ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರಿಹಾರ: 30ರ ಒಳಗೆ ಅರ್ಜಿ ಸಲ್ಲಿಸಿ

ದೊಡ್ಡಬಳ್ಳಾಪುರ: ನೇಕಾರರಿಗೆ ಜವಳಿ ಇಲಾಖೆ ಉಪನಿರ್ದೇಶಕ ಗಂಗಯ್ಯ ಸೂಚನೆ
Last Updated 19 ಜೂನ್ 2020, 7:07 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೇಕಾರ ಕೂಲಿ ಕಾರ್ಮಿಕರಿಗೆ ನೀಡಲಾಗುವ ಪರಿಹಾರ ಧನ ಪಡೆಯಲು ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಿದೆ. ತಾಲ್ಲೂಕಿನಲ್ಲಿ 25ಕ್ಕೂ ಹೆಚ್ಚು ಸೈಬರ್ ಕೇಂದ್ರಗಳಲ್ಲಿ ದತ್ತಾಂಶ ನಮೂದು ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಗಂಗಯ್ಯ ಹೇಳಿದರು.

ನಗರದ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ನಡೆದ ನೇಕಾರರ ಸಭೆಯಲ್ಲಿ ಅವರು ಮಾತನಾಡಿದರು.

ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರಿಕೆ ಚಟುವಟಿಕೆಯಲ್ಲಿ ತೊಡಗಿರುವ ಕೂಲಿ ಕಾರ್ಮಿಕರಿಗೆ ನೇರವಾಗಿ ಆಧಾರ್ ಲಿಂಕ್ ಹೊಂದಿರುವ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ಪಾವತಿಸಲು ಸರ್ಕಾರದ ಆದೇಶವಾಗಿದೆ. ಅರ್ಹ ನೇಕಾರರು ಸೇವಾ ಸಿಂಧುವಿನಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.

ಘಟಕದ ಮಾಲೀಕರಿಂದ ನಿಗದಿಪಡಿಸಿದ ನಮೂನೆಯಲ್ಲಿ ಮುಚ್ಚಳಿಕೆ ಪತ್ರದೊಂದಿಗೆ ಆಧಾರ್ ಕಾರ್ಡ್, ಡಿ.ಬಿ.ಟಿಗೆ ಬಳಕೆ ಮಾಡಲು ಕಾರ್ಮಿಕರ ಒಪ್ಪಿಗೆ ಪತ್ರ, ವಿದ್ಯುತ್ ಮಗ್ಗ ಘಟಕದ ಮುಂದೆ ಕಾರ್ಯನಿರ್ವಹಿಸುತ್ತಿರುವ ಫಲಾನುಭವಿಗಳ ಪೋಟೋ, ಘಟಕದ ವಿದ್ಯುತ್ ಸಂಪರ್ಕ ಹೊಂದಿರುವ ಆರ್.ಆರ್.ಸಂಖ್ಯೆಯ ವಿದ್ಯುತ್ ಬಿಲ್, ಬಾಡಿಗೆ ಅಥವಾ ಲೀಸ್ ದಾಖಲಾತಿ, ಘಟಕದ ಉದ್ಯೋಗ್ ಆಧಾರ್ ಅಥವಾ ಪರವಾನಗಿ ಪತ್ರ, ಲಭ್ಯವಿದ್ದಲ್ಲಿ ನೇಕಾರರ ವಿವರಗಳನ್ನೊಳಗೊಂಡ ಮಜೂರಿ ಪಾವತಿಯ ಪ್ರತಿಗಳನ್ನು ಅರ್ಜಿಯೊಂದಿಗೆ
ಜೂನ್‌ 30ರ ಒಳಗೆ ಸಲ್ಲಿಸಬೇಕು’ ಎಂದರು.

ಸಭೆಯಲ್ಲಿ ಹಾಜರಿದ್ದ ನೇಕಾರರ ಮುಖಂಡರು ಮಾತನಾಡಿ, ‘ಸರ್ಕಾರ ನೀಡುವ 2 ಸಾವಿರ ಯಾವುದಕ್ಕೂ ಸಾಲದು. ಸರ್ಕಾರ ಅರ್ಜಿ ಸಲ್ಲಿಕೆ ನಿಯಮಗಳನ್ನು ಸಡಿಲಗೊಳಿಸಬೇಕು. ಆರ್.ಆರ್.ಸಂಖ್ಯೆಯ ವಿದ್ಯುತ್ ಬಿಲ್ ಒಬ್ಬರ ಹೆಸರಿನಲ್ಲಿದ್ದು, ಮಗ್ಗಗಳು ಇನ್ನೊಬ್ಬರ ಹೆಸರಿನಲ್ಲಿದ್ದರೆ ಅರ್ಜಿ ಸಲ್ಲಿಸಲು ಗೊಂದಲವಾಗುತ್ತದೆ. ಅರ್ಜಿ ಸಲ್ಲಿಸಲು ಸೈಬರ್ ಕೇಂದ್ರಗಳಲ್ಲಿ ಹೆಚ್ಚಿನ ಹಣ ಪಡೆಯುತ್ತಾರೆ,. ಆದ್ದರಿಂದ ಇಲಾಖೆಯ ವತಿಯಿಂದಲೇ ವ್ಯವಸ್ಥೆ ಮಾಡಿ ಸರ್ಕಾರದ ನೆರವು ಎಲ್ಲಾ ನೇಕಾರರಿಗೂ ತಲುಪಬೇಕಿದೆ’ ಎಂದರು.

ಸಭೆಯಲ್ಲಿ ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು, ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್, ಟಿಎಂಸಿ ಬ್ಯಾಂಕ್ ಅಧ್ಯಕ್ಷ ಕೆ.ಪಿ.ವಾಸುದೇವ್, ಕನ್ನಡ ಪಕ್ಷದ ಅಧ್ಯಕ್ಷ ಎಂ.ಸಂಜೀವ್‌ನಾಯಕ್, ಮಹಿಳಾ ಮುಖಂಡರಾದ ವತ್ಸಲಾ, ಗಿರಿಜಾ ಸೇರಿದಂತೆ ವಿವಿಧ ನೇಕಾರರ ಸಂಘದ ಸದಸ್ಯರು ಹಾಗೂ ನೇಕಾರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT