‘ಜಾತ್ಯತೀತ ಭಾವನೆ ಬೆಳೆಸಿಕೊಳ್ಳಿ’

7

‘ಜಾತ್ಯತೀತ ಭಾವನೆ ಬೆಳೆಸಿಕೊಳ್ಳಿ’

Published:
Updated:
Prajavani

ವಿಜಯಪುರ: ‘ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಉಪನ್ಯಾಸಕರ ಮೇಲಿದೆ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ‘ಶಾರದಾ ಪೂಜಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಪನ್ಯಾಸಕರು ವಿದ್ಯಾರ್ಥಿಗಳ ಮನಸ್ಸನ್ನು ಅರಿತು ಅವರಿಗೆ ಬೇಸರವಾಗದಂತೆ ಸಲಹೆ ಸೂಚನೆಗಳನ್ನು ನೀಡಿ ಉತ್ತಮ ಅಧ್ಯಯನಕ್ಕೆ ಹೆಚ್ಚು ಗಮನ ನೀಡುವಂತೆ ಪ್ರೇರೇಪಿಸಬೇಕು. ಉತ್ತಮ ಚಿಂತನೆಗಳನ್ನು ಅಳವಡಿಸಿಕೊಂಡು ಪ್ರಜ್ಞಾವಂತರಾಗಬೇಕು ಎಂದು ಹೇಳಿದರು.

ಪುರಸಭಾ ಸದಸ್ಯ ಎಸ್.ಭಾಸ್ಕರ್ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಬೇಕು. ಸಮಾಜದಲ್ಲಿ ಶಾಂತಿ ಕದಡಲು, ಅಪರಾಧ ಹೆಚ್ಚಲು ಯುವ ಸಮೂಹ ಕಾರಣವಾಗುತ್ತಿದೆ. ಯುವಶಕ್ತಿಯ ಶ್ರಮ ಮತ್ತು ಜ್ಞಾನದಿಂದ ದೇಶಕ್ಕಾಗಿ ದುಡಿಯಬೇಕು. ಯುವಜನ ಸರಿತಪ್ಪುಗಳನ್ನು ನಿರ್ಧರಿಸುವ ಜಾಣ್ಮೆ ಬೆಳೆಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ಮಾರ್ಟಿನ್ ಮಾತನಾಡಿ, ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ. ವಿದ್ಯಾರ್ಥಿಗಳು ಪ್ರಜ್ಞಾವಂತರಾಗಬೇಕು. ಜಾತಿ, ಧರ್ಮದ ಹೆಸರಿನಲ್ಲಿ ವಿದ್ಯಾರ್ಥಿ ಶಕ್ತಿಯನ್ನು ವಿಭಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಜಾತ್ಯತೀತ ಮನೋಭಾವನೆ ಬೆಳೆಸಿಕೊಂಡು ಸಾಮಾಜಿಕ ಸಾಮರಸ್ಯ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಕೊಳವೆಬಾವಿ ಕೊರೆಯಿಸಿ ಕೊಡಬೇಕು ಎಂದು ಪ್ರಾಂಶುಪಾಲ ಮಾರ್ಟಿನ್ ಅವರು ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕಾಲೇಜಿನಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಉಪನ್ಯಾಸಕರಾದ ದಕ್ಷಿಣಾಮೂರ್ತಿ, ಪ್ರೇಮಕುಮಾರಿ, ರುಕ್ಮಿಣಿ, ಮಂಗಳಾ ಅವರನ್ನು ಸನ್ಮಾನಿಸಲಾಯಿತು.

ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ವೀರಪ್ಪ, ಪ್ರಧಾನ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಬಾಬು, ಹುರುಳುಗುರ್ಕಿ ಶ್ರೀನಿವಾಸ್, ಪುರಸಭಾ ಸದಸ್ಯ ವರದರಾಜು, ಎಚ್.ಎಂ.ಕೃಷ್ಣಪ್ಪ, ನಗರ ಘಟಕದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ, ಪುರ ಕೃಷ್ಣಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !