ಚನ್ನಪಟ್ಟಣ: ಚರಂಡಿ ಸ್ವಚ್ಛಗೊಳಿಸಿದ ಯುವ ಜನರು

7
ಗ್ರಾಮ ಪಂಚಾಯಿತಿಗೆ ಸೆಡ್ಡು ಹೊಡೆದು, ಸ್ವಯಂ ಪ್ರೇರಿತ ಕೆಲಸ

ಚನ್ನಪಟ್ಟಣ: ಚರಂಡಿ ಸ್ವಚ್ಛಗೊಳಿಸಿದ ಯುವ ಜನರು

Published:
Updated:
Deccan Herald

ಚನ್ನಪಟ್ಟಣ: ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದ ಮರಳೇಶ್ವರಸ್ವಾಮಿ ದೇವಸ್ಥಾನದ ಬಳಿಯಲ್ಲಿ ಮುಚ್ಚಿಹೋಗಿದ್ದ ಚರಂಡಿಯನ್ನು ಗ್ರಾಮದ ಯುವಕರು ಸ್ವಚ್ಛ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಈ ರಸ್ತೆಯ ಎರಡೂ ಭಾಗದ ಚರಂಡಿಗಳು ಮುಚ್ಚಿ ಹೋಗಿ ಎರಡು ವರ್ಷ ಕಳೆದಿದ್ದರೂ ಗ್ರಾಮ ಪಂಚಾಯಿತಿ ಯಾವುದೇ ಗಮನ ನೀಡದ ಕಾರಣ ಯುವಕರು ಸ್ವಯಂಪ್ರೇರಿತರಾಗಿ ಚರಂಡಿ ಸ್ವಚ್ಛ ಮಾಡಿದರು.

‘ಎರಡು ವರ್ಷದಿಂದ ಈ ಚರಂಡಿ ಮಣ್ಣಿನಿಂದ ಮುಚ್ಚಿ ಹೋಗಿತ್ತು. ಮಳೆಯ ನೀರು ರಸ್ತೆ ಮಧ್ಯದಲ್ಲಿಯೆ ಹರಿಯುತ್ತಿತ್ತು. ಹಾಗೆಯೇ ಈ ರಸ್ತೆಯ ಮನೆಗಳಿಂದ ಬರುವ ಕೊಚ್ಚೆ ನೀರು ಸಹ ರಸ್ತೆಯಲ್ಲಿಯೇ ಹರಿಯುವಂತಾಗಿತ್ತು. ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ನಾವೇ ಸ್ವಚ್ಛ ಮಾಡುವ ತೀರ್ಮಾನ ಕೈಗೊಳ್ಳಬೇಕಾಯಿತು’ ಎಂದು ಗ್ರಾಮದ ಯುವ ಮುಖಂಡ ಮಹೇಂದ್ರ ತಿಳಿಸಿದರು.

‘ಈ ರಸ್ತೆಯಲ್ಲಿ ಐತಿಹಾಸಿಕ ಮರಳೇಶ್ವರಸ್ವಾಮಿ ದೇವಸ್ಥಾನವಿದೆ. ಚರಂಡಿ ನೀರು ರಸ್ತೆಯಲ್ಲಿ ಹರಿಯುವುದರಿಂದ ಜನರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಜೊತೆಗೆ ಅಲ್ಲಲ್ಲಿ ಚರಂಡಿ ಗಬ್ಬು ನಾರುತ್ತಿತ್ತು. ಇದರಿಂದ ನಿವಾಸಿಗಳಿಗೂ ತೊಂದರೆಯಾಗುತ್ತಿತ್ತು. ಇದರ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ತಿಳಿಸಿದರೆ ಗಮನ ನೀಡಲಿಲ್ಲ. ಇದರಿಂದ ನಾವೇ ಸ್ವಚ್ಛ ಮಾಡುವುದು ಒಳಿತು ಎಂದು ಈ ಕೆಲಸ ಮಾಡಿದ್ದೇವೆ’ ಎಂದು ಮುಖಂಡರಾದ ಈರೇಗೌಡ, ಕಾರ್ತಿಕ್ ತಿಳಿಸಿದರು.

ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಾರೆ. ಎಷ್ಟು ಬಾರಿ ಗಮನ ಸೆಳೆದರೂ ಕೇವಲ ಭರವಸೆ ನೀಡುತ್ತಾರೆ. ಆ ನಂತರ ಅದನ್ನು ಮರೆಯುತ್ತಾರೆ. ಜನಪ್ರತಿನಿಧಿಗಳು ಈ ಬಗ್ಗೆ ಗಮನ ನೀಡುವುದಿಲ್ಲ. ಜನಗಳ ಸಮಸ್ಯೆ ಆಲಿಸದಿದ್ದರೆ ಗ್ರಾಮ ಪಂಚಾಯಿತಿ ಏಕೆ ಬೇಕು ಎಂದು ಗ್ರಾಮದ ಮುಖಂಡ ಕೆ.ಎಸ್.ನಾಗರಾಜು ಪ್ರಶ್ನಿಸಿದರು.

ಗ್ರಾಮೀಣ ಭಾಗದ ಚರಂಡಿಗಳನ್ನು ಸ್ವಚ್ಛ ಮಾಡಲು ಸರ್ಕಾರದಿಂದ ಪ್ರತಿ ವರ್ಷ ಅನುದಾನ ಬರುತ್ತದೆ. ಇದನ್ನು ಗ್ರಾಮ ಪಂಚಾಯಿತಿ ಬಳಕೆ ಮಾಡುತ್ತಿಲ್ಲ. ಕೋಡಂಬಹಳ್ಳಿಯಲ್ಲಿ ಚರಂಡಿ ಸ್ವಚ್ಛ ಮಾಡಿ ವರ್ಷಗಳೇ ಕಳೆದು ಹೋಗಿವೆ. ಆದರೆ, ಅನುದಾನ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಗ್ರಾಮ ಪಂಚಾಯಿತಿ ಮಾಹಿತಿ ನೀಡಬೇಕೆಂದು ಗ್ರಾಮದ ಕರೀಗೌಡ ಒತ್ತಾಯಿಸಿದರು.
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !