ಸೋಮವಾರ, ನವೆಂಬರ್ 18, 2019
23 °C

’ಸಾರ್ವಜನಿಕರ ದೂರಿಗೆ ಕ್ರಮ ಖಚಿತ’

Published:
Updated:
Prajavani

ದೇವನಹಳ್ಳಿ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ನಿರ್ಭಯವಾಗಿ ದೂರು ಸಲ್ಲಿಸಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ವೆಂಕಟೇಶ್ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ‘ಅಧಿಕಾರಿಗಳು ತಮ್ಮ ಬಳಿ ಬರುವ ಸಾರ್ವಜನಿಕರ ಸಮಸ್ಯೆಗಳಿಗೆ ಸಕಾಲದಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸಿದರೆ ಲೋಕಾಯುಕ್ತ ಬಳಿ ದೂರುಗಳು ಬರುವುದಿಲ್ಲ. ಉದ್ದೇಶಪೂರ್ವಕವಾಗಿ ವಿಳಂಬ ಮಾಡುವುದು, ಸಬೂಬು ಹೇಳಿಕೊಂಡು ಕಾಲಹರಣ ಮಾಡುವುದು, ಪ್ರಭಾವಿಗಳ ಒತ್ತಡಕ್ಕೆ ಮಣಿದು ಅರ್ಹರಿಗೆ ಅನ್ಯಾಯ ಮಾಡುವುದು, ಮಾಹಿತಿ ಹಕ್ಕು ಅಡಿ ಅರ್ಜಿ ಸಲ್ಲಿಸಿದರೂ ವಿಳಂಬ ಮಾಡುವುದು, ತಪ್ಪು ಮಾಹಿತಿ ನೀಡುವುದು, ಜಿಲ್ಲೆಯಲ್ಲಿ ಕಂಡು ಬರುತ್ತಿದೆ' ಎಂದರು.

‘ಕೆಲವು ಇಲಾಖೆಗಳ ಅಧಿಕಾರಿಗಳು ಮಹಿಳೆಯರು, ವಯೋವೃದ್ಧರು ಎಂದು ತ್ವರಿತವಾಗಿ ಕೆಲಸ ಮಾಡದೆ ಮಾನವೀಯತೆ ಮರೆತಿದ್ದಾರೆ. ಅಹವಾಲು ಪಡೆದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಪೊಲೀಸ್ ಇನ್‌ಸ್ಪೆಕ್ಟರ್‌ ಶಿವರಾಜ್ ಮಾತನಾಡಿ, ‘ಪ್ರಸ್ತುತ 15 ದೂರುಗಳು ಸಲ್ಲಿಕೆಯಾಗಿವೆ. ಜಾಗ ಒತ್ತುವರಿ, ಸ್ಮಶಾನ ಅತಿಕ್ರಮಣ, ಕಾನೂನು ಮೀರಿ ಖಾತೆ ಪಹಣಿ ದಾಖಲೆಯಲ್ಲಿ ಬೇರೆಯವರ ಹೆಸರು, ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ಮುಂತಾದ ದೂರುಗಳಿವೆ. ಐದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಐದು ಪ್ರಕರಣಗಳನ್ನು ಸ್ಥಳದಲ್ಲೆ ಇತ್ಯರ್ಥಪಡಿಸಲಾಗಿದೆ. ಐದು ಪ್ರಕರಣ ಕುರಿತು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ’ ಎಂದು ಹೇಳಿದರು.

ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ ಸಿದ್ದರಾಜ್ ಶೆಟ್ಟಿ, ಕಾನ್‌ಸ್ಟೆಬಲ್‌ಗಳಾದ ನಾಗೇಶ್, ಸುಧಾಕರ್, ಪ್ರದೀಪ್, ತಹಶೀಲ್ದಾರ್ ಅಜಿತ್ ಕುಮಾರ್ ರೈ, ಕಂದಾಯ ಶಿರಸ್ತೇದಾರ್ ಚಂದ್ರಶೇಖರ್ ಇದ್ದರು.

ಪ್ರತಿಕ್ರಿಯಿಸಿ (+)