ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ

Last Updated 15 ಸೆಪ್ಟೆಂಬರ್ 2022, 4:37 IST
ಅಕ್ಷರ ಗಾತ್ರ

ವಿಜಯಪುರ(ಬೆಂ.ಗ್ರಾಮಾಂತರ): ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಮ್ಮಸಂದ್ರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬುಧವಾರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. 15 ಶಾಲೆಗಳಿಂದ 280ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

ಪ್ರತಿಭಾ ಕಾರಂಜಿ ಅಂಗವಾಗಿ ಶಾಲೆಯ ಆವರಣವನ್ನು ತಳಿರುತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ವಿದ್ಯಾರ್ಥಿಗಳು ಛದ್ಮವೇಷ, ಕ್ಲೇ ಮಾಡೆಲಿಂಗ್, ಆಶುಭಾಷಣ ಸ್ಪರ್ಧೆ, ಕಂಠಪಾಠ ಸ್ಪರ್ಧೆ, ಧಾರ್ಮಿಕ ಪಠಣ, ಲಘು ಸಂಗೀತ, ಕಥೆ ಹೇಳುವುದು, ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ, ಅಭಿನಯ ಗೀತೆ, ಭಕ್ತಿಗೀತೆ, ಆಶುಭಾಷಣ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಪೋಷಕರು ತಮ್ಮ ಮಕ್ಕಳನ್ನು ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಸಿದ್ಧಗೊಳಿಸಿ ಕರೆದುಕೊಂಡು ಬಂದಿದ್ದರು. ಶಾಲಾ ಶಿಕ್ಷಕರು ಮಕ್ಕಳಿಗೆ ಸ್ಪರ್ಧಿಸುವಂತೆ ಕೊನೆ ಕ್ಷಣದಲ್ಲೂ ಕೂಡ ತರಬೇತಿ ನೀಡುತ್ತಿದ್ದ ದೃಶ್ಯಗಳು ಕಂಡುಬಂದವು.

ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆನಂದಮ್ಮ ಮಂಜುನಾಥ್ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಗಳನ್ನು ಹೊರಗೆ ತರಲಿಕ್ಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಹೆಚ್ಚು ಸಹಕಾರಿಯಾಗುತ್ತವೆ. ಪ್ರತಿಭೆಯನ್ನು ಆರಂಭದಲ್ಲೆ ಗುರುತಿಸುವುದರಿಂದ ಅವರನ್ನು ಉತ್ತಮ ಕಲಾವಿದರನ್ನಾಗಿ ರೂಪಿಸಲು ಸಾಧ್ಯವಾಗುತ್ತದೆ. ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಸಿ. ಬಸವರಾಜ್ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಗಳು ಕಾರಂಜಿಯಂತಾಗಬೇಕು. ವಿವಿಧ ಸ್ಪರ್ಧೆಗಳನ್ನು ಇಲ್ಲಿ ಆಯೋಜನೆ ಮಾಡಲಾಗುತ್ತದೆ. ಮಕ್ಕಳಿಗೆ ಅಗತ್ಯವಾದ ತಯಾರಿಯನ್ನು ಸರ್ಕಾರ ಮಾಡುತ್ತಿದೆ. ಮಕ್ಕಳು ಆಗಾಧವಾದ ಪ್ರತಿಭೆಗಳನ್ನು ತಮ್ಮ ಒಡಲಲ್ಲಿಟ್ಟುಕೊಂಡಿದ್ದಾರೆ. ಅವುಗಳನ್ನು ಹೊರಗೆ ತರಲಿಕ್ಕೆ ಪ್ರತಿಭಾ ಕಾರಂಜಿಯು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.

ನಾರಾಯಣಪುರ ಶಾಲೆಯ ಮುಖ್ಯಶಿಕ್ಷಕ ಚಂದ್ರಶೇಖರ ಹಡಪದ್ ಮಾತನಾಡಿ, ಕೇರಳ ರಾಜ್ಯದಲ್ಲಿ ಪ್ರಖ್ಯಾತವಾಗಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸರ್ಕಾರ ರಾಜ್ಯದಲ್ಲಿ ಪರಿಚಯ ಮಾಡಿದ ನಂತರ ಹಲವಾರು ಪ್ರತಿಭೆಗಳು ಹೊರಗೆ ಬರಲಿಕ್ಕೆ ಸಾಧ್ಯವಾಗಿದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ಸಾಹಿತ್ಯ, ಸಂಸ್ಕೃತಿಯು ಮೇಳೈಸಲು ಸಾಧ್ಯವಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್, ಮುರಳಿ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಪಿ.ಎಂ. ಕೋಟ್ರೇಶ್, ಪ್ರಾಥಮಿಕ ಶಿಕ್ಷಣ ಸಂಘದ ಜಿಲ್ಲಾ ಸಮಿತಿ ಉಪಾಧ್ಯಕ್ಷ ನಾಗೇಶ್, ಸಿ.ಆರ್.ಪಿ. ಮುನಿಯಪ್ಪ, ರವೀಂದ್ರ, ಮುಖ್ಯಶಿಕ್ಷಕರಾದ ರಾಜೇಶ್ವರಿ, ಗಿರಿಜಾಂಬ ರುದ್ರೇಶ್ ಮೂರ್ತಿ, ರಾಜಶೇಖರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ನಂಜೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT