ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕಾರವಂತರ ಬಂಧುತ್ವ ಬೆಳೆಸಿಕೊಳ್ಳಿ

Last Updated 6 ಅಕ್ಟೋಬರ್ 2019, 14:02 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ವೈದ್ಯ ಎಂಜಿನಿಯರ್ ಅಷ್ಟೇ ವೃತ್ತಿಗಳಲ್ಲ. ವಧು-ವರರ ಅನ್ವೇಷಣೆ ಮಾಡುವಾಗ ಹಣಕ್ಕೆ ಆಸೆ ಪಡದೇ ಎಲ್ಲಾ ವೃತ್ತಿಗಳಲ್ಲಿಯೂ ಇರುವ ಸಂಸ್ಕಾರವಂತರ ಬಂಧುತ್ವ ಬೆಳೆಸಿಕೊಳ್ಳುವುದು ಪ್ರಥಮ ಆದ್ಯತೆಯಾಗಬೇಕು’ ಎಂದು ಎಲೆರಾಂಪುರದ ನರಸಿಂಹಗಿರಿ ಸುಕ್ಷೇತ್ರ ಮಹಾಸಂಸ್ಥಾನದ ಪೀಠಾಧಿಪತಿ ಹನುಮಂತನಾಥಸ್ವಾಮೀಜಿ ಹೇಳಿದರು.

ತಾಲ್ಲೂಕು ಕುಂಚಿಟಿಗರ ಸಂಘ ಹಾಗೂ ಕರ್ನಾಟಕ ರಾಜ್ಯ ಕುಂಚಿಟಿಗರ ಸಂಘದ ಮಹಿಳಾ ಘಟಕದ ವತಿಯಿಂದ ನಗರದ ಜೆ.ಪಿ.ಪಾರ್ಟಿ ಹಾಲ್‍ನಲ್ಲಿ ಭಾನುವಾರ ನಡೆದ ವಧು-ವರರ ಅನ್ವೇಷಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘ಯಾವುದೇ ಜನಾಂಗ ಅಭಿವೃದ್ದಿಯಾಗಬೇಕಾದರೆ ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಸದೃಢವಾಗಬೇಕಿದೆ. ರಾಜಕೀಯದಲ್ಲಿ ಪ್ರತಿನಿಧಿಯನ್ನು ಆಯ್ಕೆ ಮಾಡುವ ಸಂದರ್ಭ ಬಂದಾಗ ಹಣಕ್ಕಾಗಿ ಆತ್ಮವಂಚನೆ ಮಾಡಿಕೊಳ್ಳದೇ ಯೋಗ್ಯರನ್ನು ಆರಿಸಬೇಕು. ಜಾತಿವಾದ ಎನ್ನುವುದು ಸಮಾಜದಲ್ಲಿ ಚರ್ಚಿತ ವಿಷಯಾಗಿದ್ದರೂ ಜಾತೀಯತೆಯಂತೆ ಹೊರಬರಲು ಅಸಾಧ್ಯ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಜವಾನನಿಂದ ಹಿಡಿದು ದಿವಾನರವರೆಗೆ ಜಾತಿಯನ್ನು ಗುರುತಿಸಿ, ಆದ್ಯತೆ ನೀಡುವುದು ಇಂದು ಸಾಮಾನ್ಯವಾಗಿದೆ’ ಎಂದರು.

