ವೈಜ್ಞಾನಿಕ ಪದ್ಧತಿ ಹೈನುಗಾರಿಕೆಗೆ ಸಲಹೆ

7
ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬರಡು ರಾಸು ತಪಾಸಣೆ

ವೈಜ್ಞಾನಿಕ ಪದ್ಧತಿ ಹೈನುಗಾರಿಕೆಗೆ ಸಲಹೆ

Published:
Updated:
Deccan Herald

ವಿಜಯಪುರ: ಪಶು ಪೋಷಣೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಪಶು ವೈದ್ಯಾಧಿಕಾರಿ ಡಾ. ವೆಂಕಟ್ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ‘ದೇವನಾಯಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ’ದಲ್ಲಿ ‘ಬಮೂಲ್’ ವತಿಯಿಂದ ಆಯೋಜಿಸಿದ್ದ ಬರಡು ರಾಸುಗಳ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಕೃಷಿಯೊಂದಿಗೆ ಹೈನುಗಾರಿಕೆಯನ್ನು ರೈತರು ಉಪ ಕಸುಬಾಗಿ ಮಾಡಿಕೊಂಡಿದ್ದಾರೆ. ರಾಸುಗಳ ಆರೋಗ್ಯ ಕಾಪಾಡಬೇಕಾದ್ದು ಅತ್ಯವಶ್ಯವಾಗಿದೆ. ಸುಧಾರಿತತಳಿಗಳಿಂದ ಹೆಚ್ಚಿನ ಆದಾಯ ಗಳಿಸಬಹುದಾದರೂ ರೋಗ ಪ್ರತಿರೋಧಕ ಶಕ್ತಿ ವೃದ್ಧಿಗೆ ಅಗತ್ಯ ಪೋಷಕಾಂಶಗಳುಳ್ಳ ಆಹಾರ ನೀಡಬೇಕು ಎಂದರು.

ರೈತರು ರಾಸುಗಳ ಪೋಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇಲಾಖೆ ವತಿಯಿಂದ ವರ್ಷದಲ್ಲಿ ಎರಡು ಬಾರಿ ಕಾಲುಬಾಯಿ ಜ್ವರದ ಲಸಿಕೆಗಳನ್ನು ಹಾಕಲಾಗುತ್ತಿದ್ದು, ರೋಗ ನಿಯಂತ್ರಿಸಲು ಸಾಧ್ಯವಾಗಿದೆ. ಇದರಿಂದ ರೈತರಿಗೆ ಉಂಟಾಗಬಹುದಾದ ನಷ್ಟವನ್ನು ತಪ್ಪಿಸಬಹುದು ಎಂದರು.

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಕ್ಕಲಪ್ಪ ಮಾತನಾಡಿ, ರಾಸುಗಳಲ್ಲಿ ಯಾವುದೇ ಆರೋಗ್ಯದ ಸಮಸ್ಯೆಗಳು ಕಂಡುಬಂದಲ್ಲಿ ಮನೆ ಮದ್ದು ಮಾಡದೆ, ಕೂಡಲೇ ಸಮೀಪದ ಪಶು ವೈದ್ಯರ ಬಳಿ ತಪಾಸಣೆ ಮಾಡಿಸಿ
ಸೂಕ್ತ ಔಷಧ ನೀಡಬೇಕು. ರೈತರಿಗೆ ಇಲಾಖೆಗಳಿಂದ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಹಳ್ಳಿಗಳಲ್ಲಿ ಇಂತಹ ಶಿಬಿರಗಳನ್ನು ಏರ್ಪಡಿಸುವುದರಿಂದ ರಾಸುಗಳಲ್ಲಿ ಕಾಣಿಸಿಕೊಳ್ಳುವಂತಹ ರೋಗಗಳನ್ನು ನಿವಾರಣೆ ಮಾಡಲು ಅನುಕೂಲವಾಗಲಿದೆ ಎಂದರು.

ಸಂಘದ ಕಾರ್ಯ ನಿರ್ವಹಣಾಧಿಕಾರಿ ಮುನಿನಾರಾಯಣಪ್ಪ ಮಾತನಾಡಿ, ರಾಸುಗಳು ಕರು ಹಾಕಿದ ಮೇಲೆ ಅದಕ್ಕೆ ಕನಿಷ್ಠ ಎರಡು ತಿಂಗಳು ಹಾಲು ಕುಡಿಸಬೇಕು. ಪುನಃ ಹಸು ಗರ್ಭ ಧರಿಸಿದ 6 ತಿಂಗಳು ಮಾತ್ರ ಹಾಲು ಕರೆಯಬೇಕು. ಅದು ಕರು ಹಾಕುವ ತನಕ ಹಾಲನ್ನು ಕರೆದುಕೊಂಡರೆ ರಾಸುವಿಗೆ ಪೌಷ್ಟಿಕಾಂಶ ಇರುವ ಆಹಾರ ಸಿಗುವುದಿಲ್ಲ. ಮೆದೆಗೆ ಬರುವುದಿಲ್ಲ. ರಾಸುಗಳಿಗೆ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಬೇರೆ ಬೇರೆ ರೀತಿಯ ಹುಲ್ಲನ್ನು ಹಾಕಿದರೆ ರಾಸುಗಳಲ್ಲಿ ರೋಗ
ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರು.

ಹಾಲು ಪರೀಕ್ಷಕ ಮುನಿರಾಜು, ಸಹಾಯಕ ಕೃಷ್ಣಪ್ಪ ಹಾಗೂ ವೈದ್ಯರ ತಂಡ ಭಾಗವಹಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !