ಶನಿವಾರ, ಡಿಸೆಂಬರ್ 7, 2019
25 °C

ಸ್ವಾಭಿಮಾನಕ್ಕಾಗಿ ಸ್ಪರ್ಧೆ: ಶರತ್ ಬಚ್ಚೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ‘ನಾನು ತಾಲ್ಲೂಕಿನ ಸ್ವಾಭಿಮಾನಕ್ಕಾಗಿ ಚುನಾವಣೆಗೆ ನಿಲ್ಲುತ್ತಿದ್ದೇನೆ’ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಶರತ್ ಬಚ್ಚೇಗೌಡ ತಿಳಿಸಿದರು.

ಅವರು ತಾಲ್ಲೂಕಿನ ಉಪ್ಪಾರಹಳ್ಳಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

‘ಸುಪ್ರೀಂ ಕೋರ್ಟ್‌ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ನಾನು ಯಾರ ವಿರುದ್ದವೂ ಚುನಾವಣೆಗೆ ನಿಲ್ಲುತ್ತಿಲ್ಲ’ ಎಂದರು.

‘ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಹ್ವಾನ ಬಂದರೂ ಸ್ವತಂತ್ರವಾಗಿ ಕಣಕ್ಕಿಳಿಯುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ನನ್ನನ್ನು ಬಿಜೆಪಿಯ ರಾಜ್ಯ ಮಟ್ಟದ ನಾಯಕರು ಮಾತನಾಡಿಸಿಲ್ಲ. ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ನನ್ನನ್ನು ವೈಯಕ್ತಿಕವಾಗಿ ಮಾತನಾಡಿಸಿಲ್ಲ. ನಾನು ಮಾಧ್ಯಮಗಳಲ್ಲಿ ಈ ಬಗ್ಗೆ ಕೇಳಿದ್ದೇನೆ. ಎಂ.ಟಿ.ಬಿ ನಾಗರಾಜ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಪಕ್ಷದ ಮುಖಂಡರು ತಿಳಿಸಿಲ್ಲ. ಹಾಗೆ ಹೇಳಿದಾಗ ನಾವು ನಮ್ಮ ತೀರ್ಮಾನ ಮತ್ತು ನಮ್ಮ ನಡೆಯನ್ನು ನಿರ್ಧರಿಸುತ್ತೇವೆ’ ಎಂದು ತಿಳಿಸಿದರು.

ಎಂ.ಟಿ.ಬಿ ನಾಗರಾಜ್ ಅವರ ಬಹಿರಂಗ ಚರ್ಚೆಯ ಆಹ್ವಾನಕ್ಕೆ ಪ್ರತಿಕ್ರಿಯಿಸಿ, ‘ಬಿ.ಎನ್. ಬಚ್ಚೇಗೌಡರು ರಾಜ್ಯ ಮಟ್ಟದ ನಾಯಕರು. ಅವರನ್ನು ಈ ವಿಷಯಕ್ಕೆ ತರುವುದು ಬೇಡ. ಆದರೆ, ನಾನು ಚರ್ಚೆಗೆ ಸಿದ್ಧ’ ಎಂದರು.

14ರಂದು ನಾಮಪತ್ರ ಸಲ್ಲಿಸಲಾಗುವುದು. ತಾಲ್ಲೂಕಿನ ಎಲ್ಲ ಹೋಬಳಿಗಳಿಂದ 30 ಸಾವಿರಕ್ಕೂ ಹೆಚ್ಚು ಜನ ಬರುತ್ತಾರೆ ಎಂದರು.

‘ನಾಗರಾಜ್ ರಿಯಲ್ ಎಸ್ಟೇಟ್ ವ್ಯಾಪಾರಿಯಾಗಿದ್ದು ಎಲ್ಲರಿಗೂ ಬೆಲೆ ಕಟ್ಟುತ್ತಾರೆ. ನನ್ನನ್ನೂ ಸೇರಿಸಿ ಮತದಾರರಿಗೂ ಬೆಲೆ ಕಟ್ಟಿದ್ದಾರೆ. ಈ ಬಾರಿಯ ಐತಿಹಾಸಿಕ ಚುನಾವಣೆಯಲ್ಲಿ ಜನರು ಅವರಿಗೆ ಬುದ್ಧಿ ಕಲಿಸಬೇಕು’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು