ಗುರುವಾರ , ಜೂನ್ 24, 2021
23 °C
ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಇದ್ದರೂ ಬಳಕೆಯಾಗುತ್ತಿಲ್ಲ: ಆರೋಪ

ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆಯನ್ನು ಬದಲಾಯಿಸಿ ಗುಣಮಟ್ಟದ ಚಿಕಿತ್ಸೆ ದೊರೆಯುವಂತಾಗಬೇಕು ಮತ್ತು ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಿ ಮನಸೋ ಇಚ್ಛೆ ಬಿಲ್‌ಗಳನ್ನು ನೀಡುತ್ತಿವೆ ಎಂದು ಆರೋಪಿಸಿ ದಲಿತ ಮತ್ತು ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದಿಂದ ಆನೇಕಲ್‌ನ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಂಘಟನೆಯ ಮುಖಂಡ ಸಿ.ರಾವಣ ಮಾತನಾಡಿ, ‘ಕೊರೊನಾ ಎರಡನೇ ಅಲೆಯನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆನೇಕಲ್‌ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳಿದ್ದರೂ ಅವು ಬಳಕೆಯಾಗದೇ ಜನರಿಗೆ ಸೌಲಭ್ಯ ದೊರೆಯುತ್ತಿಲ್ಲ. ಖಾಸಗಿ ಆಸ್ಪತ್ರೆಗಳು ಸಾಮಾನ್ಯ ರೋಗಿಗಳಿಗೂ ₹ 4-5ಲಕ್ಷ ಬಿಲ್‌ ಮಾಡಿ ಜನಸಾಮಾನ್ಯರನ್ನು ಶೋಷಣೆ ಮಾಡುತ್ತಿದೆ. ಸೌಲಭ್ಯ ನೀಡಬೇಕಾದ ಸರ್ಕಾರ ಈ ಬಗ್ಗೆ ಗಮನ ಹರಿಸದೇ ಕಣ್ಮುಚ್ಚಿ ಕುಳಿತಿದೆ. ಸರ್ಕಾರದ ವೈಫಲ್ಯದಿಂದಾಗಿ ಜನಸಾಮಾನ್ಯರು ಚಿಕಿತ್ಸೆಯಿಲ್ಲದೇ ಸಾಯುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಆರೋಪಿಸಿದರು.

ಆನೇಕಲ್‌ ತಾಲ್ಲೂಕಿನಲ್ಲಿ ಐದು ದಿನದೊಳಗೆ ಸಮಸ್ಯೆಗೆ ಪರಿಹಾರ ಕಂಡು ಹಿಡಿದು ಜನರಿಗೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಸಂಘಟನೆಗಳು ಕರ್ಫ್ಯೂವನ್ನು ಲೆಕ್ಕಿಸದೇ ಬೀದಿಗಿಳಿದು ಹೋರಾಟ ಮಾಡಲಿವೆ ಎಂದು ತಿಳಿಸಿದರು.

ಮುಖಂಡ ಗೌತಮ್‌ ವೆಂಕಿ ಮಾತನಾಡಿ, ‘ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ನೆಪದಲ್ಲಿ ದಂದೆ ನಡೆಯುತ್ತಿದೆ. ರೋಗಿಯೊಬ್ಬರಿಗೆ ಒಂದು ದಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಕ್ಕೆ ಯಾವುದೇ ಚಿಕಿತ್ಸೆ ನೀಡದೇ ಅಂದಾಜು ₹2ಲಕ್ಷ ಬಿಲ್‌ ಮಾಡಿದ್ದಾರೆ. ಬೆಡ್‌ಗಳು ಮತ್ತು ಸೂಕ್ತ ಸಮಯಕ್ಕೆ ಆಮ್ಲಜನಕ ಸಿಗದೇ ಜನರು ಪ್ರಾಣಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

ಜೀವರಕ್ಷಕ ಔಷಧಿಗಳು ಅವಶ್ಯಕತೆಯಿರುವವರಿಗೆ ದೊರೆಯುವಂತಾಗಬೇಕು. ಔಷಧಿಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ಇವುಗಳನ್ನು ತಡೆಯಬೇಕು. ಆಮ್ಲಜನಕ, ಔಷಧಿಗಳು ಸಮರ್ಪಕವಾಗಿ ದೊರೆಯುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದರು.

ಹೋರಾಟಗಾರ್ತಿ ಮಮತಾ ಮಾತನಾಡಿ, ತಜ್ಞರು ಸರ್ಕಾರಕ್ಕೆ ಕೊರೊನಾ ಎರಡನೇ ಅಲೆಯ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಸರ್ಕಾರ ಕೈಚೆಲ್ಲಿದೆ. ಜೀವ ಮತ್ತು ಜೀವನ ನಮ್ಮ ಕೈಯಲಿಲ್ಲ. ಸರ್ಕಾರದ ಕೈಯಲ್ಲಿದೆ. ಸರಿಯಾದ ಸಮಯಕ್ಕೆ ಆಮ್ಲಜನಕ ಪೂರೈಕೆಯಾಗದೇ ಚಾಮರಾಜನಗರದಲ್ಲಿ ಜನರು ಸತ್ತಿದ್ದಾರೆ. ಅವಶ್ಯಕವಿರುವವರಿಗೆ ಮಾರ್ಗದರ್ಶನ ನೀಡಿ ಹೋಂ ಕ್ವಾರೆಂಟೈನ್‌ ಮಾಡಬೇಕು. ಉಸಿರಾಟದ ತೊಂದರೆಯಿರುವವರಿಗೆ ಐಸಿಯು ಬೆಡ್‌ ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಸುರೇಶ್ ಪೋತಾ, ಆನಂದ ಚಕ್ರವರ್ತಿ, ವಿಜಯಕುಮಾರಿ, ವೆಂಕಟೇಶ ಮೂರ್ತಿ, ನಾಗರಾಜ ಮೌರ್ಯ, ಗೋವಿಂದ್, ಶಂಕರ್‌ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು