ಮಂಗಳವಾರ, ಸೆಪ್ಟೆಂಬರ್ 17, 2019
24 °C

ಚನ್ನಪಟ್ಟಣ ಸಂಪೂರ್ಣ ಬಂದ್

Published:
Updated:
Prajavani

ಚನ್ನಪಟ್ಟಣ: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ತಾಲ್ಲೂಕು ಕಾಂಗ್ರೆಸ್ ಹಾಗೂ ತಾಲ್ಲೂಕು ಜೆಡಿಎಸ್ ಘಟಕಗಳು ಬುಧವಾರ ಕರೆ ನೀಡಿದ್ದ ಚನ್ನಪಟ್ಟಣ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಬೆಳಿಗ್ಗೆಯಿಂದಲೇ ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಅಂಗಡಿ ಮುಂಗಟ್ಟುಗಳು, ಪೆಟ್ರೋಲ್ ಬಂಕ್ ಗಳು, ಚಿತ್ರಮಂದಿರಗಳು, ಬ್ಯಾಂಕ್‌ಗಳು, ಅಂಚೆ ಕಚೇರಿ, ಕಾರ್ಖಾನೆಗಳು, ಹೋಟೆಲ್ ಗಳು ಶಾಲಾ ಕಾಲೇಜುಗಳು ಮುಚ್ಚಲಾಗಿತ್ತು.

ಪಟ್ಟಣದ ಅಂಗಡಿ ಮುಂಗಟ್ಟುಗಳಲ್ಲಿ ಕೆಲವು ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚಿದ್ದವು. ಬೆಳಿಗ್ಗೆ ತೆರೆದಿದ್ದ ಕೆಲವು ಅಂಗಡಿಗಳನ್ನು ಪಕ್ಷದ ಮುಖಂಡರುಗಳು ಮುಚ್ಚಿಸಿದರು. ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಜಿಲ್ಲಾಧಿಕಾರಿ ಅರ್ಚನಾ ಅವರು ಬೆಳಿಗ್ಗೆ 8 ಗಂಟೆಯ ನಂತರ ರಜೆ ಘೋಷಿಸಿದ ಕಾರಣ ಶಾಲೆಗೆಂದು ಬೆಳಿಗ್ಗೆಯೇ ಬಂದಿದ್ದ ಕೆಲವು ವಿದ್ಯಾರ್ಥಿಗಳು ವಾಪಸ್ ಹೋಗಲು ಬಸ್ ಇಲ್ಲದೆ ಪರದಾಡಬೇಕಾಯಿತು. ಬೆಂಗಳೂರು, ಮಂಡ್ಯ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸಹ ಬಸ್ ಇಲ್ಲದೆ ವಾಪಸ್ ಮನೆಗೆ ತೆರಳಲು ತೊಂದರೆ ಅನುಭವಿಸಿದರು.

ಕೆಲವು ಖಾಸಗಿ ಬಸ್ ಗಳು, ಕೆಲವು ಆಟೊಗಳು, ಆಪೆ ಆಟೊಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೆ, ಸರ್ಕಾರಿ ಬಸ್‌ಗಳು, ಖಾಸಗಿ ವಾಹನಗಳು ಇಲ್ಲದ್ದರಿಂದ ಬೆಂಗಳೂರು ಮೈಸೂರು ರಸ್ತೆಯಲ್ಲಿ ಬೆಳಿಗ್ಗೆಯಿಂದ ರಸ್ತೆ ಬಿಕೊ ಎನ್ನುತ್ತಿತ್ತು. ಸಂಜೆಯ ನಂತರ ವಾಹನಗಳ ಸಂಚಾರ ಆರಂಭವಾಯಿತು.

ಸರ್ಕಾರಿ ಬಸ್ ಇಲ್ಲದ ಕಾರಣ ಪಟ್ಟಣದ ಬಸ್ ನಿಲ್ದಾಣದಲ್ಲಿ ಜನರಿಲ್ಲದೆ ಸಂಪೂರ್ಣ ಬಿಕೊ ಎನ್ನುತ್ತಿತ್ತು. ಪಟ್ಟಣದ ಎಂ.ಜಿ.ರಸ್ತೆ, ಜೆ.ಸಿ.ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಪೇಟೆ ಬೀದಿ, ಅಂಚೆಕಚೇರಿ ರಸ್ತೆಯಲ್ಲಿ ಜನಸಂಚಾರ ವಿರಳವಾಗಿತ್ತು. ರೇಷ್ಮೆ ಮಾರುಕಟ್ಟೆ, ಕೆಲವು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು. ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳು, ಔಷಧಿ ಅಂಗಡಿಗಳು ಎಂದಿನಂತೆ ತೆರೆದಿದ್ದವು.

ಎರಡೂ ಪಕ್ಷಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಮೆರವಣಿಗೆ, ಧರಣಿ ನಡೆಸಿ, ಟೈರ್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಡಿ.ಕೆ.ಶಿವಕುಮಾರ್ ಅವರನ್ನು ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Post Comments (+)