.ಶಿವಶಂಕರ್, ಕಾರ್ಯದರ್ಶಿ ಜಿ.ವಿಶ್ವನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT