ಶನಿವಾರ, ಅಕ್ಟೋಬರ್ 31, 2020
20 °C
ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಬೇಡಿಕೆ ಈಡೇರಿಸಲು ಒತ್ತಾಯ

ಕಾರ್ಯಾರಂಭವಾಗದ ಥಿಯೇಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್‌ ಮಾರ್ಗಸೂಚಿ ಅನ್ವಯ ಚಿತ್ರಮಂದಿರಗಳ ಪುನರಾರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದರೂ ವಿತರಕರ ಹಲವು ಬೇಡಿಕೆಗಳು ಈಡೇರದಿರುವುದರಿಂದ ಪಟ್ಟಣದ ಎರಡೂ ಚಿತ್ರಮಂದಿರಗಳು ಗುರುವಾರ ಕಾರ್ಯಾರಂಭ ಮಾಡಲಿಲ್ಲ. 

ಹಲವು ತಿಂಗಳುಗಳ ಬಳಿಕ ಸಿನಿಮಾ ಮಂದಿರಗಳು ಆರಂಭವಾಗುತ್ತಿವೆ. ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಅಂತರ ಕಾಪಾಡಬೇಕು. ಸ್ಯಾನಿಟೈಸರ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆದರೆ, ದುಬಾರಿ ವೆಚ್ಚ ಭರಿಸಿ ಪ್ರದರ್ಶನ ಆರಂಭಿಸಲು ಚಿತ್ರಮಂದಿರಗಳ ಮಾಲೀಕರು ಒಪ್ಪುತ್ತಿಲ್ಲ. ಮತ್ತೊಂದೆಡೆ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ.

‘ನಮ್ಮ ಚಿತ್ರಮಂದಿರದಲ್ಲಿ 750 ಆಸನಗಳ ವ್ಯವಸ್ಥೆಯಿದೆ. ಶೇಕಡ 50ರಷ್ಟು ಮಂದಿಗೆ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಬೇಕಿದೆ. ಇಷ್ಟು ಜನರಿಗೆ ಪ್ರವೇಶ ನೀಡಿದರೆ ನಮ್ಮ ಖರ್ಚುಗಳು ಸರಿದೂಗಿಸಲಿಕ್ಕೆ ಸಾಧ್ಯವಾಗಲ್ಲ. 10 ಪ್ರೇಕ್ಷಕರು ಬಂದರೂ ಸಿನಿಮಾ ಆರಂಭಿಸಬೇಕು. ತಿಂಗಳಿಗೆ ವಿದ್ಯುತ್ ಬಿಲ್ ₹ 50 ಸಾವಿರ ಬರುತ್ತದೆ. ಸ್ಕ್ರೀನ್ ಲೈಟಿಂಗ್‌ಗೆ ₹ 80 ಸಾವಿರ ಖರ್ಚು ಮಾಡಬೇಕು. ಇಲ್ಲಿ ವ್ಯವಸ್ಥಾಪಕರು, ಟಿಕೆಟ್ ಕಲೆಕ್ಟರ್, ಟಿಕೆಟ್ ರಿಸಿವರ್, ಪ್ರೊಜೆಕ್ಟರ್ ಯಂತ್ರ ನಿರ್ವಹಣೆ ತಜ್ಞರು, ಸ್ವಚ್ಛತೆ ನಿರ್ವಹಣೆಗಾರರು ಸೇರಿದಂತೆ ಸಾಕಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಸಂಬಳ ನೀಡುವುದು ಕಷ್ಟ ವಾಗಲಿದೆ’ ಎನ್ನುತ್ತಾರೆ ಚಿತ್ರ ಮಂದಿರದ ಮಾಲೀಕ ಎಂ. ಸತೀಶ್ ಕುಮಾರ್.

‘ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದಿಂದ ರಾಜ್ಯ ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದ್ದೇವೆ. ಚಿತ್ರಮಂದಿರಗಳಿಗೆ ತೆರಿಗೆ ವಿನಾಯಿತಿ ನೀಡಬೇಕು. ವಿದ್ಯುತ್ ಶುಲ್ಕದಲ್ಲೂ ತೆರಿಗೆ ವಿನಾಯಿತಿ ನೀಡಬೇಕು. ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಪ್ರೋತ್ಸಾಹ ಧನ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಲಾಗಿದೆ. ಅವುಗಳು ಈಡೇರಿದರೆ ಮಾತ್ರವೇ ಪ್ರದರ್ಶನ ಆರಂಭಿಸುತ್ತೇವೆ’ ಎನ್ನುತ್ತಾರೆ.

‘ಎಂಟು ತಿಂಗಳ ನಂತರ ಸಿನಿಮಾ ಪ್ರದರ್ಶನ ಆರಂಭವಾಗುತ್ತದೆ ಎನ್ನುವ ಆಸೆಯಿಂದ ಇಲ್ಲಿಗೆ ಬಂದಿದ್ದೆವು. ಥಿಯೇಟರ್‌ ಅನ್ನು ಪುನರಾರಂಭ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಪ್ರೇಕ್ಷಕ ಮಹೇಂದ್ರಕುಮಾರ್ ಬೇಸರ ತೋಡಿಕೊಂಡರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.