ಗುರುವಾರ , ನವೆಂಬರ್ 21, 2019
20 °C

ದೇವನಹಳ್ಳಿಯಲ್ಲಿ ಕೆಐಎಡಿಬಿ ಕಚೇರಿ ಆರಂಭ

Published:
Updated:
Prajavani

ದೇವನಹಳ್ಳಿ‌: ಇಲ್ಲಿನ ಟಿಪ್ಪು ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎದುರು ಕೆಐಎಡಿಬಿ ಕಚೇರಿ ಕಾರ್ಯಾರಂಭ ಮಾಡಿದೆ ಎಂದು ವಿಶೇಷ ಭೂಸ್ವಾಧೀನಾಧಿಕಾರಿ –2 ಪಿ.ವಿ.ಪೂರ್ಣಿಮಾ ಹೇಳಿದರು.

ಕಚೇರಿಯಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ‘2014‌ರಲ್ಲಿ ದೇವನಹಳ್ಳಿ ತಾಲ್ಲೂಕಿನ ನಾಗನಾಯಕನಹಳ್ಳಿ, ಪಾಳ್ಯ, ಪೋಲನಹಳ್ಳಿ, ಮುದ್ದೇನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಭೂಸ್ವಾಧೀನ ಮಾಡಲಾಗಿದೆ. ಈ ಪೈಕಿ 593 ಎಕರೆ ಸರ್ಕಾರಿ ಜಾಗ, 609 ಎಕರೆ ರೈತರ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಒಳಗೊಂಡಿದೆ. ಒಟ್ಟು 1202 ಎಕರೆಯಾಗಿದೆ. ಒಟ್ಟು 20 ವಿವಿಧ ದಾಖಲೆಗಳನ್ನು ಭೂಮಿ ಕಳೆದುಕೊಳ್ಳುತ್ತಿರುವ ರೈತರು ನೀಡಿ ಪರಿಹಾರ ಧನ ಪಡೆದುಕೊಳ್ಳಬೇಕು’ ಎಂದು ಹೇಳಿದರು.

‘ರೈತರ ಭೂಮಿಯ ನೈಜತೆ, ಅನುಭವ ಪ್ರಮಾಣ ಪತ್ರ, ವಂಶವೃಕ್ಷ, ಜಮೀನಿಗೆ ಸಂಬಂಧಿಸಿದ ಹಕ್ಕುದಾರರ ಬಗ್ಗೆ ಕಂದಾಯ ಇಲಾಖೆ ನೀಡುವ ದಾಖಲಾತಿ ಪರಿಗಣಿಸಲಾಗುತ್ತದೆ. ಪ್ರಸ್ತುತ ಹರಳೂರು ಗ್ರಾಮ ವ್ಯಾಪ್ತಿಯಲ್ಲಿನ ಜಮೀನುಗಳಿಗೆ ಪ್ರತಿ ಎಕರೆಗೆ ₹ 1.5 ಕೋಟಿ, ಇತರ ಗ್ರಾಮಗಳ ವ್ಯಾಪ್ತಿಯಲ್ಲಿನ ಜಮೀನುಗಳಿಗೆ ₹ 1.10 ಕೋಟಿ ನೀಡುವ ಅವಕಾಶವಿದೆ’ ಎಂದು ಹೇಳಿದರು.

‘ಸ್ಥಳೀಯ ರೈತರು ಬೆಂಗಳೂರಿನ ಕೆಐಎಡಿಬಿ ಕೇಂದ್ರ ಕಚೇರಿಗೆ ಕುಟುಂಬ ಸಮೇತರಾಗಿ ಬರಲು ಸಮಸ್ಯೆಯಾಗುತ್ತಿತ್ತು. ಇಲ್ಲಿ ಕಚೇರಿ ಆರಂಭವಾಗಿರುವುದು ಕಂದಾಯ ಇಲಾಖೆ ಸಂಪರ್ಕ ಮಾಡಲು ಮತ್ತು ಅಗತ್ಯ ಮಾಹಿತಿ ಪಡೆಯಲು ಸುಲಭವಾಗಲಿದೆ. ರೈತರನ್ನು ಅಲೆದಾಡಿಸದೆ ತ್ವರಿತವಾಗಿ ಅರ್ಹ ರೈತರ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಹಣ ಸಂದಾಯವಾಗಲಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಕಚೇರಿ ಕಾರ್ಯ ನಿರ್ವಹಿಸಲಿದ್ದು ರೈತರು ಹೆಚ್ಚಿನ ಮಾಹಿತಿಗೆ ಕಚೇರಿ ಸಮಯದಲ್ಲಿ ಬಂದು ಸಮಸ್ಯೆಗಳ ಪರಿಹಾರಕ್ಕೆ ಮಾಹಿತಿ ಪಡೆಯಬಹುದು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)