ಕುಂಚಿಟಿಗ ಎನ್ನಲು ಮುಜುಗರ ಬೇಡ: ಜನಗಣತಿಯಲ್ಲಿ ಯಾರನ್ನೋ ಓಲೈಸಲು ಒಕ್ಕಲಿಗ ಎಂದು ನಮೂದಿಸುವುದು ಸರಿಯಲ್ಲ. ನಾವು ಕುಂಚಿಟಿಗ ಎಂದು ಕರೆಸಿಕೊಳ್ಳಲು ಯಾವುದೇ ಮುಜುಗರ ಬೇಡ. ಜನಾಂಗದವರು ಸಂಕುಚಿತ ಮನೋಭಾವ ಬಿಡಬೇಕು. ವರದಕ್ಷಿಣೆಗೆ ಆಸೆ ಬೀಳದೆ ಗ್ರಾಮೀಣ ಪ್ರದೇಶದಲ್ಲಿರುವವರನ್ನು ಪರಿಗಣಿಸಿ, ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಹೋಬಳಿ ಮತ್ತು ತಾಲ್ಲೂಕುಮಟ್ಟದಲ್ಲಿಯೂ ವಧು-ವರರ ಅನ್ವೇಷಣೆ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ. ಕುಂಚಟಿಗರ ಸಮುದಾಯ ಸಹಕಾರ ಸಂಘಗಳನ್ನು ಆರಂಭಿಸಿ ಆರ್ಥಿಕ ಸ್ವಾವಲಂಬಿಗಳಾಗಬೇಕಿದೆ’ ಎಂದರು.

ಕಾರ್ಯಕ್ರಮದ ಉದ್ಘಾಟಿಸಿದ ಮಧುಗಿರಿ ಶಾಸಕ ವೀರಭದ್ರಯ್ಯ, ‘ಕುಂಚಿಟಿಗರ ಸಮುದಾಯ ಸಂಘಟಿತರಾಗಿ ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಿದೆ. ಸಮುದಾಯವನ್ನು ಹಿಂದುಳಿದ ವರ್ಗಗಳ ಗುಂಪಿಗೆ ಸೇರಿಸಬೇಕೆಂಬ ಒತ್ತಾಯಕ್ಕೆ ಪುಷ್ಟಿ ನೀಡಬೇಕಿದೆ. ರಾಜಕೀಯ ಅಸ್ತಿತ್ವ ಪಡೆಯಲು ಮುಂದಿನ ಚುನಾವಣೆಗಳಲ್ಲಿ ಕನಿಷ್ಟ 10 ಮಂದಿ ಶಾಸಕರು ಆಯ್ಕೆಯಾಗಬೇಕಿದೆ’ ಎಂದರು.

ಇತ್ತೀಚೆಗೆ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ ಪಡೆದ ಕ್ರೀಡಾಪಟು ಪ್ರಣತಿ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಕುಂಚಿಟಿಗರ ಸಂಘದ ರಾಜ್ಯ ಕಾರ್ಯದರ್ಶಿ ಪುಟ್ಟವೀರಪ್ಪ, ತುಮಕೂರು ಘಟಕದ ಅಧ್ಯಕ್ಷ ರಾಮರಾಜು, ಮಹಿಳಾ ಘಟಕದ ಅಧ್ಯಕ್ಷೆ ಲಲಿತಮ್ಮ,ತಾಲ್ಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಸಿ.ವಿ.ಲಕ್ಷ್ಮೀಪತಯ್ಯ, ಗೌರವ ಅಧ್ಯಕ್ಷ ವಿ.ಆಂಜನಪ್ಪ,ಕಾರ್ಯಾಧ್ಯಕ್ಷ ಆರ್.ಕೆಂಪರಾಜ್, ಉಪಾಧ್ಯಕ್ಷ ಕೆ.ಆರ್.ಮುತ್ತರಾಯಪ್ಪ, ಚಿಕ್ಕತಿಮ್ಮಣ್ಣ, ಕಾರ್ಯದರ್ಶಿ ಹನುಮಂತರಾಯಪ್ಪ, ಸಂಘಟನಾ ಕಾರ್ಯದರ್ಶಿ ಸಿದ್ದಗಂಗಯ್ಯ, ಹಿರಿಯ ಪದಾಧಿಕಾರಿಗಳಾದ ಆರ್‌.ಮುನಿರಾಜು, ಭೀಮರಾಜ್, ಶಿವಕುಮಾರ್, ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT