ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಗ್ರಾಮ ಸಭೆ ಹಕ್ಕೊತ್ತಾಯದ ಸಾಧನ

ವಿಶ್ವನಾಥಪುರ ಕೆಪಿಎಸ್‌ ಶಾಲೆ: ಕನ್ನಡಾಭಿಮಾನ ಮೆರೆದ ವಿದ್ಯಾರ್ಥಿಗಳು
Last Updated 24 ನವೆಂಬರ್ 2022, 4:42 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಹೋಬಳಿಯ ವಿಶ್ವನಾಥಪುರದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ವಿಶ್ವನಾಥಪುರ ಗ್ರಾ.ಪಂ.ನಿಂದ ಬುಧವಾರ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾ.ಪಂ. ಉಪಾಧ್ಯಕ್ಷ ವಿನಯ್‌ ಕುಮಾರ್, ‘ಪಂಚಾಯಿತಿಯೇ ಮಕ್ಕಳ ಬಳಿ ಹೋಗಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಶಾಲೆಯ ಆವರಣದಲ್ಲಿ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಮುಕ್ತವಾಗಿ ಭಾಗಿಯಾಗಬೇಕು. ಪ್ರಜಾಸತ್ತಾತ್ಮಕ ಮೌಲ್ಯಗಳ ಬೆಳವಣಿಗೆಗೆ ಈ ಸಭೆಯು ಪೂರಕವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಯುವಕರಿಂದ ದೇಶ ಕಟ್ಟುವ ಕೆಲಸವಾಗಬೇಕಿದೆ. ಚಿಣ್ಣರಿಗೆ ಪ್ರಾರಂಭಿಕ ಹಂತದಲ್ಲಿ ಅಕ್ಷರಾಭ್ಯಾಸ ಮಾಡಿಸುವ ಜವಾಬ್ದಾರಿಯು ತಾಯಿ ಹಾಗೂ ಅಂಗನವಾಡಿ ಶಿಕ್ಷಕರದ್ದು. ನೀವು ಹಾಕುವ ಭದ್ರ ಬುನಾದಿ ಮುಂದೊಂದು ದಿನ ವಿಶ್ವ ನಾಯಕರ ಹುಟ್ಟಿಗೆ ಕಾರಣವಾಗುತ್ತದೆ ಎಂದರು.

ಶಿಕ್ಷಣ ಪದ್ಧತಿಯಲ್ಲಿ ಶಿಕ್ಷೆ ಪ್ರಮಾಣ ಕಡಿಮೆಯಾಗಿದ್ದು, ಪೆಟ್ಟು ಬೀಳದ ಕಲ್ಲು ಶಿಲೆಯಾಗುವುದಿಲ್ಲ. ಪೋಷಕರು ಮಕ್ಕಳ ಬೆಳವಣಿಗೆಗೆ ಸಹಕರಿಸಬೇಕೆ ಹೊರತು ಶಾಲಾ ಸಿಬ್ಬಂದಿಯನ್ನು ದೂಷಣೆ ಮಾಡುವ ಪ್ರವೃತ್ತಿ ನಿಲ್ಲಿಸಬೇಕು ಎಂದು ಸಲಹೆ ನೀಡಿದರು.

ಪಠ್ಯದೊಂದಿಗೆ ದೈಹಿಕ ಚಟುವಟಿಕೆಯಲ್ಲಿ ಮಕ್ಕಳು ಸಕ್ರಿಯವಾದರಷ್ಟೇ ಒಲಿಂಪಿಕ್ಸ್‌ ಕ್ರೀಡೆಯಲ್ಲಿ ದೇಶ ಪ್ರತಿನಿಧಿಸುವ ಕ್ರೀಡಾಪಟುಗಳು ಲಭ್ಯರಾಗುತ್ತಾರೆ. ಅತಿಯಾದ ಮೊಬೈಲ್‌ ಬಳಕೆಯಿಂದ ಮಕ್ಕಳಲ್ಲಿ ದೃಷ್ಟಿದೋಷ ಸಮಸ್ಯೆ ಎದುರಾಗುತ್ತದೆ. ಪುಸ್ತಕಗಳ ಓದಿನಿಂದ ಮಾತ್ರವೇ ಯಶಸ್ಸು ಸಾಧ್ಯ. ಆದ್ದರಿಂದ ಮೊಬೈಲ್‌ ಬಳಕೆಗೆ ಕಡಿವಾಣ ಹಾಕಲು ಪೋಷಕರು ಗಮನಹರಿಸಬೇಕು ಎಂದರು.

ಗ್ರಾಮೀಣ ವಿದ್ಯಾರ್ಥಿಗಳನ್ನು ವಕೀಲರು, ವೈದ್ಯರು, ಎಂಜಿನಿಯರ್‌ಗಳು, ಸರ್ಕಾರಿ ಅಧಿಕಾರಿಗಳಾಗಿ ದೇಶ ಸೇವೆ ಮಾಡುವಂತೆ ಸಿದ್ಧಗೊಳಿಸಬೇಕು. ಪ್ರಬಲ ಕ್ಷೇತ್ರದ ನಾಯಕರಾಗಿ ರೂಪಿಸಲು ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವಾಗಬೇಕು. ಮಕ್ಕಳಿಗೆ ಶಿಕ್ಷಣ ನೀಡುವುದೆಂದರೆ ದೇಶ ಕಟ್ಟುವ ಕೆಲಸವಾಗಿದೆ ಎಂದು ಬಣ್ಣಿಸಿದರು.

ವಿಶ್ವನಾಥಪುರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ಸಿ. ಬೀರೇಶ್ ಗ್ರಾಮ ಸಭೆಯ ಪ್ರಾಮುಖ್ಯತೆ ಕುರಿತು ವಿವರಿಸಿದರು. ಚಿಕ್ಕೊಒಬ್ಬದೇನಹಳ್ಳಿ ಅಂಗನವಾಡಿ ಮಕ್ಕಳಿಂದ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ವಿದ್ಯಾರ್ಥಿಗಳಾದ ಮಿಲನಾ, ಮೋಹನ್, ಧನ್ಯತಾ ಗೌಡ ಅಧ್ಯಕ್ಷತೆವಹಿಸಿದ್ದರು. ‘ದೇಶಾಭಿಮಾನ’ ಹಾಗೂ ‘ಮಕ್ಕಳ‌ ಹಕ್ಕುಗಳು’ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.

ಗ್ರಾ.ಪಂ. ಅಧ್ಯಕ್ಷೆ ಕಲ್ಪನಾ, ಕಾರ್ಯದರ್ಶಿ ಎಂ. ಪದ್ಮಮ್ಮ, ಸಿಬ್ಬಂದಿ ಚಂದ್ರಶೇಖರ್ ಟಿ.ಎ., ಸದಸ್ಯರಾದ ಶ್ರೀನಿವಾಸ್ ಕೆ., ಭವ್ಯ, ನಾಗಮ್ಮ, ಲಕ್ಷ್ಮೀನರಸಮ್ಮ, ಛಲಪತಿ, ನಾಗರಾಜ್, ಮುಖ್ಯ ಶಿಕ್ಷಕಿ ಗೀತಾ, ಶಿಕ್ಷಕರಾದ ಶೋಭಾ, ರೂಪ, ರವಿಕುಮಾರ್, ಸುಬ್ರಮಣ್ಯ ಉಪಸ್ಥಿತರಿದ್ದರು.

ಅಭಿಮಾನ ಮೆರೆದ ಮಕ್ಕಳು:ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆ ಹಾಡುವಾಗ ತಾಂತ್ರಿಕ ದೋಷದಿಂದ ಅರ್ಧಕ್ಕೆ ಹಾಡು ಸ್ಥಗಿತಗೊಂಡಿತು. ಅಧಿಕಾರಿಗಳು ಅರ್ಧಕ್ಕೆ ಹಾಡು ಮೊಟಕುಗೊಳಿಸಿ ಕಾರ್ಯಕ್ರಮ ಮುಂದುವರಿಸಲು ಮುಂದಾದರು. ಆದರೆ, ನೆರೆದಿದ್ದ ಮಕ್ಕಳು ನಾಡಗೀತೆಯ ಮುಂದುವರಿದ ಭಾಗವನ್ನು ಘಂಟಾಘೋಷದಿಂದ ಹಾಡಿ ಅಧಿಕಾರಿಗಳಿಗೆ ಅವರ ತಪ್ಪಿನ ಬಗ್ಗೆ ಅರಿವು ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT