ಗುರುವಾರ , ನವೆಂಬರ್ 21, 2019
20 °C

‘ಪೌರಕಾರ್ಮಿಕರನ್ನು ಮನುಷ್ಯರಂತೆ ಕಾಣಿ’

Published:
Updated:
Prajavani

ದೇವನಹಳ್ಳಿ: ಪಟ್ಟಣದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಕುಟುಂಬದ ಸದಸ್ಯರಂತೆ ಕಾಣಬೇಕೆಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಪುರಸಭೆ ಆವರಣದಲ್ಲಿ ನಡೆದ ಆಯುಧಪೂಜೆ ಮತ್ತು ಪೌರಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ‌‌‌‌‌‌ಕೊಳೆತ ತ್ಯಾಜ್ಯ, ಕಸ ಕ್ರೋಡೀಕರಣ ಮತ್ತು ಸಾಗಣೆ, ಚರಂಡಿಗಳ ಸ್ವಚ್ಛತೆ, ಕುಡಿಯುವ ನೀರು ಪೂರೈಕೆಯಲ್ಲಿ ಅವರ ಶ್ರಮ ಶ್ಲಾಘನೀಯ ಎಂದರು. 

ಸಾರ್ವಜನಿಕರ ಉತ್ತಮ ಆರೋಗ್ಯಕ್ಕೆ ಪೌರ ಕಾರ್ಮಿಕರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಅವರನ್ನು ಮನುಷ್ಯರಂತೆ ಕಾಣಬೇಕು. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.

ದೇವನಹಳ್ಳಿ ಪುರಸಭೆ ಪ್ಲಾಸ್ಟಿಕ್ ಮುಕ್ತವಾಗಿ ಮಾದರಿಯಾಗಬೇಕು. ನಗರದ ಚಿಕ್ಕ ಸಿಹಿನೀರಿನ ಕೆರೆ ಅಭಿವೃದ್ಧಿ ಮತ್ತು ವಾಕಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ ಬೈಯಾಪಾದಿಂದ ₹5ಕೋಟಿ ಮಂಜೂರು ಆಗಿದೆ. ಐತಿಹಾಸಿಕ ಕೋಟೆ ಅಭಿವೃದ್ಧಿಗೆ ₹2ಕೋಟಿ, ವಿವಿಧ ಅಭಿವೃದ್ಧಿ ಕಾಮಗಾರಿಗೆ ನಗರೋತ್ಥಾನ ಇಲಾಖೆ ವತಿಯಿಂದ ₹3ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆದರೆ, ಬಿಜೆಪಿ ಸರ್ಕಾರ ಬಂದ ನಂತರ ತಡೆಹಿಡಿಯಲಾಗಿದೆ ಎಂದು ಹೇಳಿದರು. 

ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗ ಘಟಕದ ಉಪಾಧ್ಯಕ್ಷ ಸಿ.ಜಗನ್ನಾಥ್ ಮಾತನಾಡಿ, ‘ನಾನು ಪುರಸಭೆ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಪೌರಕಾರ್ಮಿಕರ ಕೊರತೆ ಇರಲಿಲ್ಲ. ಈಗ ಸಿಬ್ಬಂದಿ ಕೊರತೆ ಶೇ50ರಷ್ಟು ಇದೆ’ ಎಂದು ಹೇಳಿದರು.

ಮುಖಂಡ ಲಕ್ಷ್ಮೀನಾರಾಯಣಪ್ಪ ಮಾತನಾಡಿದರು. ಪೌರ ಅಡಳಿತ ಇಲಾಖೆ ಯೋಜನಾಧಿಕಾರಿ ಸುಮಾ, ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ಕಂದಾಯ ಅಧಿಕಾರಿ ರಾಜೇಂದ್ರ ಇದ್ದರು.

ಪ್ರತಿಕ್ರಿಯಿಸಿ (+)