‘ಬಸ್‌ ಕವಚ ನಿರ್ಮಾಣ ಘಟಕ’

ಶನಿವಾರ, ಜೂಲೈ 20, 2019
25 °C
ಹೊಸಕೋಟೆಯಲ್ಲಿ ಸಾರಿಗೆ ಸಚಿವರಿಂದ ನೂತನ ಬಸ್ಸು ನಿಲ್ದಾಣ ಉದ್ಘಾಟನೆ

‘ಬಸ್‌ ಕವಚ ನಿರ್ಮಾಣ ಘಟಕ’

Published:
Updated:
Prajavani

ಹೊಸಕೋಟೆ: ‘ಹೊಸಕೋಟೆಯಲ್ಲಿ ಸ್ಥಳಾವಕಾಶ ಲಭಿಸಿದರೆ ಬಸ್ಸಿನ ಕವಚ ನಿರ್ಮಾಣದ ಕಾರ್ಖಾನೆ ಹಾಗೂ ಡಿಪೊ ವ್ಯವಸ್ಥೆ ಮಾಡಿ ಈ ಭಾಗದ ಜನರಿಗೆ ಉದ್ಯೋಗ ನೀಡಬಹುದು’ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅಭಿಪ್ರಾಯಪಟ್ಟರು.

ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸುಮಾರು ₹ 21 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣವನ್ನು ಅವರು ಶನಿವಾರ ಉದ್ಘಾಟಿಸಿ ಮಾಡಿದರು.

‘ನಿತ್ಯವೂ 6,800 ಬಿಎಂಟಿಸಿ ಬಸ್ಸುಗಳು ಕಾರ್ಯನಿರ್ವಹಿಸುತ್ತಿದ್ದು ಹೆಚ್ಚಿನ ಬೇಡಿಕೆ ಇರುವುದರಿಂದ ಮತ್ತಷ್ಟು ಹೊಸ ಬಸ್ಸುಗಳನ್ನು ಖರೀದಿಸಲಾಗುವುದು’ ಎಂದು ತಿಳಿಸಿದರು.

‘ಸಾರಿಗೆ ಇಲಾಖೆಯು ವಾರ್ಷಿಕ ಸುಮಾರು ₹ 600 ಕೋಟಿ ನಷ್ಟ ಅನುಭವಿಸುತ್ತಿದ್ದರೂ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ನಮ್ಮ ಸರ್ಕಾರ ಎಲ್ಲ ಕಡೆಗಳಲ್ಲಿ ಸುಸುಜ್ಜಿತವಾದ ಬಸ್ ನಿಲ್ದಾಣಗಳನ್ನು ನಿರ್ಮಿಸುತ್ತಿದೆ. ಇದರಿಂದ ನಿತ್ಯ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುವ ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತದೆ’ ಎಂದರು. ಈಗಿನ ಬಸ್ ನಿಲ್ದಾಣಗಳಲ್ಲಿ ವಾಹನ ನಿಲುಗಡೆಯ ಜೊತೆಗೆ ವ್ಯವಸ್ಥಿತ ಶೌಚಾಲಯ, ಉಪಹಾರ ಗೃಹ, ವಿಶ್ರಾಂತಿ ಗೃಹ ನಿರ್ಮಿಸಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಸತಿ ಸಚಿವ ಎಂ.ಟಿ.ಬಿ ನಾಗರಾಜ್‌ ಮಾತನಾಡಿ, ಹೊಸಕೋಟೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ನಾಲ್ಕು ರಾಜ್ಯ ಹೆದ್ದಾರಿಗಳು ಹಾದು ಹೋಗುತ್ತವೆ. ಆದರೂ ಒಂದು ಸುಸಜ್ಜಿತವಾದ ಬಸ್ ನಿಲ್ದಾಣ ಇಲ್ಲದಿರುವುದರಿಂದ ನಾಗರಿಕರಿಗೆ ತೊಂದರೆಯಾಗುತ್ತಿತ್ತು. ಈ ನಿಟ್ಟಿನಲ್ಲಿ ಸುಮಾರು ₹ 21 ಲಕ್ಷ ವೆಚ್ಚದಲ್ಲಿ ಒಂದು ಎಕರೆ ಜಾಗದಲ್ಲಿ ಈ ನಿಲ್ದಾಣ ನಿರ್ಮಿಸಲಾಗಿದೆ ಎಂದರು.

ಈಗಿನ ಲೋಕಸಭಾ ಸದಸ್ಯರು ಈ ಮುಂಚೆ ರಾಜ್ಯದಲ್ಲಿ ವಿವಿಧ ಸಚಿವರಾಗಿದ್ದರೂ ಅವರು ಹೊಸಕೋಟೆಗೆ ಯಾವುದೇ ಉತ್ತಮ  ಕೆಲಸವನ್ನು ಮಾಡಲಿಲ್ಲ. ಆದರೆ ಈಗ ಆಗುತ್ತಿರುವ ಒಳ್ಳೆಯ ಕೆಲಸಗಳಿಗೆ ತಮ್ಮ ಪಕ್ಷದ ಕಾರ್ಯಕರ್ತರು ತೊಂದರೆ ಕೊಡುತ್ತಿದ್ದು ಅವರಿಗೆ ಬುದ್ಧಿ ಹೇಳುವಂತೆ ಸಚಿವರು ಸಂಸದರಿಗೆ ಮನವಿ ಮಾಡಿದರು.

ಎರಡು ನೂತನ ಮಾರ್ಗಗಳಲ್ಲಿ ಬಸ್ಸು ಸಂಚಾರ ಆರಂಭಿಸಲಾಯಿತು. ಮುಖಂಡ ಹೇಮಂತ ಕುಮಾರ್, ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆ ಜಯಮ್ಮ ಲಕ್ಷ್ಮೀ ನಾರಾಯಣ್, ಹೊಸಕೋಟೆ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಜಯದೇವಯ್ಯ ಭಾಗವಹಿಸಿದ್ದರು. ಸಂಸದ ಬಿ.ಎನ್. ಬಚ್ಚೇಗೌಡರು ಭಾಗವಹಿಸಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !