ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಗ್ಗಿನ ಮನಸ್ಸುಗಳ ಜೀಕಾಟ

Last Updated 11 ಮೇ 2018, 20:21 IST
ಅಕ್ಷರ ಗಾತ್ರ

ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ 1973ರಲ್ಲಿ ತೆರೆಕಂಡಿದ್ದ 'ಎಡಕಲ್ಲು ಗುಡ್ಡದ ಮೇಲೆ' ಸಿನಿಮಾ ಆ ಕಾಲದಲ್ಲಿ ಭಾರಿ ಜನಪ್ರಿಯತೆ ಗಳಿಸಿತ್ತು. ಅದೇ ಹೆಸರನ್ನಿಟ್ಟುಕೊಂಡು ವಿವಿನ್ ನಿರ್ದೇಶಿಸಿರುವ ಹೊಸ ಸಿನಿಮಾವು ಮುಗ್ಧ ಮನಸ್ಸುಗಳ ತಾಕಲಾಟವನ್ನು ಚಿತ್ರಿಸುವುದರ ಜೊತೆಗೆ ಮಕ್ಕಳ ಬಗ್ಗೆ ಪಾಲಕರು ನಿಷ್ಕಾಳಜಿ ತೋರಿಸಿದರೆ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬ ಸಂದೇಶವನ್ನು ಸಾರುತ್ತದೆ.

ಕಾಮ, ದಾರಿ ತಪ್ಪಿದ ಸಂಬಂಧವೇ ಹಿಂದಿನ ಸಿನಿಮಾದ ಪ್ರಧಾನ ವಸ್ತುವಾಗಿದ್ದರೆ ಇಲ್ಲಿ ದಾರಿತಪ್ಪಿದ ಮನಸ್ಸುಗಳ ತಲ್ಲಣಗಳನ್ನು ಚಿತ್ರಿಸಲಾಗಿದೆ. ಅಲ್ಲಿ ಕಾಮ, ಇಲ್ಲಿ ಕ್ರೌರ್ಯದ ರೂಪಕದಂತೆ ಎಡಕಲ್ಲು ಗುಡ್ಡ ಧುತ್ತೆಂದು ಕಣ್ಣಮುಂದೆ ಬರುತ್ತದೆ.

ಮಕ್ಕಳ ಮೊಗ್ಗಿನಂತಹ ಮನಸ್ಸಿಗೆ ಘಾಸಿಯಾದರೆ ಮುಂದೆ ಅದು ಅವರನ್ನು ಹೇಗೆ ಅಧೀರರನ್ನಾಗಿಸುತ್ತದೆ ಎಂಬುದರ ಜೊತೆಗೆ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಕಾನೂನಿನ ದೌರ್ಬಲ್ಯ ಎಲ್ಲವನ್ನೂ ಒಂದೇ ಚೌಕಟ್ಟಿನಲ್ಲಿ ತರಲು ಈ ಚಿತ್ರದಲ್ಲಿ ನಿರ್ದೇಶಕರು ಪ್ರಯತ್ನಿಸಿದ್ದಾರೆ. ಈ ಮೂಲಕ ಸಮಾಜಕ್ಕೆ ಉತ್ತಮವಾದ ಸಂದೇಶವೊಂದನ್ನು ನೀಡುವಲ್ಲಿ ಸಫಲರಾಗಿದ್ದಾರೆ. ಆದರೆ ಅಲ್ಲಲ್ಲಿ ಕಥೆಯ ಬಿಗಿ ಸಡಿಲವಾದಂತೆ ಭಾಸವಾಗುತ್ತದೆ.

