ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ರೇಷ್ಮೆ ಆವಕ: ಸ್ಥಳೀಯರಿಗೆ ನಷ್ಟ

ದ್ವಿತಳಿ ರೇಷ್ಮೆಗೂಡು ಉತ್ಪಾದನೆಯತ್ತ ಚಿತ್ತಹರಿಸದ ರೈತ, ಚೀನಾ ರೇಷ್ಮೆಗೆ ಬೇಡಿಕೆ
Last Updated 23 ಮೇ 2019, 13:31 IST
ಅಕ್ಷರ ಗಾತ್ರ

ವಿಜಯಪುರ: ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ದ್ವಿತಳಿ ರೇಷ್ಮೆ ಉತ್ಪಾದನೆ ಕುಂಠಿತಗೊಂಡಿದೆ. ಚೀನಾದ ರೇಷ್ಮೆ ಆವಕದಿಂದ ಕೇವಲ ಮಿಶ್ರಿತಳಿ ರೇಷ್ಮೆ ನೆಚ್ಚಿಕೊಂಡಿರುವ ಸ್ಥಳೀಯ ರೈತರಿಗೆ ಭಾರಿ ಹೊಡೆತ ಬೀಳಲಾರಂಭಿಸಿದೆ.

ಭಾರತಕ್ಕೆ ಚೀನಾ ರೇಷ್ಮೆ: ಜಗತ್ತಿನಲ್ಲಿ ಅತಿ ಹೆಚ್ಚು ರೇಷ್ಮೆಗೂಡು ಬೆಳೆಯುವ ರಾಷ್ಟ್ರ ಚೀನಾ. ನಂತರ ಸ್ಥಾನ ಭಾರತಕ್ಕೆ. ಆದರೆ, ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಿಶ್ರತಳಿ ರೇಷ್ಮೆಗೂಡು ಉತ್ಪಾದಿಸಲಾಗುತ್ತಿದೆ. ದ್ವಿತಳಿ ರೇಷ್ಮೆಗೂಡಿನ ಉತ್ಪಾದನೆ ಪ್ರಮಾಣ ತೀರಾ ಕಡಿಮೆ ಇದೆ. ಇದರ ಪರಿಣಾಮವಾಗಿ ಚೀನಾದಿಂದ ದ್ವಿತಳಿ ರೇಷ್ಮೆ ಭಾರತಕ್ಕೆ ಬರಲು ಹೆಬ್ಬಾಗಿಲು ತೆರೆದಂತಾಗಿದೆ. ಇದು ದೇಶದ ರೇಷ್ಮೆಗೂಡು, ಬೇಡಿಕೆ ಇನ್ನಷ್ಟು ಕುಸಿಯಲು ಕಾರಣವಾಗಿದೆ ಎಂದು ವ್ಯಾಪಾರಸ್ಥ ಮಹಬೂಬ್ ಸಾಬ್ ಹೇಳುತ್ತಾರೆ.

ಮಿಶ್ರತಳಿಗೆ ದೇಶದಲ್ಲಷ್ಟೆ ಬೇಡಿಕೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದ್ವಿತಳಿ ರೇಷ್ಮೆಗೂಡಿಗಷ್ಟೇ ಬೇಡಿಕೆ ಇದೆ. ಮಾರುಕಟ್ಟೆ ಬೆಲೆಯೂ ಜಾಸ್ತಿಯಾಗಿದೆ. ಆದರೆ, ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಮಿಶ್ರತಳಿ ರೇಷ್ಮೆಗೆ ದೇಶದಲ್ಲದಷ್ಟೆ ಬೇಡಿಕೆ ಇದೆ. ಬೇರೆಲ್ಲೂ ಇಲ್ಲ ಎನ್ನುವ ವಿಶ್ಲೇಷಣೆ ಅವರದ್ದು.

ವ್ಯತ್ಯಾಸ ಏನು: ದ್ವಿತಳಿ ರೇಷ್ಮೆಗೂಡು ಮಿಶ್ರತಳಿ ರೇಷ್ಮೆಗೂಡಿಗಿಂತಲೂ ಸಣ್ಣದಾಗಿದ್ದರೂ ಗಟ್ಟಿಯಾಗಿರುತ್ತದೆ. ದ್ವಿತಳಿ ರೇಷ್ಮೆಗೂಡಿನ ನೂಲು ಬಿಳುಪು ಬಣ್ಣದಿಂದ ಕೂಡಿದ್ದು, ಮಿಶ್ರತಳಿ ರೇಷ್ಮೆಗೂಡಿನ ನೂಲು ಬಂಗಾರದ ಹೊಳಪಿನ ಬಣ್ಣದಿಂದ ಕೂಡಿರುತ್ತದೆ. ದ್ವಿತಳಿಯ ರೇಷ್ಮೆಗೂಡಿನಲ್ಲಿ ಸುಮಾರು 1,400 ಮೀಟರ್ ಉದ್ದದ ನೂಲು ಇದ್ದರೆ, ಮಿಶ್ರತಳಿಯ ಗೂಡಲ್ಲಿ 900 ಮೀಟರ್‌ನಷ್ಟು ಮಾತ್ರ ನೂಲು ಇರುತ್ತದೆ. ದ್ವಿತಳಿಯ ರೇಷ್ಮೆ ನೂಲನ್ನು ಗೂಡಿನಿಂದ ಬಿಚ್ಚಾಣಿಕೆ ಮಾಡುವಾಗ ತುಂಡಾಗುವುದಿಲ್ಲ. ಮಿಶ್ರತಳಿಯ ಗೂಡಿನಿಂದ ನೂಲು ಬಿಚ್ಚಾಣಿಕೆ ಮಾಡುವಾಗಪದೇ ಪದೇ ತುಂಡಾಗುತ್ತದೆ. ದ್ವಿತಳಿಯ ರೇಷ್ಮೆನೂಲನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಎಲ್ಲ ವಿಧವಾದ ಬಟ್ಟೆಗಳ ತಯಾರಿಕೆಯಲ್ಲೂ ಬಳಸಬಹುದು. ಆದರೆ ಮಿಶ್ರತಳಿ ನೂಲನ್ನು ರೇಷ್ಮೆ ಸೀರೆಯಲ್ಲಿ ಮಾತ್ರ ಬಳಸಬಹುದಾಗಿದೆ.

ದ್ವಿತಳಿ ಬೆಳೆಯಲು ಉತ್ತೇಜನ : ದ್ವಿತಳಿ ರೇಷ್ಮೆಗೂಡಿಗೆ ಪ್ರತಿ ಕೆಜಿಗೆ ₹50‌ ಬೆಂಬಲ ಬೆಲೆ, ಹುಳು ಸಾಕಾಣಿಕೆ ಮನೆ ನಿರ್ಮಿಸಿಕೊಂಡವರಿಗೆ ಸಹಾಯಧನ ಸಿಗಲಿದೆ. ದ್ವಿತಳಿ ರೇಷ್ಮೆಗೂಡನ್ನು ಬೆಳೆದ ರೈತರನ್ನೇ ಆಹ್ವಾನಿಸಿ ಪ್ರತಿವರ್ಷ ಸುಮಾರು 400 ರೈತರಿಗೆ ಅವರಿಂದಲೇ ತರಬೇತಿ ನೀಡಲಾಗುತ್ತಿದೆ. 100 ಮೊಟ್ಟೆಯಷ್ಟು ದ್ವಿತಳಿ ರೇಷ್ಮೆಮೊಟ್ಟೆ ಖರೀದಿಸಿದರೆ ₹1000 ಪ್ರೋತ್ಸಾಹಧನ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT