ಶನಿವಾರ, ನವೆಂಬರ್ 23, 2019
18 °C
ಕೃಷಿ ಮಾರಾಟ ಇಲಾಖೆ ನಿರ್ದೇಶಕ ಸಿ.ಎಸ್.ಕರೀಗೌಡ ಮನವಿ

ನೀಲಗಿರಿ ತೆರವುಗೊಳಿಸಿ ಶ್ರೀಗಂಧದ ನಾಡು ರಕ್ಷಿಸಿ

Published:
Updated:

ದೊಡ್ಡಬಳ್ಳಾಪುರ: ನಮ್ಮ ಜಿಲ್ಲೆ ಸೇರಿದಂತೆ ಶ್ರೀಗಂಧದ ನಾಡು ಎನಿಸಿಕೊಂಡಿರುವ ಕನ್ನಡ ನಾಡನ್ನು ನಾವು ನೀಲಗಿರಿ ನಾಡನ್ನಾಗಿಸಿದ್ದೇವೆ. ಪರಿಸರಕ್ಕೆ ಮಾರಕವಾಗಿರುವ ನೀಲಗಿರಿ ತೆರವು ಮಾಡಿ, ನೀರು ಹಾಗೂ ಪರಿಸರವನ್ನು ಉಳಿಸುವ ಪ್ರತಿಜ್ಞೆಯನ್ನು ರಾಜ್ಯೋತ್ಸವ ಸಂದರ್ಭದಲ್ಲಿ ಕೈಗೊಳ್ಳಬೇಕಿದೆ ಎಂದು ಕೃಷಿ ಮಾರಾಟ ಇಲಾಖೆ ನಿರ್ದೇಶಕ ಸಿ.ಎಸ್.ಕರೀಗೌಡ ಹೇಳಿದರು.

ನಗರದ ಡಾ.ರಾಜ್‌ಕುಮಾರ್ ಕಲಾಮಂದಿರದಲ್ಲಿ ಶ್ರೀ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಹಾಗೂ ಸಂಘದ 50ನೇ ವಾಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಬೆಂಗಳೂರು ಗ್ರಾಮಾಂತರದ ಜನ ಕಾವೇರಿ ನೀರಿಗೆ ಆಸೆ ಪಡುವುದಕ್ಕಿಂತ ಮಳೆ ನೀರು ಸಂಗ್ರಹಸಿದರೆ ಸ್ವಾವಲಂಬಿಗಲಾಗಬಹುದು. ಇದಕ್ಕೆ ನಗರದಲ್ಲಿ ಸಾಕಷ್ಟು ಜನ ಮಳೆ ನೀರು ಸಂಗ್ರಹ ಮಾಡಿಕೊಂಡು ಸ್ವಾವಲಂಬಿಗಳಾಗಿದ್ದಾರೆ ಎಂದರು.

ಶ್ರೀಭುವನೇಶ್ವರಿ ಕನ್ನಡ ಸಂಘ 50ವರ್ಷ ಪೂರೈಸಿರುವುದು ಶ್ಲಾಘನೀಯ. ನಾಡು ನುಡಿಯ ಮೇಲೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಬಿಜೆಪಿ ಹಿರಿಯ ಮುಖಂಡ ಕೆ.ಎಂ.ಹನುಮಂತರಾಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡಪರ, ರೈತಪರ ಹಾಗೂ ದಲಿತಪರ ಸಂಘಟನೆಗಳು ಈ ನಾಡಿನ ಸಮಸ್ಯೆಗಳಿಗೆ ಹೋರಾಟ ನಡೆಸುವ ಮೂಲಕ ತಮ್ಮದೇ ಆದ ಕೊಡುಗೆ ನೀಡಿವೆ. ರಾಜಕೀಯ ಏನೇ ಇದ್ದರೂ ಕನ್ನಡದ ನಾಡು ನುಡಿ ವಿಚಾರ ಬಂದಾಗ ಪ್ರತಿಯೊಬ್ಬ ಕನ್ನಡಿಗರೂ ಸಹ ಸಂಘಟಿತರಾಗುವ ಅಗತ್ಯವಿದೆ. ಕನ್ನಡಪರ ಹೋರಾಟಗಳಲ್ಲಿ ಮೊಕದ್ದಮೆಗಳನ್ನು ಹಾಕಿಸಿಕೊಂಡಿರುವವರು ಇಂದಿಗೂ ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ. ವ್ಯವಸ್ಥೆ ಕನ್ನಡಪರವಾಗಿರಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯ ಮಾತನಾಡಿ, ಕನ್ನಡ ಚಳವಳಿಗೆ ಹಾಗೂ ಹೋರಾಟಗಳಿಗೆ ದೊಡ್ಡಬಳ್ಳಾಪುರ ಮಹತ್ತರವಾದ ಕೊಡುಗೆ ನೀಡಿದೆ.ಸ್ಥಳೀಯರಿಗೆ ಬದುಕು ಕಟ್ಟಿಕೊಡುವ ಕೆಲಸ ಇಲ್ಲಿನ ಸಂಘಟನೆಗಳು ಮಾಡುತ್ತಿರುವುದು ಅಭಿನಂದನೀಯ ಎಂದರು.

ಪ್ತಾಸ್ತಾವಿಕವಾಗಿ ಮಾತನಾಡಿದ ಭುವನೇಶ್ವರಿ ಕನ್ನಡ ಸಂಘದ ಸಲಹೆಗಾರ ಟಿ.ಎನ್.ಪ್ರಭುದೇವ್, 50 ವರ್ಷಗಳಿಂದ ಭುವನೇಶ್ವರಿ ಕನ್ನಡ ಸಂಘ ಹಲವಾರು ಕನ್ನಡಪರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಜನಮನ್ನಣೆ ಗಳಿಸಿದೆ. ನ 10ರವರೆಗೆ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ, ಯಕ್ಷಗಾನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಮಾರಂಭದಲ್ಲಿ ತಾಲ್ಲೂ ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್, ಹಿರಿಯ ಕನ್ನಡಪರ ಹೋರಾಟಗಾರ ಜಿ. ಸತ್ಯನಾರಾಯಣ್, ಕನ್ನಡ ಜಾಗೃತ ಪರಿಷತ್‌ ಅಧ್ಯಕ್ಷ ಡಿ.ವಿ.ಅಶ್ವತ್ಥಪ್ಪ, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರಮೀಳಾಮಹದೇವ್, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಬಿ.ಜಿ.ಅಮರ್‌ನಾಥ್, ತಾಲ್ಲೂಕು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಪಿ.ನವೀನ್, ಗೌರವ ಅಧ್ಯಕ್ಷ ಪುಟ್ಟಪ, ಉಪಾಧ್ಯಕ್ಷ ಎನ್.ಎ.ನವೀನ್‌ಕುಮಾರ್, ಕಾರ್ಯದರ್ಶಿ ಸು.ವೆಂಕಟೇಶ್, ಖಜಾಂಚಿ ಎನ್. ಲಕ್ಷ್ಮೀನಾರಾಯಣ್‌ ಇದ್ದರು. ಕಾರ್ಯದರ್ಶಿ ಅಂಗವಾಗಿ ಬಾಶೆಟ್ಟಿಹಳ್ಳಿಯ ಮಂಜುನಾಥ್ ಕಲಾತಂಡದಿಂದ ಕನ್ನಡ ಗೀತೆಗಳಿಗೆ ನೃತ್ಯ ಕಾರ್ಯಕ್ರಮ ನಡೆಯಿತು.

ಪ್ರತಿಕ್ರಿಯಿಸಿ (+)