ಸೋಮವಾರ, ಏಪ್ರಿಲ್ 12, 2021
30 °C
ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

ತ್ಯಾಜ್ಯ ಸಂಗ್ರಹಕ್ಕೆ ಶುಲ್ಕ ವಿಧಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಜಿಲ್ಲೆಯಲ್ಲಿರುವ ಎಲ್ಲ ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಮನೆ-ಮನೆಗೆ ತೆರಳಿ ಕಸ ಸಂಗ್ರಹ ಮಾಡಬೇಕು ಹಾಗೂ ತ್ಯಾಜ್ಯ ಸಂಗ್ರಹಕ್ಕೆ ನಿರ್ದಿಷ್ಟ ಶುಲ್ಕ ವಿಧಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಘನತ್ಯಾಜ್ಯ ವಸ್ತುಗಳಿಂದ ತಯಾರಿಸಿದ ಗೊಬ್ಬರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಸ್ಥಳೀಯ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತ
ನಾಡಿದರು.

ನಗರಸಭೆ ಹಾಗೂ ಪುರಸಭೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠ ನೀಡಿರುವ ಎಲ್ಲ ಆದೇಶ ತಪ್ಪದೆ ಪಾಲಿಸುವ ಕುರಿತು ಮಾಧ್ಯಮಗಳ ಮೂಲಕ ಜಾಹೀರಾತು ನೀಡುವುದು ಸೇರಿದಂತೆ ಕರಪತ್ರ ಹಂಚುವ ಮೂಲಕ ಕಸವಿಂಗಡಣೆ ಹಾಗೂ ಶುಲ್ಕ ವಿಧಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಈಗಾಗಲೇ ಜಮೀನು ಮಂಜೂರು ಮಾಡಲಾಗಿದೆ. ಸರ್ವೇ ಮಾಡಿಸಿ ವಶಕ್ಕೆ ಪಡೆದುಕೊಳ್ಳಬೇಕು ಎಂದರು.

ಕಸ ಸಂಗ್ರಹಣೆ ಮಾಡುವ ಎಲ್ಲ ವಾಹನಗಳಿಗೆ ಜಿ.ಪಿ.ಎಸ್. ತಂತ್ರಜ್ಞಾನ ಅಳವಡಿಸಬೇಕು ಹಾಗೂ ವಿಲೇವಾರಿ ಸಂದರ್ಭದಲ್ಲಿ ಪ್ಲಾಸ್ಟಿಕ್ ನಂತಹ ವಸ್ತುಗಳನ್ನು ಹರಾಜು ಪ್ರಕ್ರಿಯೆ ನಡೆಸಿ ವಿಲೇವಾರಿ ಮಾಡಬೇಕು ಎಂದರು. 

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸುಮಾ ಮಾತನಾಡಿ, ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಪ್ರತಿದಿನ 8 ಟನ್ ಹಸಿಕಸ ಸಂಗ್ರಹಣೆಯಾಗುತ್ತಿದೆ. ಪ್ರತಿದಿನ 4ಟನ್ ಗೊಬ್ಬರ ತಯಾರಾಗುತ್ತಿದೆ. ಪ್ರತಿ ಟನ್‌ಗೆ ₹1 ಸಾವಿರ ರೂಪಾಯಿ ನಿಗದಿ ಪಡಿಸಲಾದೆ. ಪ್ರತಿ ತಿಂಗಳು 15 ಟನ್ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಹೊಸಕೋಟೆ ನಗರಸಭಾ ವ್ಯಾಪ್ತಿಯಲ್ಲಿ ಪ್ರತಿದಿನ 7ಟನ್ ಹಸಿ ಕಸ ಸಂಗ್ರಹವಾಗುತ್ತಿದೆ. ಗೊಬ್ಬರವನ್ನು ನೇರವಾಗಿ ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ. ನೆಲಮಂಗಲ ನಗರಸಭೆಯಲ್ಲಿ ಪ್ರತಿದಿನ 3 ಟನ್ ಹಸಿಕಸ ಸಂಗ್ರಹವಾಗುತ್ತಿದ್ದು, ಪ್ರತಿದಿನ ಒಂದು ಟನ್ ಗೊಬ್ಬರ ತಯಾರಾಗುತ್ತಿದೆ ಹಾಗೂ ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ದೇವನಹಳ್ಳಿ ಪುರಸಭೆಯಲ್ಲಿ ಪ್ರತಿದಿನ 2 ಟನ್ ಹಸಿಕಸ ಸಂಗ್ರಹವಾಗುತ್ತಿದೆ. ದಿನವೊಂದಕ್ಕೆ 0.5 ಟನ್ ಗೊಬ್ಬರ ತಯಾರಾಗುತ್ತಿದೆ. ಪ್ರತಿ ಟನ್‌ಗೆ ₹5 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಜಿ.ಎಸ್.ಜಯಸ್ವಾಮಿ, ನಗರಸಭೆ ಆಯುಕ್ತರು, ಪುರಸಭೆ ಮುಖ್ಯಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು