ಮಂಗಳವಾರ, ನವೆಂಬರ್ 19, 2019
23 °C

ವಿಜಯಪುರದಲ್ಲಿ ಜಲಶಕ್ತಿ ಅಭಿಯಾನ | ‘ಮಳೆ ನೀರನ್ನು ಭೂಮಿಗೆ ಇಂಗಿಸಿ’

Published:
Updated:
Prajavani

ವಿಜಯಪುರ: ‘ಜಲಮೂಲಗಳ ಸಂರಕ್ಷಣೆ ಮಾಡುವುದರ ಜತೆಗೆ ಮಳೆಯ ನೀರನ್ನು ಭೂಮಿಗೆ ಇಂಗಿಸುವ ಮೂಲಕ ಅಂತರ್ಜಲದ ಮಟ್ಟ ಏರಿಕೆಗೆ ನಾವೆಲ್ಲರೂ ಬದ್ಧರಾಗಬೇಕಾಗಿದೆ’ ಎಂದು ಪುರಸಭಾ ಮುಖ್ಯಾಧಿಕಾರಿ ಎ.ಬಿ. ಪ್ರದೀಪ್‌ಕುಮಾರ್ ಹೇಳಿದರು.

ಇಲ್ಲಿನ ಬಸ್ ನಿಲ್ದಾಣದಲ್ಲಿ ಚಿಂತಾಮಣಿಯ ‘ಬೇರು ಬೆವರು ಕಲಾ ತಂಡ’, ವಿಜಯಪುರ ಪುರಸಭೆ, ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಜಲಶಕ್ತಿ ಅಭಿಯಾನ-2019’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಲಶಕ್ತಿ ಅಭಿಯಾನವು ಕೇಂದ್ರ ಸರ್ಕಾರದ ಬಹುದೊಡ್ಡ ಯೋಜನೆಯಾಗಿದೆ. ಇದನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ರಾಜ್ಯ ಸರ್ಕಾರವೂ ಪ್ರಸಕ್ತ ವರ್ಷವನ್ನು ಆಯವ್ಯಯದಲ್ಲಿ ಜಲ ವರ್ಷವೆಂದು ಘೋಷಿಸಿದೆ. ಜೀವ ಜಲವನ್ನು ಮುಂದಿನ ಪೀಳಿಗೆಗೆ ಉಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.

ಕೇವಲ ಒಂದು ದಿನ ಈ ಕಾರ್ಯಕ್ರಮ ಮಾಡುವುದರಿಂದ ನೀರನ್ನು ಉಳಿಸಲು ಸಾಧ್ಯವಿಲ್ಲ. ನೀರಿನ ಸಂರಕ್ಷಣೆಯು ಪ್ರತಿಯೊಬ್ಬರ ಆದ್ಯ ಕರ್ತವ್ಯವಾದಾಗ ಮಾತ್ರ ಜಲಸಂಪನ್ಮೂಲ ಉಳಿಯುತ್ತದೆ ಎಂದರು.

ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ನರೇಶ್‌ ನಾಯಕ್ ಮಾತನಾಡಿ, ನೀರಿನ ಸಮಸ್ಯೆಯು ಕೇವಲ ಒಂದು ಪ್ರದೇಶಕ್ಕೆ ಸಂಬಂಧಿಸಿಲ್ಲ. ಅದು ದೇಶದ ಅತಿದೊಡ್ಡ ಸಮಸ್ಯೆಯಾಗಿದೆ ಎಂದರು.

ನೀರಿನ ಸಮಸ್ಯೆ ಎದುರಿಸುತ್ತಿರುವ 710 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ 256 ಜಿಲ್ಲೆಗಳನ್ನು ಜಲಶಕ್ತಿ ಅಭಿಯಾನಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ಎಲ್ಲ ಪ್ರದೇಶಗಳಲ್ಲಿ ನೀರಿನ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಜಲಶಕ್ತಿ ಅಭಿಯಾನ ಆಚರಿಸಲಾಗುತ್ತಿದೆ. ಜನರು ಸಕ್ರಿಯವಾಗಿ ತೊಡಗಿಸಿಕೊಂಡು ಜಲಸಂಪನ್ಮೂಲ ಉಳಿಸಬೇಕು ಎಂದರು.

ಎಂಜಿನಿಯರ್ ಸುಪ್ರಿಯಾ ರಾಣಿ ಮಾತನಾಡಿ, ಕೆರೆ, ಕುಂಟೆ, ಬಾವಿಗಳು ಬತ್ತಿ ಹೋಗಿವೆ. ಮೊದಲು ಕೆರೆ ಕುಂಟೆಯಲ್ಲಿನ ನೀರನ್ನೇ ಕುಡಿಯುತ್ತಿದ್ದರು. ನಂತರ ಅಂತರ್ಜಲ ಪಾತಾಳ ಸೇರುತ್ತಿದ್ದಂತೆ ಬಾವಿಗಳನ್ನು ಬಳಸಿದರು ಎಂದರು.

ಮುಂದೆ ಸಾಗಿ ಕೈ ಪಂಪುಗಳು ಬಳಕೆ ಹೆಚ್ಚಾಯಿತು. ಆದರೆ, ಇದೀಗ ಕೊಳವೆ ಬಾವಿಗಳಿಂದ ನೀರನ್ನು ಭೂಮಿಯಿಂದ ತೆಗೆದು ಕುಡಿಯಲು ಬಳಸುವ ಸ್ಥಿತಿ ಎದುರಾಗಿದೆ. ಇದರಿಂದ ಫ್ಲೋರೈಡ್‌ನಂತಹ ವಿಷಕಾರಿ ವಸ್ತುಗಳು ಹೆಚ್ಚಾಗಿದ್ದು, ಶುದ್ಧ ನೀರಿಗೂ ಕುತ್ತು ಬಂದೊದಗಿದೆ. ಇದು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಇದಕ್ಕೆ ಪ್ರತಿಯೊಬ್ಬರೂ ಬೆಲೆ ತೆರಬೇಕಾಗುತ್ತದೆ ಎಂದು ಜಾಗೃತಿ ಮೂಡಿಸಿದರು.

ಬೀದಿನಾಟಕದ ಮೂಲಕ ‘ಬೇರು ಬೆವರು’ ಕಲಾತಂಡದವರು ನೀರಿನ ಸಂರಕ್ಷಣೆ ಮಾಡುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದರು.

ಕಲಾತಂಡದ ಸದಸ್ಯ ಚಂದ್ರಶೇಖರ್, ಹರೀಶ್, ಅನುಶ್ರೀ, ಸಂತೋಷ್, ಚಲಪತಿ, ನರಸಿಂಹ, ಪುರಸಭಾ ಸಿಬ್ಬಂದಿ ಮಮತಾ, ಮೂರ್ತಿ, ರಾಮಾಂಜಿ, ಪೊಲೀಸ್ ಸಿಬ್ಬಂದಿ ಕೃಷ್ಣಾನಾಯಕ್, ನಾಗೇಶ್, ವೆಂಕಟೇಶ್ (ಮೀಸೆ) ಇದ್ದರು.

ಪ್ರತಿಕ್ರಿಯಿಸಿ (+)