ಸದಾ ತಮ್ಮದೇ ವ್ಯವಹಾರದಲ್ಲಿ ಮುಳುಗಿರುವ, ಘನತೆ, ಗೌರವ ಎಂದು ಬಾಯಿ ಬಡಕೊಳ್ಳುವ ತಂದೆ, ತಾಯಿ. ಅವರ ಪ್ರೀತಿಯಿಂದ ವಂಚಿತಳಾಗಿ ನೋವನ್ನನುಭವಿಸುವ ಬಾಲಕಿಗೆ ಗೆಳತಿಯರೇ ಸರ್ವಸ್ವ. ಆದರೆ ಶಾಲೆಯಲ್ಲಿ ನಡೆಯುವ ಅನಿರೀಕ್ಷಿತ ಘಟನೆಯೊಂದರಿಂದ ಆಕೆ ಒಬ್ಬಂಟಿಯಾಗುತ್ತಾಳೆ. ಅನಂತರದ ಆಕೆಯ ವರ್ತನೆಗೆ ಅಸಹನೆ ವ್ಯಕ್ತಪಡಿಸುವ ಪಾಲಕರು ಆಕೆಯನ್ನು ದೂರದ ಹಳ್ಳಿಯೊಂದರಲ್ಲಿರುವ ಸ್ನೇಹಿತರ ಮಗಳ ಬಳಿ ಬಿಟ್ಟು ಬರುತ್ತಾರೆ. ಮುಂದೆ ನಡೆಯುವ ಅನಿರೀಕ್ಷಿತ ಘಟನಾವಳಿಗಳಿಂದ ಅವರಿಗೆ ದಿಕ್ಕು ತೋಚದಂತಾಗುತ್ತದೆ. ಮುಂದೆ ಅವರು ತಮ್ಮ ಮಗಳಿಗಾಗಿ ಪಡಿಪಾಟಲು ಪಡುವುದೇ ಈ ಸಿನಿಮಾದ ಕಥಾಹಂದರ.

ಇದೊಂದು ನಾಯಕಿ ಪ್ರಧಾನವಾದ ಸಿನಿಮಾ. ಉತ್ತರಾರ್ಧದಲ್ಲಿ ನಾಯಕನ ಆಗಮನವಾದರೂ ನವಿರು ಪ್ರೇಮ ಸನ್ನಿವೇಶಗಳ ಮೂಲಕ ಆತ ಪ್ರೇಕ್ಷಕರ ಮನಸ್ಸಿಗೆ ಹೆಚ್ಚು ಆಪ್ತನಾಗುತ್ತಾನೆ. ನಾಯಕ ಹಾಗೂ ನಾಯಕಿ ಹೊಸ ಮುಖಗಳಾದರೂ ತಮ್ಮ ನಾಜೂಕು ನಟನೆಯ ಮೂಲಕ ಗಮನ ಸೆಳೆಯುತ್ತಾರೆ.

ದಿವಂಗತ ಎಡಕಲ್ಲು ಚಂದ್ರಶೇಖರ್ ಈ ಸಿನಿಮಾದಲ್ಲಿ ನಟಿಸಿರುವುದು ಹೆಚ್ಚು ಸೂಕ್ತ ಎನಿಸುತ್ತಿದೆ. ಹಿರಿಯ ನಟ ನಟಿಯರ ತಾರಾ ಬಳಗವು ಚಿತ್ರಕ್ಕೆ ಹೆಚ್ಚಿನ ತೂಕ ತಂದುಕೊಟ್ಟಿದೆ. ಆಶಿಕ್ ಅರುಣ್ ಸಂಗೀತ ನಿರ್ದೇಶನ
ದಲ್ಲಿ ಹಾಡುಗಳು ಸುಮಧುರವಾಗಿ ಮೂಡಿಬಂದಿವೆ. ಎಡಕಲ್ಲು ಗುಡ್ಡದ ರಮಣೀಯ ಪರಿಸರ, ಹಾಡುಗಳ ದೃಶ್ಯ ವೈಭವ ಕಣ್ತಣಿಸುತ್ತದೆ.

ಕೆಲವೆಡೆ ವರ್ಣನೆ ಅತಿಯಾದಂತೆ ಭಾಸವಾಗುತ್ತದೆ. ನಡು ನಡುವೆ ಅನಗತ್ಯವಾದ ರಂಗಗಳು ನುಸುಳಿ ಮೂಲ ಕಥೆಯನ್ನು ಜಾಳು ಜಾಳಾಗಿಸಿದ್ದರೂ ಗಂಭೀರ ಕಥಾ ನಿರೂಪಣೆಯ ಮಧ್ಯೆ ಇದು ಲೋಪದಂತೆ ಕಂಡು ಬರುವುದಿಲ್ಲ.

ಚಿತ್ರ: ಎಡಕಲ್ಲು ಗುಡ್ಡದ ಮೇಲೆ
ನಿರ್ಮಾಪಕರು: ಜಿ.ಪಿ. ಪ್ರಕಾಶ್
ನಿರ್ದೇಶನ: ವಿವಿನ್ ಸೂರ್ಯ
ತಾರಾಗಣ: ಸ್ವಾತಿ ಶರ್ಮ, ನಕುಲ್, ಭಾರತಿ ವಿಷ್ಣುವರ್ಧನ್, ಶ್ರೀನಾಥ್, ದತ್ತಣ್ಣ, ವೀಣಾ ಸುಂದರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT