ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್| ಕಾವೇರಿ ಕುಡಿಯುವ ನೀರು ಪೂರೈಕೆ: ಬಿಎಸ್‌ಪಿ ಪಾದಯಾತ್ರೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಒತ್ತಾಯ
Last Updated 25 ಫೆಬ್ರುವರಿ 2023, 4:40 IST
ಅಕ್ಷರ ಗಾತ್ರ

ಆನೇಕಲ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಎಸ್‌ಪಿ ಆನೇಕಲ್‌ ತಾಲ್ಲೂಕು ಘಟಕದ ಕಾರ್ಯಕರ್ತರು ತಾಲ್ಲೂಕಿನ ಚಂದಾಪುರದಿಂದ ಬೆಂಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನೂರಾರು ಕಾರ್ಯಕರ್ತರು ಘೋಷಣಾ ಫಲಕ ಹಿಡಿದು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿಗೆ ಯಾವುದೇ ನದಿ ಮೂಲಗಳಿಲ್ಲ. ಒಂದು ನಗರಸಭೆ, ಐದು ಪುರಸಭೆಗಳಿವೆ. ಆದರೆ , ಮೂಲಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ತಾಲ್ಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆಯಿದೆ. ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಕಾವೇರಿ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಡಾ.ಚಿನ್ನಪ್ಪ ವೈ. ಚಿಕ್ಕಹಾಗಡೆ ಆಗ್ರಹಿಸಿದರು.

ತಾಲ್ಲೂಕಿನಲ್ಲಿ ಹಲವಾರು ಕುಟುಂಬಗಳು 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿವೆ. ಆದರೆ, ಈ ಕುಟುಂಬಗಳಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ. ಕೂಡಲೇ ಹಕ್ಕುಪತ್ರ ನೀಡಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಗಳಲ್ಲಿ ಮನೆ ಕಟ್ಟಿಕೊಂಡು ದಶಕಗಳಿಂದಲೂ ಜೀವನ ನಡೆಸುತ್ತಿದ್ದಾರೆ. ಆದರೆ, ಮನೆಗೆ ಯಾವುದೇ ದಾಖಲೆಗಳಿಲ್ಲ. 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ 24ಗಂಟೆ ಕಾಲ ವೈದ್ಯಾಧಿಕಾರಿಗಳು ಕಾರ್ಯ ನಿರ್ವಹಿಸು ವಂತೆ ಮಾಡಬೇಕು. ತಾಲ್ಲೂಕಿಗೆ ಕಾನೂನು ಕಾಲೇಜು ಮತ್ತು ನರ್ಸಿಂಗ್‌ ಕಾಲೇಜು ಮಂಜೂರು ಮಾಡಬೇಕು. ತಾಲ್ಲೂಕಿನಲ್ಲಿ ಎರಡು ಸರ್ಕಾರಿ ಪದವಿಪೂರ್ವ ಕಾಲೇಜುಗಳಿವೆ. ಹೋಬಳಿಗೊಂದು ಪದವಿಪೂರ್ವ ಕಾಲೇಜು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷ ಗೌರಿಶಂಕರ್‌, ಮುಖಂಡರಾದ ಯಲ್ಲಾರೆಡ್ಡಿ, ಶಂಭಪ್ಪ, ಮಾಯಸಂದ್ರ ಸಂಪಂಗಿ, ಮಿಥುನ್‌ ರೆಡ್ಡಿ, ಕುಮಾರಾಚಾರಿ, ಶಂಭಪ್ಪ, ಲೋಕೇಶ್, ವರಲಕ್ಷ್ಮೀರೆಡ್ಡಿ, ಷಣ್ಮುಖ, ಗಾಯತ್ರಿ, ಪುಷ್ಪ, ಗೀತಾ, ಲಕ್ಷ್ಮೀ, ಕೃಷ್ಣಮೂರ್ತಿ, ಸೋಮಶೇಖರ್‌, ಮುನಿಯಲ್ಲಪ್ಪ, ಚಿಕ್ಕಹಾಗಡೆ ಪ್ರವೀಣ್‌, ದಿಲೀಪ್‌ ಇದ್ದರು.

ಉದ್ಯೋಗ ಮೀಸಲು ನೀಡಿ: ತಾಲ್ಲೂಕಿನಲ್ಲಿ ಐದು ಕೈಗಾರಿಕಾ ಪ್ರದೇಶಗಳಿವೆ. ಆದರೆ, ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಎಲ್ಲಾ ಕಾರ್ಖಾನೆಗಳಲ್ಲಿಯೂ ಸ್ಥಳೀಯರಿಗೆ ಶೇ 50ರಷ್ಟು ಉದ್ಯೋಗಗಳನ್ನು ಮೀಸಲಿಡಬೇಕು. ಬಿಎಸ್‌ಪಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಗ್ರಾಮದ ಸಮಸ್ಯೆಗಳನ್ನು ಸಂಬಂಧಿಸಿದವರ ಗಮನಕ್ಕೆ ತರಲು ಹೋರಾಟವನ್ನು ನಿರಂತರವಾಗಿ ನಡೆಸಲಿದೆ ಎಂದು ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಲ್‌.ಮುನಿಯಲ್ಲಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT