ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಅಡ್ಡಾದಿಡ್ಡಿ ಸಂಚಾರ: ಕಿರಿಕಿರಿ

Last Updated 12 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ದೇವನಹಳ್ಳಿ: ನಗರದಲ್ಲಿ ಸಂಚರಿಸುವ ಬೆಂಗಳೂರು ಮಹಾನಗರ ಸಾರಿಗೆ ಬಸ್‌ಗಳು ಎಲ್ಲಂದರಲ್ಲಿ ಅಡ್ಡಾದಿಡ್ಡಿ ತಿರುವು ಪಡೆಯುತ್ತಿರುವುದರಿಂದ ದಿನನಿತ್ಯ ರಸ್ತೆಯಲ್ಲಿ ಸಂಚರಿಸುವ ಇತರ ವಾಹನಗಳಿಗೆ ಕಿರಿಕಿರಿಯಾಗುತ್ತದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ದೇವನಹಳ್ಳಿ ನಗರದಲ್ಲಿ ಬಸ್‌ ಪ್ರಯಾಣಿಕರ ಸಂಖ್ಯೆಯು ಗಣನೀಯವಾಗಿ ಹೆಚ್ಚುತ್ತಿದೆ. ನಗರದ ಮಧ್ಯೆಯಲ್ಲಿರುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸಬಸ್‌ ನಿಲ್ದಾಣ ಮತ್ತು ಹಳೇ ಬಸ್‌ ನಿಲ್ದಾಣದಿಂದ ಮುಂದೆ ಸಾಗಿ ಶತಾಯುಷಿ ಶಿವಕುಮಾರ್‌ ಸ್ವಾಮಿಜಿ ವೃತ್ತ ಮಾರ್ಗವಾಗಿ ಸಾಗಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದವರೆಗೆ ಹೋಗಿ ತಿರುವು ಪಡೆಯುತ್ತವೆ. ಈ ಸಂದರ್ಭ ಬಹುತೇಕ ಬಸ್‌ಗಳು ಜನದಟ್ಟಣೆ ಇರುವ ಹಳೇ ಬಸ್‌ ನಿಲ್ದಾಣ, ಸಾಧುಮಠ ಮತ್ತು ಪ್ರವಾಸಿ ಮಂದಿರದ ಬಳಿ ತಾಸುಗಟ್ಟಲೆ ಪ್ರಯಾಸದಿಂದ ತಿರುವು ಪಡೆಯುತ್ತವೆ. ಈ ಸಂದರ್ಭದಲ್ಲಿ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ ಎನ್ನುತ್ತಾರೆ ಸ್ಥಳೀಯ ವಾಹನ ಸವಾರರು.

‘ಸಿಗ್ನಲ್‌ ವ್ಯವಸ್ಥೆ ಇಲ್ಲಿಲ್ಲ. ಈ ಹಿಂದೆ ಎಷ್ಟು ಅಗಲ ಇತ್ತು ಅಷ್ಟೇ ಅಗಲ ರಸ್ತೆ ಇದೆ. ವಾಹನಗಳ ಸಂಚಾರ ಮಿತಿ ಮೀರುತ್ತಿದೆ. ಫುಟ್‌ಪಾತ್‌ ಮೇಲೆ ಅಂಗಡಿಗಳಿವೆ. ಪಾದಚಾರಿಗಳಿಗೆ ನಡೆದುಹೋಗಲು ರಸ್ತೆಯಲ್ಲಿ ಸಾಲುಗಟ್ಟಿರುವ ವಾಹನಗಳು ಒಂದೆಡೆಯಾದರೆ ಪಾದಚಾರಿ ರಸ್ತೆಗಳೇ ಸುರಕ್ಷಿತವಲ್ಲ. ನಮ್ಮಂತಹ ವಯೋವೃದ್ಧರು ಇಲ್ಲಿನ ಪೇಟೆಗೆ ಬಂದು ಪರಿಕರ ಖರೀದಿಸಿ ಗ್ರಾಮಗಳಿಗೆ ಯಾವ ರೀತಿ ತೆರಳಬೇಕು? ನಮ್ಮ ಸಂಕಷ್ಟ ಯಾರಿಗೆ ಹೇಳಬೇಕು’ ಎಂದು ಹಿರಿಯ ನಾಗರಿಕ ಕಾರಹಳ್ಳಿ ಮುನಿಯಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.

‘ತಾಲ್ಲೂಕಿನ ವಿಮಾನ ನಿಲ್ದಾಣ, ದೇವನಹಳ್ಳಿ ನಗರದ ಸುತ್ತಮುತ್ತ ಅನೇಕ ಕಟ್ಟಡಗಳ ಕಾಮಗಾರಿ ನಡೆಯುತ್ತಿದೆ. ಸಾವಿರಾರು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಭಾನುವಾರದ ರಜೆ ಮತ್ತು ಬುಧವಾರದ ಸಂತೆಗೆ ಇಡಿ ನಗರ ಜನಜಂಗುಳಿಯಿಂದ ತುಂಬಿಕೊಂಡಿರುತ್ತದೆ. ಹಬ್ಬ ಮತ್ತು ಜಾತ್ರೆಗಳ ಸಂದರ್ಭದಲ್ಲಿ ದಟ್ಟಣಿಯ ಜನಸಂದಣಿ ನಡುವೆ ನೂಕು ನುಗ್ಗಲು ವಿಪರೀತ ಸಾಹಸ ಪಡಬೇಕು. ಈ ಬಿಎಂಟಿಸಿ ಬಸ್‌ಗಳು ನಿಲ್ಲಲು ಸ್ಥಳಾವಕಾಶ ಕಲ್ಪಿಸಿಲ್ಲ. ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಬಳಿ ನಿಲುಗಡೆ ಮಾಡಿಕೊಂಡು ಕನಿಷ್ಠ ಐದು – ಹತ್ತು ನಿಮಿಷಗಳಿಗೊಮ್ಮೆ ಬಸ್‌ ನಿಲ್ದಾಣಕ್ಕೆ ಬರಲಿ ಎಂದು ಬಿಎಂಟಿಸಿ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿದಾಗ ಅವರು ಒಪ್ಪಿಗೆ ಸೂಚಿಸಿದ್ದರು. ನಂತರ ಹದಿನೈದು ದಿನ ಸಮಸ್ಯೆ ಇರಲಿಲ್ಲ ಮತ್ತೆ ಯಥಾಸ್ಥಿತಿಯಾಗಿದೆ’ ಎಂದು ನಾಗರಾಜ್‌ ಆರೋಪಿಸಿದರು.

‘ಬೈಪಾಸ್‌ ರಸ್ತೆ ಕಾಮಗಾರಿ ತ್ವರಿತವಾಗಿ ಮುಗಿಸಬೇಕು ಬಿ.ಎಂ.ಟಿ.ಸಿ ಬಸ್‌ಗಳು ನಗರದಲ್ಲಿ ಎಲ್ಲೆಂದರಲ್ಲಿ ತಿರುವು (ಯುಟರ್ನ್‌) ಪಡೆಯದಂತೆ ಇಲಾಖೆಗೆ ತಾಕೀತು ಮಾಡಬೇಕು, ಬಿಎಂಟಿಸಿ ಘಟಕ ತ್ವರಿತವಾಗಿ ಆರಂಭವಾಗಬೇಕು. ನಿತ್ಯದ ಮಾರುಕಟ್ಟೆ ವಹಿವಾಟುವಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದರೆ ಮಾತ್ರ ಸ್ಥಳೀಯರಿಗೆ ನೆಮ್ಮದಿ ಇಲ್ಲದಿದ್ದರೆ ಮುಂದಿನ ದಿಗಳಲ್ಲಿ ಇನ್ನಷ್ಟು ಸಂಕಷ್ಟ ತಪ್ಪಿದ್ದಲ್ಲ’ ಎನ್ನುತ್ತಾರೆ ಸ್ಥಳೀಯ ಸಾರ್ವಜನಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT